Advertisement

ಮಹಿಳಾ ಲೀಗ್‌ನ ನವತಾರೆ ವಿಂಡೀಸ್‌ನ ಹ್ಯಾಲೀ ಮ್ಯಾಥ್ಯೂಸ್‌

08:38 PM Mar 07, 2023 | Team Udayavani |

ಮುಂಬೈ: ಬಾರ್ಬಡೋಸ್‌ನ 24 ವರ್ಷದ ಆಲ್‌ರೌಂಡರ್‌ ಹ್ಯಾಲಿ ಮ್ಯಾಥ್ಯೂಸ್‌ ಚೊಚ್ಚಲ ವನಿತಾ ಪ್ರೀಮಿಯರ್‌ ಲೀಗ್‌’ನ ಸ್ಟಾರ್‌ ಆಟಗಾರ್ತಿಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಬ್ಯಾಟಿಂಗ್‌ ಜತೆಗೆ ಬೌಲಿಂಗ್‌ನಲ್ಲೂ ಅತ್ಯಂತ ಘಾತಕವಾಗಿ ಪರಿಣಮಿಸುವ ಅವರು ಮುಂಬೈನ ಎರಡೂ ಗೆಲುವುಗಳಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ.
ಗುಜರಾತ್‌ ಎದುರಿನ ಆರಂಭಿಕ ಪಂದ್ಯದಲ್ಲಿ 31 ಎಸೆತಗಳಿಂದ 47 ರನ್‌ (3 ಬೌಂಡರಿ, 4 ಸಿಕ್ಸರ್‌), ಆರ್‌ಸಿಬಿ ವಿರುದ್ಧ ಕೇವಲ 38 ಎಸೆತಗಳಿಂದ ಅಜೇಯ 77 ರನ್‌ (13 ಬೌಂಡರಿ, 1 ಸಿಕ್ಸರ್‌) ಜತೆಗೆ 3 ವಿಕೆಟ್‌ ಉರುಳಿಸಿದ ಸಾಧನೆ ಮ್ಯಾಥ್ಯೂಸ್‌ ಅವರದು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಹ್ಯಾಲಿ ಮ್ಯಾಥ್ಯೂಸ್‌, ನಮ್ಮದು ಸ್ಟಾರ್‌ ಆಟಗಾರ್ತಿಯರಿಂದ ಕಿಕ್ಕಿರಿದಿರುವ ತಂಡ. ಹೀಗಾಗಿ ನನಗೆ ಅಗ್ರ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಲು ಸಂಪೂರ್ಣ ಸ್ವಾತಂತ್ರ್ಯ ಲಭಿಸಿದೆ’ ಎಂದರು.

Advertisement

“ದೊಡ್ಡ ಮೊತ್ತ ದಾಖಲಿಸುವ ನಿಟ್ಟಿನಲ್ಲಿ ನಾನು ಕಳೆದ ಕೆಲವು ವಾರಗಳಿಂದ ಕಠಿಣ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದೆ. ಇದು ಇಲ್ಲಿ ಫ‌ಲ ಕೊಡುವ ಲಕ್ಷಣ ಕಂಡುಬಂದಿದೆ. ವಿಶ್ವಕಪ್‌ ವೇಳೆ ದಕ್ಷಿಣ ಆಫ್ರಿಕಾದ ಟ್ರ್ಯಾಕ್‌ಗಳು ಅತ್ಯಂತ ನಿಧಾನಗತಿಯಿಂದ ಕೂಡಿದ್ದವು. ಆದರೆ ಮುಂಬೈ ಪಿಚ್‌ ಬ್ಯಾಟಿಂಗ್‌ ಯೋಗ್ಯವಾಗಿದೆ. ನನ್ನ ಶೈಲಿಯ ಆಟಕ್ಕೆ ಅತ್ಯಂತ ಸೂಕ್ತವಾಗಿದೆ. ಹೀಗಾಗಿ ಆತ್ಮವಿಶ್ವಾಸ ಸಹಜವಾಗಿಯೇ ಹೆಚ್ಚಿದೆ’ ಎಂಬುದಾಗಿ ಹ್ಯಾಲಿ ಮ್ಯಾಥ್ಯೂಸ್‌ ಹೇಳಿದರು.

ಬ್ಯಾಟಿಂಗ್‌ಗೆ ಇದೊಂದು ಅತ್ಯುತ್ತಮ ಅಂಕಣ. 170ರಿಂದ 180ರಷ್ಟು ಮೊತ್ತವನ್ನು ಧಾರಾಳವಾಗಿ ಪೇರಿಸಬಹುದು. ಹಾಗೆಯೇ ಇದನ್ನು ಹೆಚ್ಚಿನ ಒತ್ತಡವಿಲ್ಲದೆ ಬೆನ್ನಟ್ಟಲೂಬಹುದು…’ ಎಂದರು. ನನ್ನನ್ನು ಆಲ್‌ರೌಂಡರ್‌ ಎಂದು ಪರಿಗಣಿಸಿ ತಂಡಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಮುಂಬೈ ತಂಡದಲ್ಲಿ ಬಹಳ ದೊಡ್ಡ ಬೌಲಿಂಗ್‌ ಲೈನ್‌ಅಪ್‌ ಇದೆ. ಮೊದಲ ಪಂದ್ಯದಲ್ಲಿ ನನ್ನ ಅಗತ್ಯ ಕಂಡುಬರಲಿಲ್ಲ. ಆರ್‌ಸಿಬಿ ವಿರುದ್ಧ ನೇರವಾಗಿ ಬೌಲಿಂಗ್‌ ಆರಂಭಿಸುವ ಅವಕಾಶ ಕೊಟ್ಟರು. 3 ವಿಕೆಟ್‌ ಕೀಳಲು ಯಶಸ್ವಿಯಾದೆ’ ಎಂಬುದಾಗಿ ಬಲಗೈ ಆಫ್ಸ್ಪಿನ್ನರ್‌ ಹ್ಯಾಲಿ ಮ್ಯಾಥ್ಯೂಸ್‌ ಖುಷಿಯಿಂದ ಹೇಳಿದರು.

ಹ್ಯಾಲೀ ತಂದೆ ತೆಂಡುಲ್ಕರ್‌, ಮುಂಬೈ ಅಭಿಮಾನಿ
ಈ ಸಂದರ್ಭದಲ್ಲಿ ಹ್ಯಾಲಿ ಮ್ಯಾಥ್ಯೂಸ್‌ ಮುಂಬೈ ಇಂಡಿಯನ್ಸ್‌ ತಂಡದ ಮೇಲಿನ ಅಭಿಮಾನದ ಕುರಿತು ಹೇಳಿಕೊಂಡರು. ನನ್ನ ತಂದೆ ಮೊದಲ ಐಪಿಎಲ್‌ ಸೀಸನ್‌ನಿಂದಲೂ ಮುಂಬೈ ಇಂಡಿಯನ್ಸ್‌ ತಂಡದ ದೊಡ್ಡ ಅಭಿಮಾನಿ. ಕಾರಣ, ಸಚಿನ್‌ ತೆಂಡುಲ್ಕರ್‌. ಅವರು ತೆಂಡುಲ್ಕರ್‌ ಅವರ ಬಹು ದೊಡ್ಡ ಅಭಿಮಾನಿ’ ಎಂದರು.

ಹುಡುಗರ ತಂಡದ ನಾಯಕಿ!
ಎಂಟರ ಹರೆಯದಲ್ಲೇ ಕ್ರಿಕೆಟ್‌ ಹುಚ್ಚು ಅಂಟಿಸಿಕೊಂಡ ಹ್ಯಾಲೀ ಮ್ಯಾಥ್ಯೂಸ್‌, ಬಾರ್ಬಡಾಸ್‌ ಅ-13 ಹುಡುಗರ ತಂಡದ ನಾಯಕಿಯಾಗಿದ್ದರು ಎಂಬುದು ಸ್ವಾರಸ್ಯಕರ ಸಂಗತಿ! 2016ರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ 45 ಎಸೆತಗಳಿಂದ 66 ರನ್‌ ಬಾರಿಸಿ ವೆಸ್ಟ್‌ ಇಂಡೀಸ್‌ ಜಯಭೇರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಮರೆಯುವಂತಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next