ಬೆಂಗಳೂರು: ಕೆಪಿಟಿಸಿಎಲ್ ಹಾಗೂ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ನಗರದಲ್ಲಿ ಮತ್ತೂಂದು ಅನಾಹುತ ಸಂಭವಿಸಿದ್ದು, ವಿದ್ಯುತ್ ತಂತಿ ಸ್ಪರ್ಶಿಸಿ ಲಿಖೀತ್ (14) ಎಂಬ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.
ನಗರದಲ್ಲಿ ಪದೇ ಪದೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವು-ನೋವುಗಳು ಸಂಭವಿಸುತ್ತಿವೆ. ಆದರೆ, ಬಿಬಿಎಂಪಿಯಾಗಲಿ, ಬೆಸ್ಕಾಂ ಆಗಲಿ ಸಮಸ್ಯೆ ಪರಿಹಾರಕ್ಕೆ ಹೆಚ್ಚು ಆದ್ಯತೆ ನೀಡಿ ದಂತಿಲ್ಲ. ಇದರಿಂದಾಗಿ ನಗರದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಅಮಾಯಕರು ತೊಂದರೆ ಅನುಭವಿಸುವಂತಾಗಿದೆ.
ಗುರುವಾರ ಮತ್ತಿಕೆರೆಯ ನೇತಾಜಿ ವೃತ್ತ ಸಮೀಪದ ಪೈಪ್‌ಲೈನ್ ರಸ್ತೆ ಬಳಿ ಕ್ರಿಕೆಟ್ ಆಡುವಾಗ ಚೆಂಡು ಸಮೀಪದ ಕಟ್ಟಡದ ಮೇಲೆ ಬಿದ್ದಿದ್ದು, ಚೆಂಡು ತರಲು ಕಟ್ಟಡದ ಮೊದಲ ಮಹಡಿಗೆ ಏರಿದ್ದಾನೆ. ಚೆಂಡು ಎತ್ತಿಕೊಂಡು ಎಸೆಯುವಾಗ ಇದ್ದಕ್ಕಿದ್ದಂತೆ ಹೈಟೆನನ್ ವಿದ್ಯುತ್ ಸೆಳೆತಕ್ಕೆ ಒಳಗಾಗಿ ಕಟ್ಟಡದಿಂದ ಕೆಳಕ್ಕೆ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಲಿಖೀತ್‌ನನ್ನು ಸ್ಥಳೀಯರು ಕೂಡಲೇ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಮಾದೇವಿ ಹಾಗೂ ಅಂಬರೀಶ್ ದಂಪತಿಯ ಏಕೈಕ ಪುತ್ರ ಲಿಖೀತ್ 8ನೇ ತರಗತಿಯಲ್ಲಿ ಓದುತ್ತಿದ್ದಾನೆ. ಬೇಸಿಗೆ ರಜೆಯಿಂದಾಗಿ ಮಕ್ಕಳೊಂದಿಗೆ ಆಟವಾಡುವ ವೇಳೆ ಘಟನೆ ನಡೆದಿದೆ. ರಾಮಯ್ಯ ಆಸ್ಪತ್ರೆಯಲ್ಲಿ ಲಿಖೀತ್‌ಗೆ ಚಿಕಿತ್ಸೆ ಮುಂದುವರಿದಿದೆ. ಶೇ.50ರಷ್ಟು ಸುಟ್ಟ ಗಾಯಗಳಾಗಿದ್ದು, 48 ಗಂಟೆ ಕಳೆದ ಬಳಿಕ ಬಾಲಕನ ಆರೋಗ್ಯ ಪರಿಸ್ಥಿತಿಯ ಕುರಿತು ಮಾಹಿತಿ ನೀಡುವುದಾಗಿ ವೈದ್ಯರು ತಿಳಿಸಿದ್ದಾರೆ.
ಬಾಲಕನಿಗೆ ವಿದ್ಯುತ್ ಶಾಕ್ ತಗುಲಿದ ಪರಿಣಾಮ ಸಮೀಪದ ಹತ್ತು ಮನೆಗಳ ವಿದ್ಯುತ್ ಮೀಟರ್‌ಗಳು ಸುಟ್ಟು
ಕರಕಲಾ ಗಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಕಡಿತಗೊಳಿಸಲಾಗಿತ್ತು. ಸ್ಥಳ ಪರಿಶೀಲನೆ ನಡೆಸಿದ ಮೇಯರ್: ವಿಷಯ ತಿಳಿಯುತ್ತಿದ್ದಂತೆ ಮತ್ತಿಕೆರೆಗೆ ಭೇಟಿ ನೀಡಿದ ಮೇಯರ್ ಗಂಗಾಂಬಿಕೆ ಘಟನೆ ನಡೆದ ಸ್ಥಳ ಪರಿಶೀಲಿಸಿದ್ದು, ವಿದ್ಯುತ್ ತಂತಿಗಳಿಂದ ಅಪಾಯಗಳು ಸಂಭವಿಸುವ ಸಾಧ್ಯತೆಯಿದ್ದರೂ ಕ್ರಮಕೈಗೊಳ್ಳದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಅವಘಡಕ್ಕೆ ಬಿಬಿಎಂಪಿ, ಬೆಸ್ಕಾಂ ಹಾಗೂ ಸ್ಥಳೀಯರು ಕಾರಣವಾಗಿದ್ದಾರೆ. ಹೈಟೆನÒನ್ ವಿದ್ಯುತ್ ತಂತಿಗಳು ಮನೆಗಳ ಮೇಲೆ ಹಾದು ಹೋಗಿದ್ದು, ಕೈ ಚಾಚಿದರೆ ಶಾಕ್
ಹೊಡೆಯುವಂತಹ ಪರಿಸ್ಥಿತಿಯಿದೆ. ಕಡಿಮೆ ಬೆಲೆ ಕಾರಣಕ್ಕೆ ಸ್ಥಳೀಯರು ಜಾಗ ಖರೀದಿಸಿದ್ದಾರೆ. ಕಾನೂನು ಬಾಹಿರವಾಗಿ ಮನೆ ಕಟ್ಟಿಕೊಳ್ಳಲು ಪಾಲಿಕೆಯ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ ದರು. ಈ ಕುರಿತು ಬೆಂಗಳೂರು ಉಸ್ತುವಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಬಳಿಕ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿದ ಮೇಯರ್ ಬಾಲಕನ ಆರೋಗ್ಯ ವಿಚಾರಿಸಿದ್ದು, ವೈದ್ಯರಿಗೆ ಆರೋಗ್ಯ ಸ್ಥಿತಿಗತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಡಿಸಿಪಿ ಭೇಟಿ: ಡಿಸಿಪಿ ಎನ್.ಶಶಿಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಬಾಲಕನ ಪೋಷಕರ ಜತೆ ಕೆಲ ಹೊತ್ತು ಚರ್ಚಿಸಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ನೋಟಿಸ್‌ಗೂ ಎಚ್ಚೆತ್ತುಕೊಳ್ಳಲಿಲ್ಲ ಮತ್ತಿಕೆರೆಯ ಪೈಪ್‌ಪೈನ್ ರಸ್ತೆ ಭಾಗದಲ್ಲಿ ಕೆಪಿಟಿಸಿಎಲ್‌ನ 66 ಕೆ.ವಿ. ಹೈ ಟೆನ್ಷನ್ ತಂತಿ ಹಾದು ಹೋಗಿದೆ. ಆದರೆ, ಬಹುತೇಕರು ನಿಯಮಬಾಹಿರವಾಗಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದು, ವಿದ್ಯುತ್ ತಂತಿಗಳಿಂದ ಅಪಾಯ ಉಂಟಾಗುವ ಬಗ್ಗೆ ಕೆಪಿಟಿಸಿಎಲ್ ವತಿಯಿಂದ ನೋಟಿಸ್ ಜಾರಿಗೊಳಿಸಿದೆ. ಆದರೆ, ಸ್ಥಳೀಯರು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆ ಬಾಲಕ ತೊಂದರೆ ಅನುಭವಿಸುವಂತಾಗಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ನಿಯಮ ಏನು ಹೇಳುತ್ತದೆ?
ಬೆಸ್ಕಾಂ, ಕೆಪಿಟಿಸಿಎಲ್‌ನಿಂದ ಹೈಟೆನ್ಷನ್ ತಂತಿಗಳು ಹಾದು ಹೋಗಿರುವ ಕಡೆಗಳಲ್ಲಿ ತಂತಿ ಮಾರ್ಗದಿಂದ ಕನಿಷ್ಠ 4 ಮೀಟರ್ ಅಂತರ ಕಾಯ್ದುಕೊಳ್ಳದೆ ಕಟ್ಟಡ ನಿರ್ಮಿಸುವಂತಿಲ್ಲ ಎಂದು ನಿಯಮ ಹೇಳುತ್ತದೆ. ಆದರೆ, ನೆಲಮಹಡಿಗೆ ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯುವ ಮನೆ ಮಾಲೀಕರು ನಂತರದಲ್ಲಿ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದಾಗಿ ಅನಾಹುತಗಳು ಸಂಭವಿಸುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.