Advertisement

ರೈತರನ್ನು “ಸಂತ್ರಸ್ತ’ರನ್ನಾಗಿಸಿದ ಮುಂಗಾರು

05:12 PM Oct 02, 2021 | Team Udayavani |

ಬೀದರ: ಒಕ್ಕಲಿಗ ಮಕ್ಕಳ ಕೈ ಹಿಡಿಯುವ “ಉತ್ತರಿ’ ಮತ್ತು “ಹಸ್ತ’ ನಕ್ಷತ್ರ ಮಳೆ ಧರಿನಾಡು ಬೀದರ ರೈತರ ಬದುಕನ್ನು ತನ್ನೊಟ್ಟಿಗೆ ಸೆಳೆದುಕೊಂಡು ಹೋಗಿದೆ. ಭೋರ್ಗರೆಯುತ್ತಿರುವ ಜಲಾಶಯ, ಸೇತುವೆಗಳು, ಕಣ್ಣು ಹಾಯಿಸಿದಲ್ಲೆಲ್ಲ ನೀರು, ನೆಲಸಮಗೊಂಡ ಕಟಾವಿಗೆ ಬಂದಿದ್ದ ಬೆಳೆಗಳು ಅನ್ನದಾತರನ್ನು ಘಾಸಿಗೊಳಿಸಿದೆ. ಭಾರಿ ಮಳೆ, “ಮಹಾ’ ನೀರಿನ ಕಂಟಕದಿಂದ ಜಿಲ್ಲೆಯಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಹೆಕ್ಟೇರ್‌ ಬೆಳೆ ನೀರು ಪಾಲಾಗಿದೆ.

Advertisement

ಸದಾ ಪ್ರಕೃತಿ ವಿಕೋಪದ ಹೊಡೆತಕ್ಕೆ ಸಿಲುಕುವ ಬಿಸಿಲೂರಿನ ರೈತರು ಕಳದೆರಡು ವರ್ಷದಿಂದ ವರುಣನ ಅವಕೃಪೆಗೆ ಒಳಗಾಗುತ್ತಿದ್ದು, ಅಕ್ಷರಶಃ ನಲುಗಿ ಹೋಗಿದ್ದಾರೆ. ಒಂದು ವಾರ ಎಡೆಬಿಡದೆ ಆರ್ಭಟಿಸಿದ್ದ ಮಳೆರಾಯ ಕಳೆದೆರಡು ದಿನಗಳಿಂದ ತಣ್ಣಗಾಗಿದ್ದಾನೆ. ಆದರೆ, ಮಳೆ ನಿಂತರು ಮರದ ಹನಿ ನಿಲ್ಲಲ್ಲ ಎನ್ನುವಂತೆ ಮಳೆ ಶಾಂತವಾಗಿದ್ದರೂ ನೆರೆ ಮಹಾರಾಷ್ಟ್ರದ ಕಂಟಕ ಮಾತ್ರ ಇನ್ನೂ ಮುಂದುವರೆದಿದೆ. ಲಾತೂರ ಜಿಲ್ಲೆಯ ಧನೇಗಾಂವ್‌ ಜಲಾಶಯದಿಂದ ಸಾವಿರಾರು ಕ್ಯೂಸೆಕ್‌ ನೀರು ಮಾಂಜ್ರಾ ನದಿಗೆ ಹರಿಬಿಟ್ಟಿರುವುದರಿಂದ ಜಿಲ್ಲೆಯ ನದಿ ತಡದ ಸಾವಿರಾರು ಹೆಕ್ಟೇರ್‌ ಭೂಮಿ ಜಲಮಯವಾಗಿದ್ದಷ್ಟೇ ಅಲ್ಲ ನೆರೆ ಆತಂಕವನ್ನು ಸೃಷ್ಟಿಸಿದೆ.

ಜಿಲ್ಲಾದ್ಯಂತ ಈ ಹಿಂದೆ ಸುರಿದ ಮಳೆಗೆ ಸಮೃದ್ಧವಾಗಿ ಬೆಳೆದಿದ್ದ ಉದ್ದು ಮತ್ತು ಹೆಸರು ಬೆಳೆ ಹಾನಿಗೀಡಾಗಿತ್ತು. ಈಗ ರಾಜ್ಯದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುವ ಸೋಯಾಬೀನ್‌ ನೀರು ಪಾಲಾಗಿದೆ. ಕೆಲ ರೈತರು ಕಟಾವು ಮಾಡಿ ಕೂಡಿಟ್ಟಿದ್ದರೆ, ಇನ್ನೂ ಕೆಲವರು ವರುಣನ ಬಿಡುವಿಗೆ ಕಾಯುತ್ತಿದ್ದರು. ಆದರೆ, ಸಂಜೆವರೆಗೆ ಕಣ್ಮುಂದೆ ನಳನಳಿಸುತ್ತಿದ್ದ ಬೆಳೆಗಳು ಮಳೆ ರುದ್ರ ನರ್ತನದಿಂದ ಬೆಳಿಗ್ಗೆ ನೋಡುವಷ್ಟರಲ್ಲೇ ಬೆಳೆ ಜತೆಗೆ ಮಣ್ಣು ಸಹ ನೀರು ಪಾಲಾಗಿದೆ. ಇದರಿಂದ ಸಾಲ ಸೂಲ ಮಾಡಿ ಭೂಮಿಗೆ ಸಾವಿರಾರು ರೂಪಾಯಿ ಹಾಕಿದ ರೈತರು ಕಣ್ಣೀರಲ್ಲಿ ಕೈತಳೆಯುವಂತಾಗಿದೆ. ಮುಂದಿನ ಬದುಕು ಹೇಗೆ? ಎಂಬ ಚಿಂತೆಯಲ್ಲಿದ್ದಾರೆ.

ಕಳೆದ ಜೂ.1ರಿಂದ ಸೆ.30ರವರೆಗೆ ಜಿಲ್ಲೆಯಲ್ಲಿ 731 ಮಿ.ಮೀ. ಮಳೆ (ವಾಡಿಕೆ ಮಳೆ 650 ಮಿ.ಮೀ.) ಬಿದ್ದಿದೆ. ಕೃಷಿ ಇಲಾಖೆ ಅಂಕಿ-ಅಂಶಗಳ ಪ್ರಕಾರ ಒಟ್ಟಾರೆ ಮುಂಗಾರು ಹಂಗಾಮಿನಲ್ಲಿ ಮಳೆ ಅಬ್ಬರಕ್ಕೆ 1,60,573 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬೆಳೆ ಸಂಪೂರ್ಣ ಹಾಳಾಗಿದೆ. ಕಳೆದ 15 ದಿನಗಳಲ್ಲಿ ಬಿದ್ದ ಮಳೆಗೆ 1 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಕೈಗೆ ಬಂದಿದ್ದ ಬೆಳೆ ಹಾನಿಯಾಗಿರುವುದು ರೈತರ ಬದುಕನ್ನೇ ಛಿದ್ರವಾಗಿಸಿದೆ.

ಕಳೆದ ಮುಂಗಾರು ಹಂಗಾಮಿನಲ್ಲೂ ಜಿಲ್ಲೆಯಲ್ಲಿ ರೈತರ ಬದುಕು ದುಸ್ತರಗೊಂಡಿತ್ತು. ಈ ವರ್ಷದ ಮುಂಗಾರಿನಲ್ಲಿ ಮಾರಣಾಂತಿಕ ಕೋವಿಡ್‌ ಸಂಕಷ್ಟದ ನಡುವೆಯೂ ಬಿತ್ತನೆ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ ಅನ್ನದಾತರಿಗೆ ಮಳೆ ಅಬ್ಬರ ಮತ್ತೆ ಸಂತ್ರಸ್ತರನ್ನಾಗಿಸುತ್ತಿದೆ. ಬೀದರನ್ನು ನೆರೆ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಬೇಕೆಂಬ ಒತ್ತಾಯ ಇದ್ದು, ಜಿಲ್ಲಾಡಳಿತದಿಂದ ಬೆಳೆಹಾನಿ ಸಮೀಕ್ಷೆ ನಡೆದು, ಯಾವಾಗ ಪರಿಹಾರ ಸಿಗುತ್ತದೇ ಕಾದು ನೋಡಬೇಕಿದೆ.

Advertisement

ಭಾರಿ ಮಳೆ ಮತ್ತು ಮಹಾರಾಷ್ಟ್ರದ ಧನೇಗಾಂವ್‌ ಜಲಾಶಯದಿಂದ ಮಾಂಜ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಬೀದರ ಜಿಲ್ಲೆಯಲ್ಲಿ ಇದುವರೆಗೆ 1.60 ಲಕ್ಷ ಹೇ. ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಇಡೀ ಬೀದರ ಜಿಲ್ಲೆಯನ್ನು ಸಂಪೂರ್ಣ ಪ್ರವಾಹ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲು ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವಿ ಮಾಡಿದ್ದೇನೆ.
ಪ್ರಭು ಚವ್ಹಾಣ, ಸಚಿವರು, ಬೀದರ

*ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next