Advertisement
ಉಪ್ಪಿನಂಗಡಿ ಸಿ.ಎ.ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುವೀರ್ ರಾವ್ ಅವರ ಪತ್ನಿ ರೇವತಿ ಹಲ್ಲೆಗೊಳಗಾದವರು. ಅವರು ಬಚ್ಚಲು ಮನೆಯಲ್ಲಿ ಬೆಂಕಿ ಹಾಕಲೆಂದು ತೆಂಗಿನಗರಿ ಹಿಡಿದುಕೊಂಡು ಮುಂಬಾಗಿಲ ಮೂಲಕ ಒಳಬರುತ್ತಿದ್ದಂತೆ ಸುಮಾರು 25ರಿಂದ 30 ವರ್ಷ ಪ್ರಾಯದ ಯುವಕ ಮನೆಯೊಳಗೆ ಪ್ರವೇಶಿಸಿದ್ದಾನೆ. ಯಾರು ನೀನು ಎಂದು ರೇವತಿ ಪ್ರಶ್ನಿಸುತ್ತಿದ್ದಂತೆಯೇ, ಆತ ಮಹಿಳೆಯ ಕತ್ತು ಅಮುಕಿ, ಸಮೀಪದಲ್ಲಿದ್ದ ಟೂತ್ ಪೇಸ್ಟ್ ಅನ್ನು ಬಾಯಿಗೆ ತುರುಕಿ ಬೊಬ್ಬೆ ಹೊಡೆಯಬಾರದೆಂದು ಬೆದರಿಸಿದ. ನನ್ನನ್ನು ಕೊಲ್ಲಬೇಡ. ನಿನಗೆ ಏನು ಬೇಕೋ ಅದನ್ನು ತೆಗೆದುಕೊಂಡು ಹೋಗು ಎಂದು ಮಹಿಳೆ ಬೇಡಿಕೊಂಡಾಗ, ಚಿನ್ನಾಭರಣ ಬೇಡ; ಹಣ ಕೊಡು ಎಂದು ಹೇಳಿದ. ಕೊಡುತ್ತೇನೆಂದು ಮಹಿಳೆ ಆತನಿಂದ ಬಿಡಿಸಿಕೊಂಡು ಕೋಣೆಯೊಳಗೆ ಹೋದರು. ಅಷ್ಟರಲ್ಲಿ ಏನಾಯಿತೋ ಗೊತ್ತಿಲ್ಲ – ಆತ ಸಮೀಪದ ಕಾಡಿನತ್ತ ಓಡಿ ಹೋದ. ಹಲ್ಲೆ ನಡೆಸುವ ವೇಳೆ ಆತನಲ್ಲಿ ಕೊಡೆ ಮಾತ್ರ ಇತ್ತು. ಯಾವುದೇ ಆಯುಧ ಕಾಣಿಸುತ್ತಿರಲಿಲ್ಲ ಎಂದು ಮಹಿಳೆ ತಿಳಿಸಿದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಎಸ್ಸೆ„ ನಂದಕುಮಾರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಸುಮಾರು 5 ವರ್ಷಗಳ ಹಿಂದೆ ಹಾಡಹಗಲೇ ನಡೆದಿದ್ದ, ಇಂದಿಗೂ ಪೊಲೀಸರಿಗೆ ಭೇದಿಸಲಾಗದ ಪುಷ್ಪಲತಾ ಕೊಲೆ ಪ್ರಕರಣಕ್ಕೆ ಸಾಮ್ಯತೆ ಇರುವಂತೆ ನಡೆದ ಈ ಘಟನೆಯಲ್ಲಿ ದುಷ್ಕರ್ಮಿ ಓಡಿ ಹೋಗಲು ಕಾರಣವೇನು ಎಂಬುದು ನಿಗೂಢವಾಗಿದೆ. ಯಾರೋ ಬಂದಂತೆ ಭಾಸವಾಗಿರುವ ಹಿನ್ನೆಲೆಯಲ್ಲಿ ಆತ ಪರಾರಿಯಾಗಿರಬೇಕು ಎಂದು ಶಂಕಿಸಲಾಗಿದೆ. ಈ ಮನೆಯ ಸುತ್ತಮುತ್ತ ಬೇರೆ ಮನೆಗಳಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಪುಷ್ಪಲತಾ ಪ್ರಕರಣದಲ್ಲೂ ಹಂತಕ ಚಿನ್ನಾಭರಣವನ್ನು ಒಯ್ದಿರಲಿಲ್ಲ ಎಂಬುದು ಪ್ರಕರಣದ ಬಗ್ಗೆ ಕುತೂಹಲ ಮೂಡುವಂತಾಗಿದೆ.