Advertisement

ರಾಷ್ಟ್ರೀಯ ಹೆದ್ದಾರಿಗೆ ಸಿಗಲಿದೆ ಬೆಳಕು!

06:23 PM Dec 07, 2022 | Team Udayavani |

ಮಹಾನಗರ: ರಾಷ್ಟ್ರೀಯ ಹೆದ್ದಾರಿ 75ರ ಪಡೀಲ್‌ನಲ್ಲಿ ಡಿವೈಡರ್‌ ಮಧ್ಯೆ ಬೀದಿ ದೀಪ ಅಳವಡಿಸುವ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಪಾಲಿಕೆ ವತಿಯಿಂದ ಕೆಲಸ ನಡೆಯುತ್ತಿದ್ದು, ಪಡೀಲ್‌ನಿಂದ ಕಣ್ಣೂರು ವರೆಗೆ ಹೆದ್ದಾರಿ ಬೆಳಕು ಕಾಣಲಿದೆ.

Advertisement

ಆರಂಭದಲ್ಲಿ ದ್ವಿಪಥವಾಗಿದ್ದ ಹೆದ್ದಾರಿ ಚತುಷ್ಪಥಕ್ಕೆ ಬದಲಾಗಿ ದಶಕಗಳೇ ಕಳೆದರೂ ಬೀದಿದೀಪಗಳನ್ನು ಅಳವಡಿಸದ ಕಾರಣ ರಾತ್ರಿ ವೇಳೆ ಕತ್ತಲಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಈಗಲೂ ಇದೆ. ಇದರಿಂದ ರಾತ್ರಿ ವೇಳೆ ಅಪಘಾತ, ಅವಘಡಗಳಿಗೂ ಸಾಮಾನ್ಯವಾಗಿದೆ. ಹೆದ್ದಾರಿ ಇಲಾಖೆಗೆ ಈ ಕುರಿತು ಸಾರ್ವಜನಿಕರು, ಸಂಘ ಸಂಸ್ಥೆಗಳು ಹಲವು ಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ.

ಇದೀಗ ಮಹಾನಗರ ಪಾಲಿಕೆ ವತಿಯಿಂದ 15ನೇ ಹಣಕಾಸು ನಿಧಿಯಲ್ಲಿ ಸುಮಾರು 16.37 ಲಕ್ಷ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸದ್ಯ ಪಡೀಲ್‌ನ ಅಂಡರ್‌ಪಾಸ್‌ ಬಳಿಯಿಂದ ಕಾಮಗಾರಿ ಆರಂಭವಾಗಿದೆ. ಕಂಬಗಳನ್ನು ಅಳವಡಿಸಲು ಕಣ್ಣೂರು ವರೆಗೆ 32 ದೀಪಕಂಬಗಳನ್ನು ನಿರ್ಮಿಸಲಾಗಿದ್ದು, ವಿದ್ಯುತ್‌ ಸಂಪರ್ಕಕ್ಕಾಗಿ ಕೇಬಲ್‌ ಜೋಡಿಸುವ ಕೆಲಸ ಮುಂದುವರಿದಿದೆ. ಒಂದೇ ಹಂತದಲ್ಲಿ ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತಾದರೂ, ಮೊತ್ತ ಕಡಿಮೆಯಾದ ಹಿನ್ನೆಲೆಯಲ್ಲಿ, ಎರಡನೇ ಹಂತದಲ್ಲಿ ಕಾರ್ಪೋರೇಷನ್‌ ವ್ಯಾಪ್ತಿ ಅಂತ್ಯವಾಗುವ ವರೆಗೆ (ಕಣ್ಣೂರು ಮಸೀದಿ ವರೆಗೆ) ಕಾಮಗಾರಿ ನಡೆಯಲಿದೆ ಎಂದು ಪಾಲಿಕೆ ಎಂಜಿನಿಯರ್‌ ಮೊಹಮ್ಮದ್‌ ಶಕೀರ್‌ ತಿಳಿಸಿದ್ದಾರೆ.

ನಂತೂರಿನಿಂದ ಆರಂಭವಾಗುವ ಹೆದ್ದಾರಿಯಲ್ಲಿ ಸದ್ಯ ಪಡೀಲ್‌ ರೈಲ್ವೇ ಕೆಳಸೇತುವೆ ವರೆಗೆ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಕೆಲವು ಜಂಕ್ಷನ್‌ ಗಳಲ್ಲಿ ಹೈಮಾಸ್ಟ್‌ ದೀಪಗಳನ್ನು ಸ್ಥಳೀಯವಾಗಿ ಅಳವಡಿಸಿದ್ದಾರೆ. ಇನ್ನು ಪಾದಚಾರಿಗಳಿಗಾಗಿ ರಸ್ತೆ ಬದಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದ್ದರೂ, ಅವುಗಳೂ ಉರಿಯುವುದು ಅಷ್ಟಕ್ಕಷ್ಟೇ. ವಾಹನ ಚಾಲಕರಿಗೆ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಸದ್ಯ ನಡೆಯುತ್ತಿರುವ ಕಾಮಗಾರಿ ಕೆಲವು ದೂರದ ವರೆಗೆ ಕತ್ತಲ ಪಯಣದಿಂದ ಮುಕ್ತಿ ನೀಡಲಿದೆ.

ಕಂಬ ಹಾಕಿದರೂ ಲೈಟ್‌ ಉರಿಯದು?
ಇನ್ನೊಂದು 10-15 ದಿನದಲ್ಲಿ ಕಂಬವೂ ಅಳವಡಿಸುವ ಕಾಮಗಾರಿ ಪೂರ್ಣಗೊಳ್ಳಲಿದೆ. ಆದರೆ ಲೈಟ್‌ ಉರಿಯುವುದು ಮಾತ್ರ ಸದ್ಯ ಅನುಮಾನವಾಗಿದೆ. ಕಾರಣ, ಮಂಗಳೂರು ನಗರ ವ್ಯಾಪ್ತಿಗೆ ಎಲ್‌ಇಡಿ ದೀಪಗಳನ್ನು ಅಳವಡಿಸಲು ಸ್ಮಾರ್ಟ್‌ ಸಿಟಿಯಿಂದ ಟೆಂಡರ್‌ ಆಗಿದೆ. ಪರಿಣಾಮವಾಗಿ ಮಹಾನಗರ ಪಾಲಿಕೆಗೆ ದೀಪಗಳನ್ನು ಅಳವಡಿಸಲು ಅವಕಾಶವಿಲ್ಲ. ಈ ಕಾಮಗಾರಿ ಟೆಂಡರ್‌ನಲ್ಲಿಯೂ ದೀಪ ಅಳವಡಿಸುವ ಕುರಿತು ಉಲ್ಲೇಖವಿಲ್ಲ. ಇನ್ನು ಸ್ಮಾರ್ಟ್‌ಸಿಟಿಯಿಂದ ಟೆಂಡರ್‌ ಪಡೆದಿರುವ ಏಜೆನ್ಸಿ ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಆದ್ದರಿಂದ ದೀಪ ಯಾವಾಗ ಉರಿಯಲಿದೆ ಎಂದು ಕಾದು ನೋಡಬೇಕಿದೆ.

Advertisement

ಬಹುಬೇಡಿಕೆಯ ಕಾಮಗಾರಿ
ಪಡೀಲ್‌ ಭಾಗದಲ್ಲಿ ಬಹುಕಾಲದ ಬೇಡಿಕೆಯಾಗಿದ್ದ ಹೆದ್ದಾರಿ ಮಧ್ಯದಲ್ಲಿ ಲೈಟ್‌ ಅಳವಡಿಸುವ ಕೆಲಸ ಆರಂಭವಾಗಿದೆ. ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ಪಡೆದು ಕಾಮಗಾರಿ ನಿರ್ವಹಿಸಲಾಗುತ್ತಿದ್ದು, ಶೀಘ್ರದಲ್ಲಿ ಹೆದ್ದಾರಿಗೆ ಬೆಳಕು ಸಿಗಲಿದೆ.
-ಜಯಾನಂದ ಅಂಚನ್‌, ಮೇಯರ್‌

*ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next