Advertisement

ಕೈಗಾರಿಕಾಭಿವೃದ್ಧಿಯಲ್ಲಿ ತೀರಾ ಹಿಂದುಳಿದ ಜಿಲ್ಲೆ

01:11 PM May 22, 2019 | Suhan S |

ಹಾವೇರಿ: ಕೈಗಾರಿಕಾ ಅಭಿವೃದ್ಧಿಗಾಗಿ ಜಿಲ್ಲೆಯಲ್ಲಿ 600 ಎಕರೆ ಭೂಮಿ ಮೀಸಲಿಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಸುಧಾಕರ ಶೆಟ್ಟಿ ತಿಳಿಸಿದರು.

Advertisement

ಮಂಗಳವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ತಾಲೂಕಿನ ಕೊಳೂರು ಬಳಿ ಈಗಾಗಲೇ 400 ಎಕರೆ ಜಮೀನು ಗುರುತಿಸಲಾಗಿದ್ದು, ಅದು ಸರ್ಕಾರದಿಂದ ಮಂಜೂರಾಗಬೇಕಿದೆ. ಜತೆಗೆ ಇನ್ನೂ 200 ಎಕರೆ ಭೂಮಿ ಗುರುತಿಸಿ ಕೈಗಾರಿಕೆಗಳಿಗೆ ನೀಡಬೇಕು ಎಂದರು.

ಹಾವೇರಿ ಕೈಗಾರಿಕಾಭಿವೃದ್ಧಿಯಲ್ಲಿ ತೀರಾ ಹಿಂದುಳಿದ ಜಿಲ್ಲೆಯಾಗಿದ್ದು, ಸರ್ಕಾರ ಇಲ್ಲಿ ಕೈಗಾರಿಕಾಭಿವೃದ್ಧಿಗೆ ಆದ್ಯತೆ ನೀಡಿ ಸಾಕಷ್ಟು ಅನುದಾನ ನೀಡಿ ಯೋಜನೆಗಳನ್ನು ರೂಪಿಸಬೇಕು. ಈಗಾಗಲೇ ಸಾಕಷ್ಟು ಯೋಜನೆಗಳಿವೆ. ಆದರೆ, ಆ ಯೋಜನೆಗಳ ಬಗ್ಗೆ ಸರಿಯಾದ ಪ್ರಚಾರ ಆಗುತ್ತಿಲ್ಲ. ಹೀಗಾಗಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಲ್ಲಿ ಜಿಲ್ಲೆ ಹಿಂದುಳಿದೆ ಎಂದರು.

ಜಿಲ್ಲೆಯಲ್ಲಿ ಮಾನವ ಶಕ್ತಿ, ಉತ್ತಮ ಸಂಪರ್ಕ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಸಾಕಷ್ಟು ಇದೆ. ಆದರೆ, ಸೌಕರ್ಯ ಇದೆ ಎಂಬುದನ್ನು ಹೊರಜಗತ್ತಿಗೆ ಪರಿಚಯಿಸುವ ಕಾರ್ಯವೂ ಆಗಿಲ್ಲ. ಇದರಿಂದಾಗಿ ಕೈಗಾರಿಕೆ ಸ್ಥಾಪಿಸಲು ಹೊರಗಿನಿಂದ ಉದ್ಯಮಿಗಳು ಸಹ ಬರುತ್ತಿಲ್ಲ ಎಂದರು.

ಹೊಸಬರಿಗೆ ಆದ್ಯತೆ ನೀಡಲಿ: ಬ್ಯಾಂಕ್‌ಗಳು ಹಳೆ ಉದ್ಯಮಿಗಳಿಗೆ ಸಾಲ ಕೊಡಲು ತೋರುವ ಆಸಕ್ತಿ ಹೊಸ ಉದ್ಯಮಿಗಳಿಗೆ ತೋರುತ್ತಿಲ್ಲ. ಬ್ಯಾಂಕ್‌ ಅಧಿಕಾರಿಗಳ ತಾರತಮ್ಯ ಮನೋಭಾವ ಬದಲಾಗಬೇಕು. ಹೊಸ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕು. ಕೃಷಿ, ಪ್ರವಾಸೋದ್ಯಮ ಪೂರಕ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶಗಳಿದ್ದರೂ ಕೈಗಾರಿಕೆ ಸ್ಥಾಪಿಸಲು ಯಾರೂ ಮುಂದೆ ಬರುತ್ತಿಲ್ಲ. ಪದವೀಧರರು ಉದ್ಯೋಗ ಅರಸಿ ದೊಡ್ಡ ದೊಡ್ಡ ನಗರಗಳಿಗೆ ಹೋಗುತ್ತಿದ್ದಾರೆ. ಯುವಕರು ಉದ್ಯೋಗಕ್ಕಿಂತ ಉದ್ಯಮಿಯಾಗಲು ಮುಂದೆ ಬರಬೇಕು ಎಂದ ಅವರು, ಹೊಸ ಉದ್ಯಮಿಗಳಿಗೆ ಕೈಗಾರಿಕಾ ಘಟಕದ ಯೋಜನೆ, ಸಾಲ ಇನ್ನಿತರ ಸಲಹೆ ಮಾರ್ಗದರ್ಶನ ನೀಡಲು ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಸದಾಸಿದ್ಧ ಎಂದರು.

Advertisement

ಪ್ರಸ್ತಾವನೆ: ಮಂಗಳವಾರ ಬೆಳಗ್ಗೆ ನಡೆದ ಕಾರ್ಯಾಗಾರದಲ್ಲಿ ಸರಕು ಸೇವಾ ತೆರಿಗೆ, ಕೃಷಿ ಉತ್ಪನ್ನ ಮಾರುಕಟ್ಟೆ, ಬ್ಯಾಂಕಿಂಗ್‌ ಮತ್ತು ಹಣಕಾಸು, ಕೈಗಾರಿಕೆ ಕುರಿತ ನಾಲ್ಕು ಗೋಷ್ಠಿಗಳು ನಡೆದವು. ಕಾರ್ಯಾಗಾರದಲ್ಲಿ ವ್ಯಾಪಾರ ಪರವಾನಗಿ ನವೀಕರಣ ಅವಧಿ ವಿಸ್ತರಣೆಯಾಗಬೇಕು. ಎಪಿಎಂಸಿ 0.5 ತೆರಿಗೆ ರದ್ದುಪಡಿಸಬೇಕು. ಅನವಶ್ಯಕ ಹಾಗೂ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಇಂಬು ನೀಡುವ ಎಪಿಎಂಸಿ 35-ಬಿ (35-ಎ ಇದರಲ್ಲಿ ತೆರಿಗೆ ಸೇರಿದಂತೆ ಇತರ ಎಲ್ಲ ದೃಢೀಕರಣ ಮಾಡಿದ್ದರೂ 35-ಬಿಯಲ್ಲಿ ಎಪಿಎಂಸಿ ಕಾರ್ಯದರ್ಶಿ ಸಹಿ ಹಾಕಿಸುವುದು) ರದ್ದು ಮಾಡಬೇಕು. ಜಿಎಸ್‌ಟಿ ಅನುಷ್ಠಾನದಲ್ಲಿರುವ ನೆಟ್ವರ್ಕ್‌ ಸಮಸ್ಯೆ ಸರಿಪಡಿಸಬೇಕು ಎಂಬ ಪ್ರಸ್ತಾವನೆಯನ್ನು ಸರ್ಕಾರಗಳಿಗೆ ಕಳುಹಿಸಲು ನಿರ್ಧರಿಸಲಾಯಿತು ಎಂದು ತಿಳಿಸಿದರು.

ಸ್ಥಿರ ಸರ್ಕಾರ ಬೇಕು: ಸರ್ಕಾರದ ಅಸ್ಥಿರತೆ ಎಲ್ಲ ರಂಗದಲ್ಲಿಯೂ ಪರಿಣಾಮ ಬೀರುತ್ತದೆ. ಅಂತೆಯೇ ಕೈಗಾರಿಕೆ, ವಾಣಿಜ್ಯ ರಂಗದ ಮೇಲೆಯೂ ಬೀಳುತ್ತದೆ. ಸರ್ಕಾರ ಯಾವಾಗ ಏನಾಗುತ್ತೋ ಎಂಬ ಭಾವನೆಯಿಂದ ಅಧಿಕಾರಿ ವರ್ಗ ತಟಸ್ಥವಾಗುತ್ತದೆ. ಅಧಿಕಾರಿ ವರ್ಗ ತಟಸ್ಥವಾದರೆ ಯೋಜನೆ, ಕಾರ್ಯಕ್ರಮ ಎಲ್ಲವೂ ಕುಂಠಿತಗೊಳ್ಳುತ್ತವೆ.

ಹೀಗಾಗಿ ಸರ್ಕಾರದಲ್ಲಿ ಸ್ಥಿರತೆ ಇರಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಜಿಲ್ಲಾ ಘಟಕದ ಪ್ರಮುಖರಾದ ಸಿ.ಆರ್‌. ಜನಾರ್ದನ, ಎಂ.ಸುಂದರ, ಎನ್‌. ಯಶವಂತರಾಜ, ಆರ್‌.ಎಸ್‌. ಮಾಗನೂರ, ಪಿ.ಡಿ. ಶಿರೂರ, ಜಿ.ವಿ. ಹಿರೇಗೌಡ್ರ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next