ಚನ್ನಗಿರಿ: ವಚನಕಾರರು ಸರಳ ಸಾಹಿತ್ಯದ ಮೂಲಕ ಜೀವನದ ಅನುಭವಗಳನ್ನು ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಇದರಲ್ಲಿ ಶೋಷಿತ ಸಮುದಾಯದಿಂದ ಬಂದ ದಲಿತ ವಚನಕಾರರು ಉತ್ತಮ ವಚನಗಳನ್ನು ರಚಿಸಿದ್ದಾರೆ.
ಇವರ ಬಗ್ಗೆ ಇನಷ್ಟು ಸಮಾಜದಲ್ಲಿ ಸಂಶೋಧನೆಗಳು ನಡೆಯಬೇಕಿದೆ ಎಂದು ಶಾಸಕ ವಡ್ನಾಳ್ ರಾಜಣ್ಣ ಅಭಿಪ್ರಾಯಪಟ್ಟರು. ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೌಲ್ಯಯುತ ವಿಷಯಗಳನ್ನು ಒಳಗೊಂಡ ವಚನಗಳು ಸಮಾಜದಲ್ಲಿ ಮಾರ್ಗದರ್ಶನ ಮಾಡುವ ಶಕ್ತಿ ಹೊಂದಿವೆ. ಕನ್ನಡ ಸಾಹಿತ್ಯ ಇತಿಹಾಸದಲ್ಲಿ ವಚನಗಳು ವಿಶಿಷ್ಟ ಸ್ಥಾನ ಪಡೆದಿವೆ. ವಚನಕಾರರು ತಮ್ಮ ಅನುಭವ ಆಗುಹೋಗುಗಳ ಸಂದರ್ಭ ಹಾಗೂ ಇತರೆ ಅಂಶಗಳನ್ನು ಆಧರಿಸಿ ತಮ್ಮ ವಚನಗಳ ಮೂಲಕ ಸಂದೇಶ ನೀಡಿದ್ದಾರೆ.
ಪ್ರಸ್ತುತ ಅವರ ವಚನಗಳು ನಮ್ಮಗೆ ಮಾರ್ಗದರ್ಶಿ ಎಂದರು. ದಲಿತ ವಚನಕಾರರು ಹಾಗೂ ಅವರು ರಚಿಸಿದ ವಚನಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆದರೆ ಮತ್ತಷ್ಟು ವಿವರಗಳು ಲಭ್ಯವಾಗುವ ಸಾಧ್ಯತೆಗಳಿವೆ. ಸರ್ಕಾರ ಆಯೋಜಿಸುತ್ತಿರುವ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಿಂದ ದಲಿತ ವಚನಕಾರರ ಬಗ್ಗೆ ಇನಷ್ಟು ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶ ಕಲ್ಪಿಸಿದಂತಾಗಿದೆ ಎಂದರು.
ತಹಶೀಲ್ದಾರ್ ಪದ್ಮಕುಮಾರಿ ಮಾತನಾಡಿ, ದಲಿತ ವಚನಗಳಿಂದ ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ತೊಡೆದು ಹಾಕುವಂತಹ ಶಕ್ತಿಯಿದೆ. ದಾರ್ಶನಿಕರ ವಚನಗಳನ್ನು ತಪ್ಪದೇ ಪಾಲಿಸಿದಲ್ಲಿ ಸಂಪೂರ್ಣವಾಗಿ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಲ್ಲಿದೆ. ಕನ್ನಡ ಸಾಹಿತ್ಯಕ್ಕೆ ದಲಿತ ವಚನಕಾರರ ಕೊಡುಗೆ ಅಪಾರವಾಗಿದೆ ಎಂದರು. ರಾಜಶೇಖರಯ್ಯ, ಶಿರಸ್ತೆದಾರ ಜಗನ್ನಾಥ್, ಶ್ಯಾಮಣ್ಣ, ಆಹಾರ ಶಿರಸ್ತೆದಾರ ಜಯರಾಂ, ಅಮಾನುಲ್ಲಾ ಇತರರಿದ್ದರು.