Advertisement

ಕುಷ್ಠ ರೋಗ ಪತ್ತೆಗೆ ಆಂದೋಲನ

11:14 AM Oct 27, 2018 | Team Udayavani |

ಯಲಹಂಕ: ಕುಷ್ಠ ರೋಗ ಪತ್ತೆ ಹಚ್ಚಲು ಆಂದೋಲನ ಆರಂಭಿಸಿದ್ದು, ಬೆಂಗಳೂರು ಉತ್ತರ ತಾಲೂಕಿನ 1,12,590 ಮನೆಗಳಿಗೆ ಭೇಟಿ ನೀಡಿ, 354 ಸಂಶಯಾಸ್ಪದ ಪ್ರಕರಣಗಳನ್ನು ಪತ್ತೆ ಹಚ್ಚಿ ಇಬ್ಬರು ಕುಷ್ಠ ರೋಗಿಗಳಿಗೆ ಚಿಕಿತ್ಸೆ ಪ್ರಾರಂಭಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಮನೋಹರ್‌ ತಿಳಿಸಿದರು.

Advertisement

ಕುಷ್ಠ ರೋಗ ಪತ್ತೆಗೆ ಆರಂಭಿಸಿರುವ “ಸ್ಪರ್ಶ’ ಆಂದೋಲನದಡಿ ಸಿಬ್ಬಂದಿ ಕಾರ್ಯವೈಖರಿ ಪರಿಶೀಲಿಸಿ ಮಾತನಾಡಿದ ಅವರು, ಅ.22ರಿಂದ ನ.4ರವರೆಗೆ 14 ದಿನಗಳ ಕಾಲ ಬೆಂಗಳೂರು ಉತ್ತರ ತಾಲೂಕಿನಲ್ಲಿ 5,29,299 ಮನೆಗಳಿಗೆ ಭೇಟಿ ನೀಡಿ, ಸಂಶಯಾಸ್ಪದ ಚರ್ಮದ ಮಚ್ಚೆ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಲು ಸಲಹೆ ನೀಡಲಾಗುವುದು ಎಂದರು.

ನರ್ಸಿಂಗ್‌ ಕಾಲೇಜು ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆ ಪ್ರತಿನಿಧಿಗಳು, ಆರೋಗ್ಯ ಇಲಾಖೆ  ಸಿಬ್ಬಂದಿಯನ್ನು ಒಳಗೊಂಡಂತೆ ಒಂದು ತಂಡದಲ್ಲಿ ಇಬ್ಬರು ಪ್ರತಿನಿಧಿಗಳಂತೆ ಒಟ್ಟು 1512 ತಂಡದಲ್ಲಿ 3029  ಸದಸ್ಯರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇವರಲ್ಲಿ ಒಂದು ತಂಡ ದಿನ ಒಂದಕ್ಕೆ 25 ಮನೆಗಳಿಗೆ ತೆರಳಿ 14 ದಿನದೊಳಗೆ ಎಲ್ಲಾ ಮನೆಗಳಲ್ಲಿ ಪರಿಶೀಲನೆ ನಡೆಸಲಿದೆ.

ಮನೆಯಲ್ಲಿ ಯಾರೂ ಇಲ್ಲದಿದರೆ 7ನೇ ದಿನದ ನಂತರ ಮತ್ತೂಮ್ಮೆ ಭೇಟಿ ನೀಡಿ ಪರಿಶೀಲಿಸಿ ರೋಗ ಪತ್ತೆಹಚ್ಚಲಾಗುವುದು. ಆರೋಗ್ಯ ಇಲಾಖೆ ಕಾರ್ಯಕರ್ತರು ಮನೆ ಬಾಗಿಲಿಗೆ ಬಂದಾಗ ಅವರು ಕೇಳುವ ಮಾಹಿತಿ ನೀಡುವ ಮೂಲಕ ಸಾರ್ವಜನಿಕರು ಸಹಕರಿಸಬೇಕು. ಈ ಮೂಲಕ ಭಾರತವನ್ನು ಕುಷ್ಠ ರೋಗಮುಕ್ತ ದೇಶವಾಗಿಸಲು ನೆರವಾಗಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next