Advertisement

ನಿರ್ಲಕ್ಷ್ಯಕ್ಕೆ ಒಳಗಾದ ಜಲಭರಿತ ಬೃಹತ್‌ ಕೆರೆ

11:33 PM Feb 21, 2020 | mahesh |

ಸುರತ್ಕಲ್‌: ಇಲ್ಲಿಗೆ ಸಮೀಪದ ಮುಕ್ಕ ಪಡ್ರೆ ಬಳಿಯ ನಿಸರ್ಗ ದತ್ತವಾದ ಸುಮಾರು 4.50 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಬೃಹತ್‌ ಕೆರೆಯೊಂದು ಅಭಿವೃದ್ಧಿಯಿಂದ ವಂಚಿತವಾಗಿದೆ.

Advertisement

ವರ್ಷದ 365 ದಿನವೂ ನೀರಿನಿಂದ ತುಂಬಿ ಸುತ್ತಲಿನ ಪರಿಸರ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದು, ಕೆಲವು ಬಾರಿ ವಲಸೆ ಹಕ್ಕಿಗಳ ಕಲರವ, ಸ್ಥಳೀಯ ಹಕ್ಕಿಗಳ ಮತ್ಸ್ಯ ಬೇಟೆಯ ತಾಣವಾಗಿದೆ. ಮಹಾನಗರ ಪಾಲಿಕೆಯ ಸುರತ್ಕಲ್‌ ಉಪವಿಭಾಗದಲ್ಲಿ ಈ ಕೆರೆಯಿದೆ. ಸುತ್ತಲೂ ಹಚ್ಚ ಹಸುರು, ಗದ್ದೆ, ತೋಟ ಇದರ ನಡುವೆ ಕೆರೆ ಇದೆ. ನಿರ್ವಹಣೆಯ ಕೊರತೆಯಿಂದ ಕೆರೆಯ ಸುತ್ತಲು ಗಿಡಗಂಟಿಗಳು ಬೆಳೆದುನಿಂತಿವೆ.

ಸರಕಾರಿ ಒಡೆತನದ ಭೂಮಿಯಲ್ಲಿ ಈ ಕೆರೆ ಇದ್ದು ಸಮೀಪದಲ್ಲೇ ನಂದಿನಿ ನದಿ ಹರಿಯುತ್ತದೆ. ಈ ಹಿಂದೆ ಕೃಷಿಗೆ ಇಲ್ಲಿನ ನೀರನ್ನು ಬಳಸುತ್ತಿದ್ದರು. ಈ ಬೃಹತ್‌ ಕೆರೆಯನ್ನು ಅಭಿವೃದ್ಧಿಪಡಿಸಿದರೆ ಕೃಷಿ ಸಹಿತ ಬೇರೆ ಬೇರೆ ಉಪಯೋಗಕ್ಕೆ ಬಳಸಬಹುದಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಗೂ ಈ ಕೆರೆ ಕೊಡುಗೆ ನೀಡ ಬಲ್ಲುದು. ಶನಿವಾರ ಸಮೀಪದ ಕಾಲೇಜಿನ ವಿದ್ಯಾರ್ಥಿಗಳು ಆಗಮಿಸಿ ಒಂದಿಷ್ಟು ಹೊತ್ತು ಕಳೆಯುತ್ತಾರೆ.

ಕೆರೆ ಮಲೀನಗೊಳ್ಳುತ್ತಿದೆ ಇತ್ತೀಚೆಗೆ ಆಧುನಿಕರಣದಿಂದ ಈ ಕೆರೆ ಮಾಲಿನ್ಯಕ್ಕೊಳಗಾಗುತ್ತಿದೆ. ಸುತ್ತಲಿನ ಕಟ್ಟಡಗಳ ನೀರು ಈ ಕೆರೆಯನ್ನು ಮಲೀನಗೊಳಿಸುತ್ತಿರುವ ಸಂದೇಹ ವ್ಯಕ್ತವಾಗುತ್ತಿದೆ. ಸುತ್ತಲೂ ಇದೀಗ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಕಾಲಕ್ರಮೇಣ ಈ ಕೆರೆ ಇತಿಹಾಸದ ಪುಟ ಸೇರಿದರೂ ಅಚ್ಚರಿಯಿಲ್ಲ. ಇದರ ಸಮೀಪವೇ ಇನ್ನೆರಡು ಕೆರೆಗಳಿದ್ದು ಅವುಗಳು ತ್ಯಾಜ್ಯದ ಕೊಂಪೆಯಾಗುತ್ತಿವೆೆ. ಸರಕಾರ ಈ ಕೆರೆಯನ್ನು ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡಿದಲ್ಲಿ ಸುಂದರ ಪಿಕ್ನಿಕ್‌ ಸ್ಥಳವಾಗಿ ಬದಲಾಗುವುದರಲ್ಲಿ ಅನುಮಾನವಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅ ಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕಿದೆ.

ಪರ್ಯಾಯ ಜಲ ಮೂಲವಾಗಿ ಕೆರೆಗಳು
ಪಾಲಿಕೆಗೆ ಇದೀಗ ಮುಖ್ಯವಾಗಿ ನೇತ್ರಾವತಿಗೆ ಅಡ್ಡಲಾಗಿ ಕಟ್ಟಲಾಗಿರುವ ತುಂಬೆ ವೆಂಟೆಡ್‌ ಡ್ಯಾಂ, ಮಳವೂರಿನ ಗುರುಪುರ ನದಿಗೆ ಕಟ್ಟಲಾದ ಕಿರು ಅಣೆಕಟ್ಟುಗಳಿಂದ ಕುಡಿಯುವ ನೀರಿನ ಸರಬರಾಜಾಗುತ್ತಿದೆ. ಆದರೆ ಕಳೆದ ಬಾರಿಯ ಮೇಘ ಸ್ಫೋಟದ ಪರಿಣಾಮ ಈಗಾಗಲೇ ನದಿ ಮೂಲಗಳು ಬತ್ತಿ ಹೋಗಿವೆ. ಸಂಗ್ರಹಿಸಿಡಲಾದ ನೀರನ್ನು ಮಾತ್ರ ಉಪಯೋಗಿಸಬೇಕಾಗುತ್ತದೆ. ಹೀಗಾಗಿ ಜಲ ಸಂಪನ್ಮೂಲ ಹೊಂದಿರುವ ಪಡ್ರೆ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ಅತಿಕ್ರಮಣದಿಂದ ರಕ್ಷಿಸಬಹುದು ಮಾತ್ರ ವಲ್ಲ, ಅಂತರ್ಜಲ ಹೆಚ್ಚಳ ಮತ್ತು ವಿವಿಧ ಚಟುವಟಿಕೆಗಳಿಗೆ ನೀರು ಬಳಸಿಕೊಳ್ಳುವ ಕುರಿತು ಯೋಜನೆ ರೂಪಿಸಬಹುದಾಗಿದೆ.

Advertisement

10 ಕೋಟಿ ರೂ. ಮೀಸಲು
ಈಗಾಗಲೇ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಾವೂರು ಮತ್ತು ಗುಜ್ಜರ ಕೆರೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಸುಮಾರು 10 ಕೋಟಿ ರೂ. ಮೀಸಲಿಡಲಾಗಿದೆ. ಹೀಗಾಗಿ ಎಲ್ಲ ಕೆರೆಗಳ ಅಭಿವೃದ್ಧಿ ಸ್ಮಾರ್ಟ್‌ ಯೋಜನೆಯಲ್ಲಿ ಸಾಧ್ಯವಾಗದು. ಮಂಗಳೂರು ನಗರಾಭಿವೃದ್ಧಿಯಲ್ಲಿ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಬಹುದಾಗಿದೆ.
 -ಮಹಮ್ಮದ್‌ ನಝೀರ್‌, ನಿರ್ದೇಶಕರು ಸ್ಮಾರ್ಟ್‌ ಸಿಟಿ ಯೋಜನೆ

ಸರಕಾರಿ ಬಾವಿ, ಕೆರೆಗಳ ರಕ್ಷಣೆಗೆ ಆದ್ಯತೆ
ಸಮೀಪದಲ್ಲೇ ಇರುವ ನೀರಿನ ಮೂಲಗಳನ್ನು ಉಳಿಸಿಕೊಂಡರೆ ಅಂತರ್ಜಲ ರಕ್ಷಣೆ ಸಾಧ್ಯ. ನೀರು ಹಿಡಿದಿಟ್ಟುಕೊಳ್ಳುವ ಕೆರೆ, ಬಾವಿಗಳನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಈಗಾಗಲೇ ಆಸಕ್ತನಾಗಿದ್ದು, ವಿವಿಧೆಡೆ ಇರುವ ಸರಕಾರಿ ಬಾವಿ, ಕೆರೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಸರಕಾರಿ ಕೆರೆ, ಬಾವಿಗಳು ಅತಿಕ್ರಮಣವಾಗದಂತೆ ರಕ್ಷಿಸಲು ಆದ್ಯತೆ ನೀಡಲಾಗುವುದು.
– ಡಾ| ಭರತ್‌ ಶೆಟ್ಟಿ ವೈ., ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ

– ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next