Advertisement

ತನಿಖೆ ಮುಗಿದರೂ ಕೈಸೇರದ ಹಣ

12:37 AM Apr 04, 2019 | Team Udayavani |

ಬೆಂಗಳೂರು: ಪ್ರತಿ ತಿಂಗಳು ಶೇ.5ರಿಂದ 20ರಷ್ಟು ಬಡ್ಡಿ, ಅಲ್ಪಾವಧಿಯಲ್ಲಿ ಹಣ ದ್ವಿಗುಣ ಹಾಗೂ ಅತೀ ಕಡಿಮೆ ಬೆಲೆಗೆ ಮನೆ ಅಥವಾ ನಿವೇಶನ ಕೊಡಿಸುವುದಾಗಿ ಸಾವಿರಾರು ಜನರಿಂದ ಕೋಟ್ಯಂತರ ರೂ. ಸಂಗ್ರಹಿಸಿ ವಂಚಿಸಿರುವ ಸುಮಾರು 10 ಕಂಪನಿಗಳ ವಿರುದ್ಧ ಸಿಐಡಿ ತನಿಖೆ ಮುಕ್ತಾಯಗೊಳಿಸಿದ್ದರೂ, ವಂಚನೆಗೊಳಗಾವದರಿಗೆ ಮಾತ್ರ ಹಣ ಕೈಸೇರಿಲ್ಲ.

Advertisement

ಇದುವರೆಗೂ ಮೋಸ ಮಾಡಿದ ಆರೋಪ ಹೊತ್ತಿರುವ ಕಂಪನಿಗಳಲ್ಲಿ ಅಗ್ರಿಗೋಲ್ಡ್‌, ಹಿಂದೂಸ್ತಾನ್‌ ಇನ್‌ಫ್ರಾಕನ್‌, ಮೈತ್ರಿ ಪ್ಲಾಂಟೇಷನ್‌ ಮತ್ತು ಹಾರ್ಟಿಕಲ್ಚರ್‌ ಪ್ರೈ.ಲಿ, ಗ್ರೀನ್‌ ಬಡ್ಸ್‌ ಆಗ್ರೋ ಫಾರಂ ಲಿಮಿಟೆಡ್‌, ಹರ್ಷ ಎಂಟರ್‌ಟೈನ್‌ಮೆಂಟ್‌, ಡ್ರೀಮ್ಸ್‌ ಇನ್‌ಫ್ರಾ, ಟಿಜಿಎಸ್‌, ಗೃಹ ಕಲ್ಯಾಣ, ಸೆವನ್‌ ಹಿಲ್ಸ್‌, ವೃಕ್ಷ ಬಿಜಿನೆಸ್‌ ಸಲ್ಯೂಶನ್‌, ವಿನಿವಿಂಕ್‌, ಇನ್‌ವೆಸ್ಟೆಕ್‌, ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಪ್ರಮುಖವಾದುವು.

ಈ ಪೈಕಿ ಕೆಲವು ಕಂಪನಿಗಳು ಜನಸಾಮಾನ್ಯರಿಂದ ಹಣ ಪಡೆದು ವಂಚಿಸಿದ ಆರೋಪ ಎದುರಿಸಿದರೆ, ಇನ್ನೂ ಕೆಲವು ಕಂಪನಿಗಳ ಟಾರ್ಗೆಟ್‌ “ಆರ್ಥಿಕ ಸ್ಥಿತಿವಂತರು’. ಅಲ್ಪಾವಧಿಯಲ್ಲಿ ಹಣ ಗಳಿಸಲು ಹಪಾಹಪಿಸುವವರು, ಜತೆಗೆ ಗಣ್ಯರು, ಕ್ರೀಡಾಪಟುಗಳು, ಸಿನಿ ತಾರೆಯರು, ರಾಜಕೀಯ ಮುಖಂಡರು.

ಈ ವಂಚನೆ ಪ್ರಕರಣಗಳ ತನಿಖೆ ನಡೆಸಿರುವ ಪೊಲೀಸರು, ಹತ್ತಾರು ಮಂದಿ ಆರೋಪಿಗಳನ್ನು ಜೈಲಿಗಟ್ಟಿದ್ದು, ಅವರ ಆಸ್ತಿ-ಪಾಸ್ತಿ ಜಪ್ತಿ ಮಾಡಿದ್ದಾರೆ. ಆದರೆ, ಹಣ ಕಳೆದುಕೊಂಡವರಿಗೆ ಅಸಲು ಸಹ ಸಿಕ್ಕಿಲ್ಲ. ಕೆಲವು ಪ್ರಕರಣಗಳಲ್ಲಿ ವಂಚನೆ ಮೊತ್ತಕ್ಕೂ ಜಪ್ತಿ ಮಾಡಿಕೊಂಡ ಆಸ್ತಿ-ಪಾಸ್ತಿ ಮೌಲ್ಯಕ್ಕೂ ತುಲನೆಯಾಗದ ಕಾರಣ ಹಣ ಹೂಡಿಕೆ ಮಾಡಿದವರಿಗೆ ಮರಳಿಸಲು ಸಾಧ್ಯವಾಗಿಲ್ಲ.

ಮತ್ತೂಂದೆಡೆ ಕೆಲ ವಂಚಕ ಕಂಪನಿಗಳ ವಿರುದ್ಧ ತನಿಖೆ ನಡೆಸಿದ ಸಿಐಡಿ, ಕರ್ನಾಟಕ ರಾಜ್ಯ ಠೇವಣಿದಾರರ ಹಿತಾಸಕ್ತಿ ಸಂರಕ್ಷಣ ಅಧಿನಿಯಮ 2004ರ ಕಲಂ 3ರ ಅಡಿಯಲ್ಲಿ ಆರೋಪಿತ ಸಂಸ್ಥೆಗಳು ಮತ್ತು ಮಾಲೀಕರು ಅಥವಾ ನಿರ್ದೇಶಕರ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮತ್ತು ಅವುಗಳ ಹರಾಜು ಪ್ರಕ್ರಿಯೆ ನಡೆಸಿ ಬರುವಂತ ಹಣವನ್ನು ಹೂಡಿಕೆದಾರರಿಗೆ ಹಿಂದಿರುಗಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

Advertisement

ಆಸ್ತಿಗಳನ್ನು ಮುಟ್ಟುಗೋಲು ಹಾಕಿ, ಹರಾಜು ಹಾಕಲು ಸರ್ಕಾರದಿಂದ ಸಕ್ಷಮ ಪ್ರಾಧಿಕಾರ ಕೂಡ ರಚಿಸಲಾಗಿದೆ. ಆದರೆ, ಸಕ್ಷಮ ಪ್ರಾಧಿಕಾರದ ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ.

ಹರಾಜು ಹಾಕುವ ಅಧಿಕಾರ ಇಲ್ಲ: ವಂಚಕ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಿ, ಆರೋಪಿಗಳು ಅಕ್ರಮವಾಗಿ ಸಂಪಾದಿಸಿದ ಸ್ಥಿರಾಸ್ತಿ ಅಥವಾ ಚರಾಸ್ತಿಗಳನ್ನು ಜಪ್ತಿ ಮಾಡುವ ಅಧಿಕಾರ ಪೊಲೀಸರಿಗಿದೆ. ಅದನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕುವ ಅಧಿಕಾರ ಸರ್ಕಾರ ಹೊರತು ಪಡಿಸಿ ಬೇರೆ ಯಾವುದೇ ತನಿಖಾ ಸಂಸ್ಥೆಗಳಿಗಿಲ್ಲ.

ಆದರೆ, ಸರ್ಕಾರವೇ ರಚಿಸಿರುವ ಸಕ್ಷಮ ಪ್ರಾಧಿಕಾರ ಈ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಇದನ್ನು ಅರಿಯದ ಹೂಡಿಕೆದಾರರು ತನಿಖಾ ಸಂಸ್ಥೆಗಳ ಮೇಲೆ ಆರೋಪ ಮಾಡುತ್ತಾರೆ ಎಂದು ಸಿಐಡಿ ಅಧಿಕಾರಿಯೊಬ್ಬರು ಹೇಳಿದರು.

3,273 ಕೋಟಿ ರೂ. ಹೂಡಿಕೆ: ಇದುವರೆಗೂ ಅಗ್ರೀಗೋಲ್ಡ್‌, ಹಿಂದೂಸ್ಥಾನ್‌ ಇನ್‌ಫ್ರಾಕನ್‌, ಮೈತ್ರೀಪ್ಲಾಂಟೇಷನ್‌ ಮತ್ತು ಹಾರ್ಟಿಕಲ್ಚರ್‌ ಪ್ರೈ.ಲಿ, ಗ್ರೀನ್‌ ಬಡ್ಸ್‌ ಆಗ್ರೋ ಫಾರಂ ಲಿಮಿಟೆಡ್‌, ಹರ್ಷ ಎಂಟರ್‌ಟೈನ್‌ಮೆಂಟ್‌, ಡ್ರೀಮ್ಸ್‌ ಇನ್‌ಫ್ರಾ, ಟಿಜಿಎಸ್‌, ಗೃಹ ಕಲ್ಯಾಣ, ಸೆವನ್‌ ಹಿಲ್ಸ್‌, ವೃಕ್ಷ ಬಿಜಿನೆಸ್‌ ಸಲ್ಯೂಶನ್‌ ವಿರುದ್ಧ ರಾಜ್ಯದ ವಿವಿಧೆಡೆ ದಾಖಲಾಗಿದ್ದ 422 ಪ್ರಕರಣಗಳ ತನಿಖೆ ನಡೆಸಿರುವ ಸಿಐಡಿ, 17,93,480 ಮಂದಿ 3,273 ಕೋಟಿ ರೂ.ಗಿಂತ ಅಧಿಕ ಹಣ ಹೂಡಿಕೆ ಮಾಡಿರುವುದನ್ನು ಪತ್ತೆ ಹಚ್ಚಿದೆ. ಈ ಕಂಪನಿಗಳಿಗೆ ಸಂಬಂಧಿಸಿದ ಸುಮಾರು 594.10 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಗುರುತಿಸಿದೆ.

ಕಂಪನಿ ವಂಚನೆ ಮೊತ್ತ (ಅಂದಾಜು, ಕೋಟಿ ರೂ.ಗಳಲ್ಲಿ)
-ಅಗ್ರಿಗೋಲ್ಡ್‌ 1,640
-ಹಿಂದೂಸ್ತಾನ್‌ ಇನ್‌ಫ್ರಾಕಾನ್‌ 389
-ಸೆವನ್‌ ಹಿಲ್ಸ್‌ 81
-ಡ್ರೀಮ್ಸ್‌ ಇನ್‌ಫ್ರಾ 573
-ಟಿಜಿಎಸ್‌ 260
-ಗೃಹ ಕಲ್ಯಾಣ 277
-ವೃಕ್ಷ ಬಿಜಿನೆಸ್‌ 30
-ಹರ್ಷ ಎಂಟರ್‌ಟೈನ್‌ಮೆಂಟ್‌ 136
-ಮೈತ್ರಿ ಪ್ಲಾಂಟೆಷನ್‌ 10
-ಗ್ರೀನ್‌ ಬಡ್ಸ್‌ ಆಗ್ರೋ ಫಾರಂ 54
-ವಿನಿವಿಂಕ್‌ 203
-ಇನ್‌ವೆಸ್ಟೆಕ್‌ 200
-ವಿಕ್ರಂ ಇನ್‌ವೆಸ್ಟ್‌ಮೆಂಟ್‌ 500

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next