Advertisement

ಬಿಜೆಪಿಯಲ್ಲೂ ಹೊಸ ರಾಜ್ಯಾಧ್ಯಕ್ಷರ ನೇಮಕ ಚರ್ಚೆ

06:45 AM Aug 07, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಹೊಸ ರಾಜ್ಯಾಧ್ಯಕ್ಷ ನೇಮಕದ ನಂತರ ಇದೀಗ ಬಿಜೆಪಿಯಲ್ಲೂ ಹೊಸ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಮತ್ತೂಮ್ಮೆ ಚರ್ಚೆ ನಡೆದಿದೆ.

Advertisement

ಯುವಕರೊಬ್ಬರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬಯಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆದರೆ, ನಗರ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆ ಮುಗಿಯುವವರೆಗೂ ಯಡಿಯೂರಪ್ಪ ಅವರೇ ರಾಜ್ಯಾಧ್ಯಕ್ಷರಾಗಿರುವುದು ಸೂಕ್ತ ಎಂಬುದು ರಾಜ್ಯ ನಾಯಕರ ಅಭಿಪ್ರಾಯವಾಗಿದೆ ಎಂದು ಹೇಳಲಾಗಿದೆ.

ಯಡಿಯೂರಪ್ಪ ಅವರು ಪ್ರತಿಪಕ್ಷ ನಾಯಕರಾಗಿ ನೇಮಕಗೊಂಡಾಗ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಯಾಗಲಿದೆ ಎಂದು ಹೇಳಲಾಗಿತ್ತು. ಒಕ್ಕಲಿಗ ಅಥವಾ ದಲಿತ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸುವ ಚರ್ಚೆ ನಡೆದಿತ್ತು. ಸಿ.ಟಿ.ರವಿ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗಿತ್ತು. ಜತೆಗೆ ಆರ್‌ಎಸ್‌ಎಸ್‌ ಮೂಲದ ದಕ್ಷಿಣ ಕನ್ನಡ ಸಂಸದ ನಳೀನ್‌ಕುಮಾರ್‌ ಕಟೀಲ್‌ ಅವರ ಹೆಸರು ಪಟ್ಟಿಯಲ್ಲಿತ್ತು.

ಆದರೆ, ದಿಢೀರ್‌ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದರೆ ಲಿಂಗಾಯಿತ ಸಮುದಾಯ ಕೋಪಿಸಿಕೊಳ್ಳಬಹುದು. ಹೀಗಾಗಿ, ಲೋಕಸಭೆ ಚುನಾವಣೆವರೆಗೂ ಯಡಿಯೂರಪ್ಪ ಅವರೇ ಇರಲಿ.

Advertisement

ಒಕ್ಕಲಿಗ ಅಥವಾ ದಲಿತ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡುವುದರಿಂದ ಬಿಜೆಪಿಯ ಓಟ್‌ಬ್ಯಾಂಕ್‌ ಶೇ.1 ರಿಂದ 2 ರಷ್ಟು ಹೆಚ್ಚಳವಾಗಬಹುದು. ಆದರೆ, ಯಡಿಯುರಪ್ಪ ಅವರನ್ನು ತೆಗೆದರು ಎಂಬ ಭಾವನೆ ಲಿಂಗಾಯಿತರಲ್ಲಿ ಬಂದರೆ ಶೇ.5 ರಷ್ಟು ಮತ ಕುಸಿಯಬಹುದು ಎಂಬ ಲೆಕ್ಕಾಚಾರ ರಾಜ್ಯ ನಾಯಕರು ನೀಡಿದ್ದರಿಂದ ಬದಲಾವಣೆ ವಿಚಾರ ಕೈ ಬಿಡಲಾಗಿತ್ತು.

ಆದರೆ, ಕಾಂಗ್ರೆಸ್‌ನಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ, ಲಿಂಗಾಯಿತ ಸಮುದಾಯಕ್ಕೆ ಕಾರ್ಯಾಧ್ಯಕ್ಷ ಸ್ಥಾನ, ದಲಿತ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿರುವುದು. ಜೆಡಿಎಸ್‌ನಲ್ಲಿ ಕುರುಬ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲೂ ಬೇರೆ ಸಮುದಾಯಕ್ಕೆ ಅವಕಾಶ ನೀಡಬಹುದೇ ಎಂಬ ಚರ್ಚೆ ಪ್ರಾರಂಭವಾಗಿದೆ  ಎನ್ನಲಾಗಿದೆ.

ಬಿಎಸ್‌ವೈ ದಿಢೀರ್‌ ದಿಲ್ಲಿಗೆ
ಈ  ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೋಮವಾರ ದಿಢೀರ್‌ ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ. ನಂಜನಗೂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಅಲ್ಲಿಂದ ಬಂದು ದೆಹಲಿಗೆ ಹೋಗಿ ಅಮಿತ್‌ ಶಾ ಜತೆ ಮಾತುಕತೆ ನಡೆಸಿದರು. ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜತೆ ಜತೆ ಚರ್ಚಿಸಲು ಹೋಗಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮಂಗಳವಾರ ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಸಚಿವರ ಭೇಟಿಯೂ ನಿಗದಿಯಾಗಿದ್ದು ಪ್ರಧಾನಿ ಭೇಟಿಯ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next