Advertisement

ತೆರಿಗೆ ಗಡುವು ಮುಗಿದ ಮರುದಿನವೇ ನೋಟಿಸ್‌

12:15 PM Mar 14, 2017 | |

ಬೆಂಗಳೂರು: ಮಾರ್ಚ್‌ 31ರ ಒಳಗೆ ಆಸ್ತಿ ತೆರಿಗೆ ಪಾವತಿಸದವರಿಗೆ ಏಪ್ರಿಲ್‌ 1ರಿಂದಲೇ ವಾರಂಟ್‌ ಜಾರಿಗೊಳಿಸಿ ಚರಾಸ್ತಿಗಳನ್ನು ಜಪ್ತಿ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ತೆರಿಗೆ ಬಾಕಿದಾರರಿಗೆ ವಾರಂಟ್‌ ಜಾರಿ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ತಿಳಿಸಿದ್ದಾರೆ. 

Advertisement

ಬಜೆಟ್‌ ಪೂರ್ವಭಾವಿಯಾಗಿ ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಪೌರಧಿಸಭಾಂಗಣದಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು ಆಯುಕ್ತರು, “ಪಾಲಿಕೆಯಲ್ಲಿ ಜಿಐಎಸ್‌ ವ್ಯವಸ್ಥೆ ಜಾರಿಗೊಳಿಸಿದರಿಂದ ಸುಮಾರು 19 ಲಕ್ಷ ಆಸ್ತಿಗಳು ಪತ್ತೆಯಾದವು. ಇದರಿಂದ ಅಧಿಕಾರಿಗಳು ಮೊಬೈಲ್‌ ಮೂಲಕವೇ ತಾವು ನಿಂತಿರುವ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾರು ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ತಿಳಿಯಬಹುದು.  

ಆನಂತರ ನೋಟಿಸ್‌ ನೀಡಿ ಆಸ್ತಿದಾರರು 15 ದಿನಗಳೊಳಗೆ ತೆರಿಗೆ ಪಾವತಿಸದಿದ್ದರೆ, ವಾರಂಟ್‌ ಜಾರಿಗೊಳಿಸಿ ಚರಾಸ್ತಿಗಳನ್ನು ಜಪ್ತಿ ಮಾಡಿ ಹರಾಜು ಮಾಡಬಹುದು. ತಮ್ಮ ಅಧಿಕಾರಿವನ್ನು ಬಳಸಿಕೊಳ್ಳದ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು,” ಎಂದು ಹೇಳಿದರು.

“ಜಿಐಎಸ್‌ ವ್ಯವಸ್ಥೆಯಿಂದ ನಗರದಲ್ಲಿರುವ ಎಲ್ಲ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರಲಿವೆ. ಮುಂದಿನ ದಿನಗಳಲ್ಲಿ ಪಾಲಿಕೆಯ ಎಲ್ಲ ಸದಸ್ಯರಿಗೆ ಜಿಐಎಸ್‌ ವ್ಯವಸ್ಥೆ ಮೂಲಕ ಯಾರು ಆಸ್ತಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ತಿಳಿಯುವ ವ್ಯವಸ್ಥೆ ಮಾಡಿಕೊಡಲಾಗುವುದು. ಇದರಿಂದ ಸದಸ್ಯರೇ ಅಧಿಕಾರಿಗಳನ್ನು ಪ್ರಶ್ನಿಸಬಹುದು,” ಎಂದರು. 

ಜಾಹಿರಾತು ಲಾಭ ಪಡೆಯಲು ತಿದ್ದುಪಡಿ ಆಗಬೇಕು
“ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆ ಸೇರಿದಂತೆ ಹಲವಾರು ಭಾಗಗಳಲ್ಲಿ ಕಟ್ಟಡದ ನಡುಜಾಗ ಮತ್ತು ಬಹುಮಹಡಿ ಕಟ್ಟಡಗಳ ತಾರಸಿ ಭಾಗವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಮಾಲೀಕರು ತಿಂಗಳಿಗೆ 2-ಧಿ3 ಲಕ್ಷ ಬಾಡಿಗೆ ಪಡೆಯುತ್ತಿದ್ದಾರೆ. ಕೆಎಂಸಿ ಕಾಯ್ದೆಯಲ್ಲಿ ಇಂತಹ ಭಾಗಗಳಿಗೆ ತೆರಿಗೆ ವಿಧಿಸಲು ಅವಕಾಶವಿಲ್ಲ. ಇದರಿಂದ ಪಾಲಿಕೆಗೆ ಕೋಟ್ಯಂತರ ರೂ. ಆದಾಯ ನಷ್ಟವಾಗುತ್ತಿದೆ.

Advertisement

ಹೀಗಾಗಿ ಇಂತಹ ಪ್ರದೇಶಗಳಿಗೆ ತೆರಿಗೆ ವಿಧಿಸಲು ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಬೇಕು,” ಎಂದು ಕಾಂಗ್ರೆಸ್‌ ಸದಸ್ಯ ಸಂಪತ್‌ ಕುಮಾರ್‌ ತಿಳಿಸಿದರು. ಆಡಳಿತ ಪಕ್ಷದ ನಾಯಕ ರಿಜಾನ್‌ ನವಾಬ್‌, ಸದಸ್ಯರಾದ ಕಟ್ಟೆ ಸತ್ಯನಾರಾಯಣ, ಉಮೇಶ್‌ ಶೆಟ್ಟಿ, ಡಾ. ರಾಜು, ಮೋಹನ್‌ ರಾಜ್‌, ಆನಂದಕುಮಾರ್‌, ಲತಾ, ರೂಪಾ, ಪೂರ್ಣಿಮಾ ಶ್ರೀನಿವಾಸ್‌, ಚಂದ್ರಕಲಾ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿ ಸಲಹೆ ನೀಡಿದರು.

ಕೆಸಿಡಿಸಿ ಬಂದ್‌ ಎಚ್ಚರಿಕೆ: ಶಾಸಕ ಸತೀಶ್‌ ರೆಡ್ಡಿ
ನ‌ಗರದ ಹಸಿ ತ್ಯಾಜ್ಯದ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, 100 ಟನ್‌ ಬದಲಿಗೆ 400 ಟನ್‌ ತ್ಯಾಜ್ಯ ಬರುತ್ತಿದೆ. ತ್ಯಾಜ್ಯವನ್ನು ಘಟಕದ ಹೊರಗೆ ಸುರಿಯುತ್ತಿರುವುದರಿಂದ ದುರ್ವಾಸನೆ ಹೆಚ್ಚುತ್ತಿದ್ದು, ಸ್ಥಳೀಯರು ಘಟಕ ಸ್ಥಗಿತಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ. ಈ ಹಿಂದೆ ಸೂಚಿಸಿದಂತೆ ಪ್ರತಿದಿನ 100 ಟನ್‌ ಕಸವನ್ನು ಮಾತ್ರ ಈ ಘಟಕಕ್ಕೆ ರವಾನೆ ಮಾಡಬೇಕು. ಈ ವಿಷಯದಲ್ಲಿ ಎಚ್ಚರಿಕೆ ವಹಿಸದಿದ್ದರೆ, ಘಟಕ ಬಂದ್‌ ಆಗುವ ಸಾಧ್ಯತೆಯಿದೆ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಎಚ್ಚರಿಕೆ ನೀಡಿದರು. 

ಕ್ಷೇತ್ರವಾರು “ಖಾತಾ ಮೇಳ’
“ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ನೀಡಲಾಗಿದೆ. ಆದರೆ, ಅವರಿಗೆ ಖಾತಾ ಮಾಡಿಕೊಡಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಖಾತಾ ಮಾಡಿಕೊಡುವುದರಿಂದ ಅವರು ತೆರಿಗೆ ವ್ಯಾಪ್ತಿಗೆ ಬರಲಿದ್ದು, ಹಂತ ಹಂತವಾಗಿ ಅವರು ತೆರಿಗೆ ಪಾವತಿಸಲು ಸಹ ಸಿದ್ಧರಿದ್ದಾರೆ,” ಎಂಬ ಸಲಹೆಗಳು ಬಿಬಿಎಂಪಿಯಲ್ಲಿ ಬಹುತೇಕ ಎಲ್ಲ ವಾರ್ಡ್‌ಗಳ ಸದಸ್ಯರಿಂದ ಕೇಳಿಬಂದವು. ಇದಕ್ಕೆ ಉತ್ತರಿಸಿದ ಮೇಯರ್‌ ಪದ್ಮಾವತಿ “”ಬಿಬಿಎಂಪಿ ಬಜೆಟ್‌ ಮುಗಿದ ಕೂಡಲೇ ಕ್ಷೇತ್ರವಾರು ಕೊಳಗೇರಿಗಳಲ್ಲಿ ಖಾತಾ ಮೇಳ ಆಯೋಜಿಸಲಾಗುವುದು,” ಎಂದು ಭರವಸೆ ನೀಡಿದರು. 

ಗೊತ್ತಿಲ್ಲ ಎಂದು ಹೇಳುವಂತಿಲ್ಲ
ಓಎಫ್ಸಿ ಕೇಬಲ್‌ ಅಳವಡಿಕೆಗೆ ರಾತ್ರಿ ವೇಳೆ ರಸ್ತೆ ಅಗೆಯಲಾಗುತ್ತಿದೆ. ವಾರ್ಡ್‌ ಎಂಜಿನಿಯರ್‌ಗಳಿಗೆ ಕೇಳಿದರೆ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ ಎಂದು ಪಾಲಿಕೆ ಸದಸ್ಯರು ದೂರಿದರು. ಇದಕ್ಕೆ ಉತ್ತರಿಸಿದ ಆಯುಕ್ತರು, “ಪಾಲಿಕೆಯಲ್ಲಿ ರಸ್ತೆ ಅಗೆತಕ್ಕೆ ಆನ್‌ಲೈನ್‌ ಮೂಲಕ ಅನುಮತಿ ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಿದ ಕೂಡಲೇ ಅದು ಪೊಲೀಸ್‌, ಬಿಬಿಎಂಪಿ ಇಲಾಖೆಯ ಅಧಿಕಾರಿಗಳಿಗೆ ರವಾನೆಯಾಗಲಿದೆ.

ಅವರು ಸಮ್ಮತಿ ಸೂಚಿಸಿದ ಬಳಿಕ, ಅರ್ಜಿ ವಾರ್ಡ್‌ ಎಂಜಿನಿಯರ್‌ಗೆ ಹೋಗುತ್ತದೆ. ಅವರು ರಸ್ತೆ ಅಗೆತಕ್ಕೆ ಅನುಮತಿ ನೀಡಿದರೆ ಮಾತ್ರ ಕೇಂದ್ರ ಕಚೇರಿಯಿಂದ ಅನುಮತಿ ನೀಡಲಾಗುತ್ತದೆ. ಹಾಗಾಗಿ ಎಂಜಿನಿಯರ್‌ಗಳು ಮಾಹಿತಿಯಿಲ್ಲ ಎಂದು ಹೇಳುವಂತಿಲ್ಲ ಎಂದು ಪಾಲಿಕೆ ಆಯುಕ್ತ ಮಂಜುನಾಥ್‌ ಪ್ರಸಾದ್‌ ಎಚ್ಚರಿಸಿದರು. 

ಮನರಂಜನೆ, ವಿಲಾಸಿ ತೆರಿಗೆ ಸಿಗಲಿ
ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, “ಸರ್ಕಾರಕ್ಕೆ ನಗರದಿಂದ ಮನರಂಜನಾ ತೆರಿಗೆ ರೂಪದಲ್ಲಿ 200 ಕೋಟಿ ರೂ., 504 ಕೋಟಿ ರೂ.ಗಳಷ್ಟು ವೃತ್ತಿ ತೆರಿಗೆ ಮತ್ತು 321 ಕೋಟಿ ರೂ.ಗಳಷ್ಟು ವಿಲಾಸಿ ತೆರಿಗೆ ಸಂಗ್ರಹವಾಗುತ್ತಿದೆ. ತಮಿಳುನಾಡು ಮಾದರಿ ಈ ಮೂರು ತೆರಿಗೆಗಳನ್ನು ಸ್ಥಳೀಯ ಆಡಳಿತಕ್ಕೆ ಸರ್ಕಾರ ನೀಡಿದರೆ ಬಿಬಿಎಂಪಿ ಆದಾಯ ಹೆಚ್ಚಲಿದೆ,” ಎಂದು ಸಲಹೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next