Advertisement

ಬಿಎಸ್‌ವೈ ಕೊಟ್ಟಿದ್ದು ಸ್ಥಳೀಯರು ಸಂಗ್ರಹಿಸಿದ್ದ ಹಣ

01:30 PM Apr 11, 2017 | Team Udayavani |

ದಾವಣಗೆರೆ: ರೈತ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಆತನ ಕುಟುಂಬಕ್ಕೆ ನೆರವಾಗಲು ಸ್ಥಳೀಯರು ಸಂಗ್ರಹಿಸಿದ 1 ಲಕ್ಷ ರೂ. ಪರಿಹಾರ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರ ವಿರುದ್ಧ ಕಾಂಗ್ರೆಸ್‌ ನಾಯಕರು ಟೀಕಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.  

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಿಶಿಣ ಬೆಳೆದ ಹೊಲದಲ್ಲಿ ಎರಡೂ ಬೋರ್‌ ವಿಫಲಗೊಂಡಿದ್ದಕ್ಕೆ ರೈತ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆ ಮಾಡಿಕೊಂಡ ದಿನವೇ ನಾನು ಆತನ ಮನೆಗೆ ಹೋಗಿದ್ದೆ. ಆ ವೇಳೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರನ್ನು ಕರೆದು ಕೊಂಡು ಬರುವುದಾಗಿ ಹೇಳಿದ್ದೆ.

ಅದರಂತೆ ಯಡಿಯೂರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಮನೆಗೆ ಬಂದರು. ಅಲ್ಲಿನ ಸ್ಥಳೀಯ ಕಾರ್ಯಕರ್ತರು, ಜನರು ಸಂಗ್ರಹಿಸಿದ ದೇಣಿಗೆ ಮೊತ್ತ 1 ಲಕ್ಷ ರೂ.ಗಳನ್ನು ಜನರ ಒತ್ತಾಯದ ಮೇರೆಗೆ ಯಡಿಯೂರಪ್ಪ ಮೃತ ರೈತನ ಪತ್ನಿಗೆ ಹಸ್ತಾಂತರಿಸಿದರು. ಇದನ್ನೇ ಕಾಂಗ್ರೆಸ್‌ ನಾಯಕರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದೆಲ್ಲಾ ಟೀಕಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಆತ್ಮಹತ್ಯೆ ಮಾಡಿಕೊಂಡ ರೈತನ ಸ್ವಗ್ರಾಮ ಆಲ್ದೂರಕೆರೆ ಗುಂಡ್ಲುಪೇಟೆಯಿಂದ 5 ಕಿಮೀ ದೂರದಲ್ಲಿದೆ. ಸಿದ್ದರಾಮಯ್ಯ ಮತ್ತವರ ಸಚಿವರು, ಶಾಸಕರು ಗುಂಡ್ಲುಪೇಟೆಯವರೆಗೆ ಬಂದಿದ್ದರು. ಆದರೆ, ಆ ರೈತನ ಮನೆಗೆ ಹೋಗಿ ಸಾಂತ್ವನ ಹೇಳಲಿಲ್ಲ. ನಮ್ಮ ನಾಯಕ ಯಡಿಯೂರಪ್ಪ ರೈತನ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದರಷ್ಟೇ. 

ಅದನ್ನೇ ರಾಜಕೀಯಕ್ಕೆ ಬಳಸಿಕೊಂಡ ಕಾಂಗ್ರೆಸ್‌ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಕಾಂಗ್ರೆಸ್‌ನವರು 2 ಕ್ಷೇತ್ರದ ಉಪಚುನಾವಣೆಗೆ 100 ಕೋಟಿ ರೂ. ಖರ್ಚು ಮಾಡಿದ್ದಾರೆ. ಆದರೆ, ಮೃತ ರೈತನ ಕುಟುಂಬಕ್ಕೆ ಒಂದಿಷ್ಟು ಪರಿಹಾರ ಹಣ ನೀಡುವ ಬಗ್ಗೆ ಆಲೋಚಿಸಿಲ್ಲ.

Advertisement

ಆದರೆ, ನಾವು ಮಾಡಿದ್ದನ್ನು ಕಟುವಾಗಿ ಟೀಕಿಸುತ್ತಿದ್ದಾರೆ ಎಂದರು. ಇನ್ನು ಚುನಾವಣೆ ಪ್ರಚಾರದ ವೇಳೆ ನನ್ನ ಕಾರ್‌ನಲ್ಲಿ 3 ಲಕ್ಷ ರೂ. ಹಣ ಸಿಕ್ಕು, ನಾನು ಪರಾರಿಯಾದೆ ಎಂದೆಲ್ಲಾ ಹೇಳುತ್ತಿದ್ದಾರೆ. ಇದೆಲ್ಲಾ ಸುಳ್ಳು. ನಾನು ತಾಯಿ ಹಾಲು ಕುಡಿದವನು. ಓಡಿ ಹೋಗುವುದು ನನ್ನ ಜಾಯಮಾನವೇ ಅಲ್ಲ. ಯಾವುದೋ ರೈತ ಅರಿಶಿನ ಮಾರಿದ್ದ ದುಡ್ಡನ್ನು ತಂದಿದ್ದ.

ಅದನ್ನೇ ನನ್ನದೆಂದು ಬಿಂಬಿಸಿ, ಕಾನೂನು ಉಲ್ಲಂಘನೆ ಮಾಡಿದ್ದಾರೆಂಬ ಆರೋಪ ಹೊರೆಸಲು ಕಾಂಗ್ರೆಸ್‌ ನಾಯಕರು ಪ್ರಯತ್ನಿಸಿದರು ಎಂದರು. ತಾಪಂ ಸದಸ್ಯ ಆಲೂರು ನಿಂಗರಾಜ, ಪಿ.ಸಿ. ಶೀನಿವಾಸ್‌, ಬಸವರಾಜ ಕೂಲಂಬಿ, ಕೆ.ಪಿ. ಕಲ್ಲಿಂಗಪ್ಪ, ಧನುಷ್‌, ಸುರೇಶ, ರಾಜು, ಎಚ್‌.ಎನ್‌. ಶಿವಕುಮಾರ್‌ ಇತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next