Advertisement
‘ನಾನು ಪ್ರೀತಿಸಿದ್ದ ಹಳ್ಳಿ ನನಗೆ ಅಪಾರವಾದ ಅವಮಾನವನ್ನೂ ಮಾಡಿದೆ. ಆದರೆ, ಎಲ್ಲ ಹಳ್ಳಿಗಳಲ್ಲೂ ಇದು ಸಾಮಾನ್ಯ ಎಂಬ ಪ್ರಜ್ಞೆಯೂ ನನ್ನಲ್ಲಿದೆ. ನಾನು ಮೊದಲಿಗೆ ಚಿತ್ರ ಮಂದಿರದಲ್ಲಿ ಟಿಕೆಟ್ ಕೌಂಟರ್‌ನಲ್ಲಿ ಕೆಲಸ ಮಾಡಿದ್ದೆ. ಥಿಯೇಟರ್ ಪ್ರೊಜೆಕ್ಟ್-ರೀಲ್ ಹಾಕಿದ್ದೆ. ವಾಲ್‌ಪೋಸ್ಟರ್ ಬರೆದು, ಗೋಡೆಗೆ ಹಚ್ಚಿದ್ದೇನೆ. ಬಳಿಕ ಮೈಸೂರು ಡೈರಿಯಲ್ಲಿ ದಿನಗೂಲಿ ನೌಕರನಾಗಿ ದಿನಕ್ಕೆ 4 ರೂ.ನಂತೆ ದುಡಿದೆ. ಕೆಲಸವನ್ನು ರಾತ್ರಿ ಪಾಳಿಯಲ್ಲಿ ಮಾಡಿ ವಿದ್ಯಾಭ್ಯಾಸ ಮುಂದುವರಿಸಿದೆ’ ಎಂದರು.
‘ರೆಡ್ ಕಾರ್ಪೆಟ್ ಹಾಸಿ ನಮ್ಮನ್ನು ಕೈ ಹಿಡಿದು ಮುನ್ನಡೆಸುವವರು ಯಾರೂ ಇರಲಿಲ್ಲ. ನಾವಾಗಿಯೇ ಮುನ್ನಡೆಯಬೇಕು. ಈ ಹಂತದಲ್ಲಿ ನಾವು ಕಷ್ಟ ಪಡಬೇಕು. ವಿಶೇಷ ಅಂದರೆ ನಾನು ಮೈಲಿಗಲ್ಲಿನಲ್ಲಿ ಬರೆದು ಮುಂದೆ ಬಂದಿದ್ದೇನೆ. ಒಂದು ಅಕ್ಷರಕ್ಕೆ 25 ಪೈಸೆ ಕೊಡುತ್ತಿದ್ದರು. ಹಾಗಾಗಿ ಉದ್ದವಾದ ಹೆಸರು ಬರಲಿ ಅಂತ ಆಸೆ ಪಟ್ಟಿದ್ದೆ. ಚೆನ್ನರಾಯಪಟ್ಟಣ ಅಂತ ಬರೆದೆ 1.75 ರೂ. ಸಿಗುತ್ತಿತ್ತು. ಮಂಡ್ಯ ಅಂತ ಬಂದರೆ ಕಡಿಮೆ ಹಣ ಸಿಗುತ್ತಿತ್ತು. ಹೀಗಾಗಿ ಸೈಕಲ್ ಮೇಲೆ ಕೂತು ಮೈಲಿಗಲ್ಲು ಬರೆಯಲು ಶುರು ಮಾಡಿದ್ದೆ’ ಎಂದರು. ‘ನನ್ನ ಹಳ್ಳಿಯ ಪಕ್ಕದ ಮುಂಭಾಗದಲ್ಲೊಂದು ಹೆದ್ದಾರಿಯಿದೆ. ನನ್ನ ಹಳ್ಳಿಯಲ್ಲಿ 1925ರಲ್ಲಿ ಕಟ್ಟಿದ ಬ್ರಿಟಿಷ್ ಕಾಲದ ಶಾಲೆಯಿದೆ. ನಮ್ಮ ಹಳ್ಳಿಗೆ ಮೇಷ್ಟ್ರುಗಳ ಹಳ್ಳಿ ಅಂತ ಹೆಸರು ಇತ್ತು. ಹೆಸರಿಗಷ್ಟೇ ನಮ್ಮದು ಮಂಡ್ಯ ಜಿಲ್ಲೆ. ಆದರೆ, ಕಬ್ಬು, ಗದ್ದೆಗಳು ನಮ್ಮ ಹಳ್ಳಿಯಲ್ಲಿ ಇಲ್ಲ. ನಮ್ಮ ಹಳ್ಳಿಯ ಮುಂಭಾಗದ ಹೆದ್ದಾರಿಯೇ ಒಂದು ರೂಪಕ ವಾಗಿ ಪ್ರತಿರೂಪವಾಗಿ ಕಾಣುತ್ತಿತ್ತು. ಕುವೆಂಪು ಅವರಿಗೆ ಇದ್ದ ಹಾಗೆ ಕಾಡುಗಳಿಲ್ಲ. ಕಾರಂತರಿಗೆ ಇದ್ದ ಹಾಗೆ ಕಡಲು ಇರಲಿಲ್ಲ. ಸರಳತೆ ಹಾಗೂ ಒಂದರ್ಥದಲ್ಲಿ ಶೂನ್ಯತೆಯನ್ನು ತುಂಬಿಕೊಂಡಿದ್ದ ಹಳ್ಳಿಯಾಗಿತ್ತು. ಆದರೂ ಸಾಂಸ್ಕೃತಿಕ ಹಾಗೂ ಅಕ್ಷರ ಸಂಸ್ಕೃತಿಯನ್ನು ಒದಗಿಸಿಕೊಟ್ಟ ಹಳ್ಳಿ ಅದು’ ಎಂದು ತಿಳಿಸಿದರು.
Related Articles
‘ನನ್ನ ತಂದೆ ಆವತ್ತು ನನ್ನನ್ನು ಎಮ್ಮೆ ಅಥವಾ ದನ ಮೇಯಿಸಲೆಂದು ಕಳುಹಿಸದೆ, ಶಾಲೆಗೆ ಕಳುಹಿಸಿದ್ದರಿಂದ ನಾನು ಇವತ್ತು ಈ ಸ್ಥಾನದಲ್ಲಿ ನಿಲ್ಲುವಂತಾಯಿತು. ಇಲ್ಲಿನ ಒಂದೊಂದು ಅನುಭವಗಳೆ ನಮ್ಮ ಬರವಣಿಗೆಗೆ ಪ್ರೇರಣೆಯಾಯಿತು. ಪಶ್ಚಿಮದಲ್ಲಿರುವುದೆಲ್ಲ ತಪ್ಪು, ಭಾರತ ಮಾತ್ರ ಸರಿಯಾಗಿದೆ; ಉಳಿದ ದೇಶ ಯಾವುದೂ ಸರಿಯಿಲ್ಲ ಅಂತ ನಾನು ಖಂಡಿತವಾಗಿಯೂ ವಾದ ಮಾಡುವುದಿಲ್ಲ. ನಮ್ಮ ಪೂರ್ವದ ಬೇರುಗಳಿಗೆ ಪಶ್ಚಿಮದ ಹೂವು ಹಣ್ಣು ಬೆರೆತರೆ ಸಮನ್ವಯತೆ ಉತ್ತಮವಾಗುತ್ತದೆ’ ಎಂದು ನಾಗತಿಹಳ್ಳಿ ಅಭಿಪ್ರಾಯಪಟ್ಟರು.
Advertisement