Advertisement

ನಳನಳಿಸುತ್ತಿದೆ ಮಹಾತ್ಮಗಾಂಧಿ ಉದ್ಯಾನ ; ಚುಕು ಬುಕು ಪುಟಾಣಿ ರೈಲು‌

04:08 PM May 11, 2022 | Team Udayavani |

ಹುಬ್ಬಳ್ಳಿ: ನಿರ್ವಹಣೆ ವೈಫಲ್ಯತೆಯಿಂದ ಅವ್ಯವಸ್ಥೆ ಆಗರವಾಗಿದ್ದ ಮಹಾತ್ಮ ಗಾಂಧಿ ಉದ್ಯಾನವನ (ಎಂಜಿ ಪಾರ್ಕ್‌) ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ನೋಡುಗರ ಮನಸೂರೆಗೊಳ್ಳುತ್ತಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಪಾರ್ಕ್‌ ಅಭಿವೃದ್ಧಿಗೊಂಡ ನಂತರ ಉದ್ಯಾನಕ್ಕೆ ಆಗಮಿಸುವರ ಸಂಖ್ಯೆ ಹೆಚ್ಚಾಗಿದ್ದು, ದಶಕದ ಹಿಂದಿನ ವೈಭವ ಮರುಕಳಿಸಿಸಿದೆ.

Advertisement

ಮಹಾತ್ಮಗಾಂಧಿ ಉದ್ಯಾನವನ, ಅದರೊಳಗಿರುವ ಇಂದಿರಾ ಗಾಜಿನಮನೆ ನಗರದ ಪ್ರಮುಖ ಸ್ಥಳಗಳಲ್ಲಿ ಒಂದು. ವಾರಾಂತ್ಯ, ರಜೆ ದಿನಗಳಲ್ಲಿ ನಗರದ ಜನರಿಗೆ ಒಂದೊತ್ತಿನ ಪಿಕ್ನಿಕ್‌ ಸ್ಥಳ. ಈ ಹಿಂದೆ ನಿರ್ಮಿತಿ ಕೇಂದ್ರದ ಅಸಮರ್ಪಕ ನಿರ್ವಹಣೆಯಿಂದ ಇಡೀ ಉದ್ಯಾನ ರೂಪ ಕಳೆದುಕೊಂಡಿತ್ತು. ಇನ್ನೂ ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿಗಳ ವಿಳಂಬದಿಂದ ಉದ್ಯಾನದತ್ತ ಮುಖ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದೀಗ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿದ್ದು, ಸಾರ್ವಜನಿಕ ಪ್ರವೇಶಕ್ಕೆ ಮುಕ್ತ ಮಾಡಲಾಗಿದೆ.ಹತ್ತು ಹಲವು ಸೌಲಭ್ಯಗಳಿಂದ ಹಿಂದಿನ ಮೆರಗು ಪಡೆದುಕೊಂಡಿದೆ. ಬೃಹದಾಕಾರದ ಮರಗಳನ್ನು ಹಾಗೆ ಉಳಿಸಿಕೊಂಡಿರುವುದು ದಟ್ಟ ಕಾನನದ ಚಿತ್ರಣ ನೆನಪಿಸುವಂತಿದೆ.

ನಿರ್ವಹಣೆಗೆ ಬೇಕು ಒತ್ತು: ಎಂಜಿ ಪಾರ್ಕ್‌ಗೆ ಐದು ವರ್ಷದಲ್ಲೇ ಪುನಃ ಹತ್ತಾರು ಕೋಟಿ ರೂ. ಸುರಿದಿದ್ದಾರೆ ಎನ್ನುವ ಅಕ್ರೋಶ ಜನರಲ್ಲಿದೆ. ಇದೀಗ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಮುಂದಿನ 5 ವರ್ಷ ನಿರ್ವಹಣೆ ಮಾಡಬೇಕು. ಇಡೀ ಉದ್ಯಾನದ ನಿರ್ವಹಣೆಗಾಗಿ ಪ್ರತ್ಯೇಕ ಟೆಂಡರ್‌ ಕರೆಯಲಾಗಿದ್ದು, ಗುತ್ತಿಗೆ ಪಡೆದವರ ಜವಾಬ್ದಾರಿ ಹೆಚ್ಚಿದೆ. ಹು-ಧಾ ಸ್ಮಾರ್ಟ್‌ ಸಿಟಿ ಅಭಿವೃದ್ಧಿ ಸೊಸೈಟಿ ಮೂಲಕ ಎಲ್ಲಾ ಕಾರ್ಯಗಳು ನಡೆಯಲಿದ್ದು, ಗುತ್ತಿಗೆದಾರ ಸೊಸೈಟಿಗೆ
ಇಂತಿಷ್ಟು ಆದಾಯ ಹಂಚಿಕೆ ಮಾಡಬೇಕು.

ಮೇಲುಸ್ತುವಾರಿಗಾಗಿ ಅಧಿಕಾರಿಗಳ ನೇತೃತ್ವದ ಕಾರ್ಯನಿರ್ವಹಣಾ ಸಮಿತಿ, ಜನಪ್ರತಿನಿಧಿಗಳ ನೇತೃತ್ವದಲ್ಲಿ ಮತ್ತೂಂದು ಸಮಿತಿ ರಚಿಸಲಾಗಿದ್ದು, ಪಾರ್ಕ್‌ ಹಾಳು ಕೊಂಪೆಯಾಗದಂತೆ ನೋಡಿಕೊಳ್ಳಬೇಕಿದೆ.

ಆಕರ್ಷಣೀಯ ತಾಣವಾಗಲು ಕಾರಣಗಳೇನು?
*ಅಭಿವೃದ್ಧಿಗೊಂಡಿರುವ 70ರ ದಶಕದ ಗಾಜಿನಮನೆ
*ದಟ್ಟವಾದ ಮರಗಳ ನಡುವೆ ಕಾಡುಪ್ರಾಣಿಗಳ ಕಲಾಕೃತಿಗಳು
* ಉದ್ಯಾನದುದ್ದಕ್ಕೂ ಕಾಲುದಾರಿ ಹಾಗೂ ಸೇತುವೆಗಳು
* ಮಕ್ಕಳಿಗಾಗಿ ಪ್ರತ್ಯೇಕ ವ್ಯವಸ್ಥೆ, ಆಹಾರ ಸೇವಿಸುವ ಪ್ರತ್ಯೇಕ ಸ್ಥಳ
*ವಾಯುವಿಹಾರಗಳ ಅನುಕೂಲಕ್ಕಾಗಿ ತೆರೆದ ವ್ಯಾಯಾಮ, ಧ್ಯಾನ ಪ್ರದೇಶ
* ಆ್ಯಂಪಿಥೇಟರ್‌, ಸ್ಕೇಟಿಂಗ್‌ ತರಬೇತಿಗಾಗಿ ಟ್ರಾಫಿಕ್‌, ಎರೆಹುಳು ಗೊಬ್ಬರ ತಯಾರಿಕೆ ಘಟಕ
*ಕಾರುಗಳಿಗೆ ವಿನೂತನ ಫಜಲ್‌ ಪಾರ್ಕಿಂಗ್‌ ಹಾಗೂ ದ್ವಿಚಕ್ರ ವಾಹನ ಪಾರ್ಕಿಂಗ್‌ ವ್ಯವಸ್ಥೆ
*ರಜೆ ದಿನಗಳಲ್ಲಿ ಸಂಜೆ ವೇಳೆ ಸಂಗೀತ ಕಾರಂಜಿ, ಲೇಸರ್‌ ಪ್ರದರ್ಶನ

Advertisement

ಚುಕುಬುಕು ಪುಟಾಣಿ ರೈಲು
ಈ ಹಿಂದೆ ಸುರಕ್ಷತೆ ಕೊರತೆಯಿಂದ ಮಗುವೊಂದು ಪುಟಾಣಿ ರೈಲಿನಿಂದ ಬಿದ್ದು ಸಾವನ್ನಪ್ಪಿತ್ತು. ಇದರಿಂದ ಪುಟಾಣಿ ರೈಲು ಸ್ಥಗಿತಗೊಂಡಿತ್ತು. ಆ ರೈಲಿಗೆ ಬಣ್ಣ ಬಳಿದು ಪ್ರದರ್ಶನಕ್ಕೆ ಇಡಲಾಗಿದೆ. ಇದೀಗ ಹವಾನಿಯಂತ್ರಿತ ಪುಟಾಣಿ ರೈಲು ಓಡುತ್ತಿದೆ. 2 ಎಂಜಿನ್‌ಗಳು, 4 ಹವಾನಿಯಂತ್ರಿತ ಬೋಗಿಗಳು, ಎರಡು ನಿಲ್ದಾಣಗಳನ್ನು ನಿರ್ಮಿಸಲಾಗಿದೆ.

ಆಟೋಮ್ಯಾಟಿಕ್‌ ಬಾಗಿಲು, ಸಿಸಿ ಕ್ಯಾಮರಾ, ಸ್ಮೋಕ್‌ ಡಿಟೆಕ್ಟರ್‌, ಬೆಂಕಿ ನಂದಿಸುವುದು, ಎಲ್‌ಇಡಿ ಸ್ಕ್ರೀನ್‌, ಕೋಚ್‌ಗಳಲ್ಲಿ ಟಿವಿ ಸ್ಕ್ರೀನ್‌ ವ್ಯವಸ್ಥೆ ಅಳವಡಿಸಲಾಗಿದೆ. 960 ಮೀಟರ್‌ ಉದ್ದವಿರುವ ಟ್ರಾಫಿಕ್‌ ಅನ್ನು ಸುಮಾರು 8-10 ನಿಮಿಷಗಳಲ್ಲಿ ಕ್ರಮಿಸಲಿದೆ. ಏಕಕಾಲಕ್ಕೆ 60 ಮಕ್ಕಳು ಅಥವಾ 48 ವಯಸ್ಕರು ಪುಟಾಣಿ ರೈಲಿನ ಮಜಾ ತೆಗೆದುಕೊಳ್ಳಬಹುದು. ಇತ್ತೀಚೆಗೆ ಉದ್ಘಾಟನೆ ಸಂದರ್ಭದಲ್ಲಿ ರೈಲು ಹಳಿ ತಪ್ಪಿತ್ತು. ಇದೀಗ ಸರಿಪಡಿಸಿ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದೆ.

*25.95ಕೋಟಿ ರೂ. ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಗೆ ವ್ಯಯಿಸಿದ ಒಟ್ಟು ಮೊತ್ತ

*10.96ಕೋಟಿ ರೂ.: ಕಾಲುದಾರಿ, ಆ್ಯಂಪಿಥೇಟರ್‌ ಸೇರಿದಂತೆ 17 ಕಾಮಗಾರಿ

*1.71ಕೋಟಿ ರೂ.: ಇಂದಿರಾ ಗಾಜಿನಮನೆ ಅಭಿವೃದ್ಧಿ ಯೋಜನೆ

*4.67ಕೋಟಿ ರೂ.: ಸಂಗೀತ ಕಾರಂಜಿ, ಲೇಸರ್‌ ಷೋ, ಲೇಸರ್‌ ಷೋಗಾಗಿ ನೀರಿನ ಪರದೆ

*4.59ಕೋಟಿ ರೂ.: ಆರು ಹಂತದ 36 ಕಾರುಗಳ ನಿಲುಗಡೆಗೆ ಫಜಲ್‌ ಪಾರ್ಕಿಂಗ್‌

*4.02 ಕೋಟಿ ರೂ.: ವಿಶೇಷವುಳ್ಳ ಹವಾನಿಯಂತ್ರಿತ ಪುಟಾಣಿ ರೈಲು

*4.59ಕೋಟಿ ರೂ.: ಆರು ಹಂತದ 36 ಕಾರುಗಳ ನಿಲುಗಡೆಗೆ ಫಜಲ್‌ ಪಾರ್ಕಿಂಗ್

*4.02 ಕೋಟಿ ರೂ.: ವಿಶೇಷವುಳ್ಳ ಹವಾನಿಯಂತ್ರಿತ ಪುಟಾಣಿ ರೈಲು

*10 ರೂ.: ಮಹಾತ್ಮಗಾಂಧಿ ಉದ್ಯಾನವನ ಪ್ರವೇಶಕ್ಕೆ ನಿಗದಿಪಡಿಸಿದ ಶುಲ್ಕ

*6,998 ಲೋಕಾರ್ಪಣೆಗೊಂಡ ಕಳೆದ ಆರು ದಿನಗಳಲ್ಲಿ ಪಾರ್ಕ್‌ಗೆ ಭೇಟಿ ನೀಡಿದ ಜನರು

ದಿನದಿಂದ ದಿನಕ್ಕೆ ಪಾರ್ಕ್‌ಗೆ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಿಂದಿನ ನಿರ್ವಹಣಾ ವೈಫಲ್ಯ ಮರುಕಳಿಸದಂತೆ ಎಚ್ಚರ ವಹಿಸಲಾಗುವುದು. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಎರಡು ಸಮಿತಿ ಇದರ ಮೇಲ್ವಿಚಾರಣೆ ನಡೆಸುತ್ತದೆ. ಯಥಾಸ್ಥಿತಿ ಕಾಪಾಡಿಕೊಳ್ಳದಿದ್ದರೆ ನಿರ್ವಹಣಾ ಗುತ್ತಿಗೆದಾರನೇ ನೇರ ಹೊಣೆಗಾರ. ಸಾರ್ವಜನಿಕರು ಕೂಡ ಪಾರ್ಕ್‌ ಸುಸ್ಥಿತಿಯಲ್ಲಿರಲು ಸಹಕರಿಸಬೇಕು.
*ಶಕೀಲ್‌ ಅಹ್ಮದ್‌, ವ್ಯವಸ್ಥಾಪಕ ನಿರ್ದೇಶಕ, ಹು-ಧಾ ಸ್ಮಾರ್ಟ್‌ಸಿಟಿ ಕಂಪನಿ

ಕುಟುಂಬ ಸಮೇತ ಆಗಮಿಸಿ ಅರ್ಧ ದಿನ ಕಳೆಯಬಹುದಾಗಿದೆ. ಕಾಲೇಜು ಯುವತಿ-ಯುವಕರ ಅಸಭ್ಯ ವರ್ತನೆಗೆ ಒಂದಿಷ್ಟು ಕಡಿವಾಣ ಹಾಕಬೇಕು. ಈ ಅಭಿವೃದ್ಧಿ ಯೋಜನೆಗಳಲ್ಲಿ ಯಥಾಸ್ಥಿತಿ ಕಾಪಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇನ್ನೊಂದು ಐದು ವರ್ಷದಲ್ಲಿ ಪುನಃ ಹತ್ತಾರು ಕೋಟಿ ರೂ. ಸುರಿಯವಂತಾಗಬಾರದು. ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಿ ಹಾಳಾಗದಂತೆ ನೋಡಿಕೊಳ್ಳಬೇಕು.
*ರವೀಂದ್ರ ಪಾಟೀಲ, ಸಾರ್ವಜನಿಕರು

*ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next