ಶಿವಮೊಗ್ಗ: ರಾಜ್ಯದಲ್ಲಿ ಗೋ ಹತ್ಯೆ ನಿಷೇಧಿಸುವ ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ತಡೆಗಟ್ಟುಲು ಕಠಿಣ ಕಾನೂನು ಜಾರಿಗೆ ತರುವ ಪ್ರಯತ್ನ ನಡೆಸುವುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಹಾಗೂ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ಹೆಚ್ಚಾಗುತ್ತಿದೆ. ಗೋ ಹತ್ಯೆ ಸಂಪೂರ್ಣ ನಿಲ್ಲಬೇಕು. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಗೋ ಹತ್ಯೆ ನಿಷೇಧಕ್ಕೆ ಪ್ರಜಾಪ್ರಭುತ್ವದಡಿಯಲ್ಲಿ ಬಿಲ್ ಪಾಸ್ ಮಾಡಲಾಗಿತ್ತು. ಆದರೆ ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಇದಕ್ಕೆ ಅಡ್ಡಿಬಂದು ಬಿಲ್‌ನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದರು. ಇದರಿಂದಾಗಿ ಕಾನೂನು ಜಾರಿಗೆ ಅಡ್ಡಿಯುಂಟಾಯಿತು ಎಂದರು.
ಅಕ್ರಮ ಕಸಾಯಿಖಾನೆಗೆ ಬೀಗ: ದೇಶದ ಹಲವು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ತಜ್ಞರೊಂದಿಗೆ ಚರ್ಚಿಸಿ ರಾಜ್ಯದಲ್ಲೂ ಕಾನೂನು ಜಾರಿಗೆ ತರುವ ಪ್ರಯತ್ನ ಮಾಡಲಾಗುವುದು ಹಾಗೂ ರಾಜ್ಯದಲ್ಲಿ ಎಲ್ಲೆಲ್ಲಿ ಅಕ್ರಮ ಕಸಾಯಿ ಖಾನೆಗಳಿವೆಯೋ ಅವುಗಳಿಗೆ ಬೀಗ ಹಾಕಿಸಲಾಗುವುದು ಎಂದು ಹೇಳಿದರು. ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ತಡೆಗಟ್ಟಲು ಹಲವು ರಾಜ್ಯಗಳಲ್ಲಿ ಕಠಿಣ ಕಾನೂನು ಜಾರಿಯಲ್ಲಿದೆ. ರಾಜ್ಯದಲ್ಲೂ ಕಠಿಣ ಕಾನೂನು ಜಾರಿಗೆ ತರಲು ಆದ್ಯತೆ ನೀಡುವುದಾಗಿ ತಿಳಿಸಿದರು.
ಈಗಾಗಲೇ ದೇಶದ 21 ರಾಜ್ಯಗಳಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ಈ ಬಾರಿ ಕರ್ನಾಟಕದಲ್ಲೂ ಕಾಂಗ್ರೆಸ್ ಸೋಲು ಅನುಭವಿಸಲಿದೆ. ಕಾಗಿನೆಲೆಯಲ್ಲಿ ಬಿಜೆಪಿ ಏರ್ಪಡಿಸಿದ್ದ ಸಮಾವೇಶದಲ್ಲಿ ಸೇರಿದ್ದ ಜನರನ್ನು ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನಡುಕ
ಹುಟ್ಟಿದೆ ಎಂದು ಲೇವಡಿ ಮಾಡಿದರು. ಗೋಷ್ಠಿಯಲ್ಲಿ ಮುಖಂಡರಾದ ಡಿ.ಎಸ್.ಅರುಣ್, ಕೆ.ಜಿ.ಕುಮಾರಸ್ವಾಮಿ, ಎಸ್.ಎನ್.ಚನ್ನಬಸಪ್ಪ, ಎನ್.ಜೆ.ರಾಜಶೇಖರ್, ಎಸ್. ಜ್ಞಾನೇಶ್ವರ್, ಎಸ್.ದತ್ತಾತ್ರಿ, ಮೋಹನ್ ರೆಡ್ಡಿ, ಅರುಣ್ ಕುಮಾರ್, ಕೆ.ವಿ.ಅಣ್ಣಪ್ಪ ಇನ್ನಿತರರು ಉಪಸ್ಥಿತರಿದ್ದರು.
ಏ.19ರಂದು ಬೆಳಗ್ಗೆ 10 ಗಂಟೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಮೆರವಣಿಗೆ ಹೊರಟು 11.30ಕ್ಕೆ ನಾಮಪತ್ರ ಸಲ್ಲಿಸಲಿದ್ದೇನೆ. ಏ.17 ಮತ್ತು 18ರಂದು ನಗರದ ಎಲ್ಲಾ 32 ವಾರ್ಡ್‌ಗಳ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಾಗುವುದು ಹಾಗೂ ಮಠಾಧೀಶರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಗುವುದು.
ಕೆ.ಎಸ್. ಈಶ್ವರಪ್ಪ, ಪ್ರತಿಪಕ್ಷ ನಾಯಕ.