Advertisement
ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ಜಾಕ್ವೆಲ್‌ನಿಂದ ನೀರೆತ್ತಿ ವಡ್ಡಗೆರೆ ಕೆರೆಗೆ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲು ಕಾರ್ಯಕ್ರಮ ನಿಗದಿಯಾಗಿತ್ತು. ಕೊನೆ ಕ್ಷಣದಲ್ಲಿ ಕಾರ್ಯಕ್ರಮ ರದ್ದುಗೊಳಿಸಿದ್ದಕ್ಕೆ ಆಕ್ರೋಶಗೊಂಡ ಗುಂಡ್ಲುಪೇಟೆ ಶಾಸಕ ಸಿ.ಎಸ್. ನಿರಂಜನ್‌ಕುಮಾರ್ ಹಾಗೂ ರೈತರು ನಗರದ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಸಚಿವ ಪುಟ್ಟರಂಗಶೆಟ್ಟಿ ವಿರುದ್ಧ ಪ್ರತಿಭಟನೆ ನಡೆಸಿದರು.
Related Articles
Advertisement
ರೈತರ ವಿಚಾರದಲ್ಲಿ ರಾಜಕಾರಣ ಮಾಡುವುದು ಬೇಡ. ಮಾಹಿತಿ ಕೊರತೆಯಿಂದ ಸಚಿವರು ಕಾರ್ಯಕ್ರಮ ರದ್ದುಗೊಳಿಸಿದ್ದಾರೆ ಎಂದು ಭಾವಿಸುತ್ತೇನೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕು ಎಂದು ಶಾಸಕ ನಿರಂಜನಕುಮಾರ್ ಒತ್ತಾಯಿಸಿದರು. ಕಾರಿನಿಂದ ಇಳಿದು ರೈತರ ಸಮಸ್ಯೆಯನ್ನು ಆಲಿಸದೇ ಕಾರಿನಲ್ಲೇ ಕುಳಿತಿದ್ದ ಸಿ. ಪುಟ್ಟರಂಗಶೆಟ್ಟಿ ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಶಾಸಕ ನಿರಂಜನ್‌ಕುಮಾರ್ ಸಚಿವರ ಮಧ್ಯಪ್ರವೇಶಿಸಿದರು. ರೈತರು ಪ್ರವಾಸಿ ಮಂದಿರಕ್ಕೆ ಬನ್ನಿ ಅಲ್ಲೇ ಮಾತನಾಡೋಣ ಎಂದು ಹೇಳಿ ಸಚಿವರು, ಶಾಸಕ ನಿರಂಜನ್ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋದರು.
ಆದರೆ, ಪ್ರವಾಸಿ ಮಂದಿರಕ್ಕೆ ರೈತರು ಎಲ್ಲರು ಆಗಮಿಸಿದಾಗ ಸಚಿವ ಸಿ. ಪುಟ್ಟರಂಗಶೆಟ್ಟಿ ಮತ್ತು ಶಾಸಕ ನಿರಂಜನ್ ಕುಮಾರ್ ಪ್ರವಾಸಿಮಂದಿರದಲ್ಲಿ ಇಲ್ಲದಿರುವುದನ್ನು ಕಂಡು ಸಚಿವರು ಹಾಗೂ ಶಾಸಕ ನಿರಂಜನ್ ಕುಮಾರ್ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಮಲ್ಲೇಶ್, ತಾಪಂ ಸದಸ್ಯ ಮಹದೇವಸ್ವಾಮಿ, ತಾಲೂಕು ರೈತ ಸಂಘದ ಅಧ್ಯಕ್ಷ ಸಂಪತ್ತು, ಮುಖಂಡರಾದ ಅಭಿಷೇಕ್, ನಾಗೇಂದ್ರ ಸೇರಿದಂತೆ 50ಕ್ಕೂ ಹೆಚ್ಚು ರೈತರು, ಮುಖಂಡರು ಭಾಗವಹಿಸಿದ್ದರು.