ಬೆಂಗಳೂರು: ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಅಮೆಜಾನ್ ಕಂಪನಿಯ ಪಾರ್ಸೆಲ್ ವಿಭಾಗದ ಮ್ಯಾನೇಜರ್ ಒಬ್ಬ ಬುಧವಾರ ನಸುಕಿನಲ್ಲಿ ನೈಸ್‌ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಎಚ್‌ಎಸ್‌ಆರ್ ಲೇಔಟ್ ನಿವಾಸಿ ಸಂತೋಷ್(32) ಮೃತರು. ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್, ಈ ಮೊದಲು ಬಸವೇಶ್ವರ ನಗರದ ಅಷ್ಟಗ್ರಾಮ ಲೇಔಟ್‌ನಲ್ಲಿ ಪೋಷಕರ ಜತೆ ವಾಸವಾಗಿದ್ದ. ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದು, ಬಳಿಕ ಪತ್ನಿ ಜತೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದ.
ಈ ಮಧ್ಯೆ ಎರಡು ತಿಂಗಳ ಹಿಂದೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಸಂತೋಷ್ ನಾಪತ್ತೆಯಾಗಿದ್ದು, ಎಲ್ಲಿಗೆ ಹೋಗಿದ್ದಾನೆ ಎಂಬ ಮಾಹಿತಿಯೂ ಇರಲಿಲ್ಲ. ಈ ಬಗ್ಗೆ ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆ ಬಳಿಕ ಪೊಲೀಸರು ಎಲ್ಲೆಡೆ ಶೋಧಿಸಿದರೂ ಸಂತೋಷ್ ಇರುವಿಕೆಯ ಮಾಹಿತಿ ದೊರೆತಿರಲಿಲ್ಲ.
ರಸ್ತೆ ಅಪಘಾತದಲ್ಲಿ ಸಾವು: ಬುಧವಾರ ನಸುಕಿನ 3 ಗಂಟೆಗೆ ಹರಿಯಾಣ ನೋಂದಣಿಯ ಲಾರಿ ಯೊಂದರ ಬೈ ರಾಡ್ ತುಂಡಾಗಿದ್ದರಿಂದ ಚಾಲಕ ಇಂದ್ರ ಪ್ರತಾಪ್‌ಸಿಂಗ್ ಮೈಸೂರು-ತುಮಕೂರು ನೈಸ್ ರಸ್ತೆಯ ಟೋಲ್‌ಗೇಟ್ ಸಮೀಪ ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿ, ರಿಪೇರಿ ಮಾಡುತ್ತಿದ್ದರು. ಮುಂಜಾನೆ 4.30ರಲ್ಲಿ ಇದೇ ಮಾರ್ಗದಲ್ಲಿ ಕಾರಿನಲ್ಲಿ ಅತೀವೇಗವಾಗಿ ಬಂದ ಸಂತೋಷ್, ನಿಲುಗಡೆ ಮಾಡಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಲಾರಿ ಸ್ವಲ್ಪ ಮುಂದೆ ಹೋಗಿದ್ದು, ರಿಪೇರಿ ಮಾಡುತ್ತಿದ್ದ ಚಾಲಕ ಇಂದ್ರಪ್ರತಾಪ್‌ಸಿಂಗ್ ಹಾಗೂ ಕ್ಲಿನರ್‌ಗೆ ಗಾಯಗಳಾಗಿವೆ.
ನಂತರ ಡಿಕ್ಕಿ ಹೊಡೆದ ಕಾರಿನ ಬಳಿ ಬಂದು ನೋಡಿದಾಗ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಸಂತೋಷ್ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂಬುದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಮೃತಪಟ್ಟ ಸಂತೋಷ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.
ಘಟನೆಗೆ ಕಾರಿನ ಅತಿ ವೇಗವೇ ಕಾರಣ: ಪ್ರಾಥಮಿಕ ತನಿಖೆಯಲ್ಲಿ ಲಾರಿ ಚಾಲಕ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡು ರಸ್ತೆ ಬದಿ ಲಾರಿ ನಿಲ್ಲಿಸಿದ್ದಾನೆ. ಆದರೆ, ಕಾರು ಚಾಲಕ ಸಂತೋಷ್‌ನ ಅತಿ ವೇಗ ಮತ್ತು ಅಜಾಗರೂಕತೆ ಚಾಲನೆ ಘಟನೆಗೆ ಕಾರಣ ಎಂಬುದು ಗೊತ್ತಾಗಿದೆ. ಹೀಗಾಗಿ ಸಂತೋಷ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿಗೆ ಇ-ಮೇಲ್ ಮಾಡಿದ್ದ ಸಂತೋಷ್:
ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಸಂತೋಷ್, ಎರಡು ದಿನಗಳ ಹಿಂದೆ ಪತ್ನಿ ಇ-ಮೇಲ್ ವಿಳಾಸಕ್ಕೆ ಬುಧವಾರ ಬೆಂಗಳೂರಿಗೆ ಬರುತ್ತಿರುವುದಾಗಿ ಸಂದೇಶ ಕಳುಹಿಸಿದ್ದಾನೆ. ಅದನ್ನು ಗಮನಿಸಿದ ಪತ್ನಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.