ಕಾಸರಗೋಡು: ಬೇಟೆಗಾರ ನೋರ್ವ ಸಕಲ ಆಯುಧಗಳೊಂದಿಗೆ ಬೇಟೆಯಾಡುವಂತೆ ಪತ್ರಿಕೋದ್ಯಮ ಬದಲಾಗುವುದನ್ನು ಸಮಾಜ ನಿರೀಕ್ಷಿಸು ವುದಿಲ್ಲ. ಸುದ್ದಿಗಳನ್ನು ವಸ್ತುನಿಷ್ಠವಾಗಿ, ಸತ್ಯಕ್ಕೆ ಪುಟವಿಟ್ಟಂತೆ ಪ್ರಸ್ತುತಪಡಿಸುವ ನಿಷ್ಠೆಯು ಸುದ್ದಿಗಳ ಹಿಂದು ಮುಂದುಗಳನ್ನರಿತು ಅಗತ್ಯವಿದ್ದಷ್ಟನ್ನು ನೀಡುವ ಜವಾಬ್ದಾರಿಯನ್ನರಿತು ಓದುಗರಿಗೆ ನೀಡಬೇಕು ಎಂದು ಕೇಂದ್ರೀಯ ವಿ.ವಿ.ಯ ಉಪಕುಲಪತಿ ಡಾ| ಜಿ. ಗೋಪಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.ಕೇರಳ ಜರ್ನಲಿಸ್ಟ್ ಯೂನಿಯನ್ (ಕೆಜೆಯು) ಕಾಸರಗೋಡು ಜಿಲ್ಲಾ ಸಮಿತಿ ಬೇಕಲ ಪಳ್ಳಿಕೆರೆಯಲ್ಲಿರುವ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಕರ್ತರ ಸಮಾವೇಶ ಮತ್ತು ಜಿಲ್ಲಾ ಸಮಿತಿಯ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸುದ್ದಿಗಳನ್ನು ಶೋಧಿಸಿ ನೈಜತೆಯನ್ನು ಪ್ರತಿಬಿಂಬಿಸುವ ಧನಾತ್ಮಕ ಅಂಶಗಳನ್ನು ತಿಳಿಸುವ ಯತ್ನಗಳನ್ನು ಮಾಧ್ಯಮಗಳು ನಿರ್ವಹಿಸಬೇಕು. ಬದಲಾಗುತ್ತಿರುವ ಇಂದಿನ ಸಮೂಹ ಮಾಧ್ಯಮಗಳು ಪೈಪೋಟಿಗಿಳಿದು ಸ್ವತರ್ಕದಿಂದ ಏಕಪಕ್ಷೀಯವಾಗಿ ನಿರ್ಧರಿಸಿ ಹರಿಯ ಬಿಡುವ ಸುದ್ದಿಗಳು ಸಾಮಾಜಿಕ ಅಧಃಪತನಕ್ಕೆ ಕಾರಣವಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ತಿಳಿಸಿದ ಅವರು, ಸಂವಿಧಾನದ ನಾಲ್ಕನೇ ಅಂಗವೆಂದು ಕರೆಯಲ್ಪಡುವ ಮಾಧ್ಯಮ ರಂಗ ಸಾಮಾಜಿಕ ಅಸ್ಥಿರತೆಗೆ ಕಾರಣವಾಗದಿರಲಿ ಎಂದು ತಿಳಿಸಿದರು.ಕೇರಳ ಜರ್ನಲಿಸ್ಟ್ ಯೂನಿಯನ್ ರಾಜ್ಯ ಸಮಿತಿ ಕಾರ್ಯದರ್ಶಿ ಸಿ.ಕೆ. ನಾಝರ್ ಕಾಂಞಿಂಗಾಡ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ಸಿಮಿಜನ್ ಆಲ್ವಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸೈಬರ್ ಯುಗದ ಮಾಧ್ಯಮ ಎಂಬ ವಿಷಯದ ಬಗ್ಗೆ ಸೈಬರ್ ಸೆಲ್‌ನ ಅಧಿಕಾರಿ ರವೀಂದ್ರನ್ ಮಡಿಕೈ ಹಾಗೂ ಸಂಘಟನಾ ವಿಚಾರಗಳು ಮತ್ತು ಸಂಘಟನಾ ಕಾರ್ಯಚಟುವಟಿಕೆಗಳ ಬಗ್ಗೆ ಜೋಸ್ ತೆಯ್ಯಿಲ್ ವಿಶೇಷೋಪನ್ಯಾಸ ನೀಡಿದರು.
ಪತ್ರಕರ್ತರಾದ ಶಿವದಾಸ ರಾಜಪುರ ಹಾಗು ಪ್ರಸಾದ್ ಭೀಮನಡಿಯವರಿಗೆ 2016ನೇ ಸಾಲಿನ ಅತ್ಯುತ್ತಮ ವರದಿಗಾರಿಕೆಗಳಿಗೆ ನೀಡಲಾಗುವ ಪ್ರಶಸ್ತಿ ನೀಡಿ ಈ ಸಂದರ್ಭ ಗೌರವಿಸಲಾಯಿತು.ಇಂಡಿಯನ್ ಜರ್ನಲಿಸ್ಟ್ ಯೂನಿಯನ್(ಐಜೆಯು) ರಾಷ್ಟ್ರೀಯ ಸಮಿತಿ ಸದಸ್ಯ ಶ್ರೀಮೂಲಂ ಮೋಹನ್‌ದಾಸ್ ಉಪಸ್ಥಿತರಿದ್ದು ಸದಸ್ಯತ್ವ ವಿತರಣೆ ಮಾಡಿದರು. ಅನ್ವರ್ ಕೋಳಿಯಡ್ಕ, ಕೆಜೆಯು ಕಣ್ಣೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿ ಆಲಕ್ಕೋಡು, ರಾಜ್ಯ ಕಾರ್ಯದರ್ಶಿ ಪ್ರಕಾಶನ್ ಪಯ್ಯನ್ನೂರು, ಹರೂನ್ ಚಿತ್ತಾರಿ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಟಿ.ಪಿ. ರಾಘವನ್ ವೆಳ್ಳರಿಕುಂಡ್ ಸ್ವಾಗತಿಸಿ, ಫೈಸಲ್ ರಹಮಾನ್ ವಂದಿಸಿದರು. ಬಳಿಕ ಕೆಜೆಯು ಜಿಲ್ಲಾ ಸಮಿತಿಯ ಮಹಾಸಭೆ ನಡೆದು ನೂತನ ಸಮಿತಿಯನ್ನು ಪುನಾರಚಿಸಲಾಯಿತು. ಟಿ.ಪಿ. ರಾಘವನ್(ಅಧ್ಯಕ್ಷ), ಪ್ರತಿಭಾ ರಾಜನ್ (ಉಪಾಧ್ಯಕ್ಷ), ಫಸಲ್ ರಹಮಾನ್ (ಪ್ರಧಾನ ಕಾರ್ಯದರ್ಶಿ), ಅಬ್ದುಲ್ಲ ಕುಂಬಳೆ (ಜತೆ ಕಾರ್ಯದರ್ಶಿ), ಪುರುಷೋತ್ತಮ ಭಟ್ ಕೆ. (ಕೋಶಾಧಿಕಾರಿ) ಹಾಗೂ ಅನ್ವರ್ ಸದಾತ್, ಶೆರೀಫ್, ರವೀಂದ್ರನ್, ಪ್ರಸಾದ್, ಹರೂನ್ ಚಿತ್ತಾರಿ, ವಿಜಯರಾಜ್ ಅವರನ್ನು ಸದಸ್ಯರಾಗಿ ಸರ್ವಾನುಮತದಿಂದ ಆಯ್ಕೆಮಾಡಲಾಯಿತು.