Advertisement

ಕೇಂದ್ರ ಸರ್ಕಾರದಿಂದ ಗ್ರಾಮೀಣ ಬ್ಯಾಂಕ್‌ಗಳ ವಿಲೀನ?

06:00 AM Aug 02, 2018 | |

ಬಳ್ಳಾರಿ: ಕಳೆದ ವರ್ಷವಷ್ಟೇ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನಗೊಳಿಸಿದ್ದ ಕೇಂದ್ರ ಸರ್ಕಾರ, ಇದೀಗ ಗ್ರಾಮೀಣ ಬ್ಯಾಂಕ್‌ಗಳ ವಿಲೀನಕ್ಕೆ ಮುಂದಾಗುತ್ತಿದೆ.

Advertisement

ಹೈದರಾಬಾದ್‌ ಕರ್ನಾಟಕ ಪ್ರದೇಶದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌, ಉತ್ತರ ಕರ್ನಾಟಕ ಭಾಗದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಮತ್ತು ಮೈಸೂರಿನ ಕಾವೇರಿ ಗ್ರಾಮೀಣ ಬ್ಯಾಂಕ್‌ಗಳ ವಿಲೀನಕ್ಕೆ ಚಿಂತನೆ ನಡೆದಿದೆ. ಗ್ರಾಮೀಣ ಬ್ಯಾಂಕ್‌ಗಳನ್ನು ಒಂದೇ ಸೂರಿನಡಿ ತಂದು ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದು ಇದರ ಮುಖ್ಯ ಉದ್ದೇಶ ಎನ್ನಲಾಗುತ್ತಿದೆ.

ಬೆಂಗಳೂರು, ಮೈಸೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಧಾನ ಶಾಖೆಗಳನ್ನು ಹೊಂದಿರುವ ಈ ಮೂರು ಗ್ರಾಮೀಣ ಬ್ಯಾಂಕ್‌ಗಳ ನಡುವೆ ಏಕರೂಪದ ಆಡಳಿತ ತಂದು ಇಡೀ ರಾಜ್ಯದಲ್ಲಿ ಒಂದೇ ಗ್ರಾಮೀಣ ಬ್ಯಾಂಕ್‌ ಕಾರ್ಯ ನಿರ್ವಹಿಸುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಲನಕ್ಷೆ ಸಿದ್ಧಪಡಿಸಿದೆ.

ವಿಲೀನದಿಂದ ಗ್ರಾಹಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದರ ಜತೆಗೆ ಕೂಲಿಕಾರರು, ರೈತಾಪಿ ವರ್ಗದವರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ನಿವಾರಣೆಗೆ ಸಹಕಾರಿಯಾಗಲಿದೆ. ಈ ಹಿನ್ನೆಲೆ ಈ ಮೂರೂ ಗ್ರಾಮೀಣ ಬ್ಯಾಂಕ್‌ಗಳ ವಿಲೀನಕ್ಕೆ ಸರಕಾರ ಹಸಿರು ನಿಶಾನೆ ತೋರಿದೆ ಎನ್ನಲಾಗಿದೆ.

ಈ ಹಿಂದೆ ಸುಮಾರು 13ಕ್ಕೂ ಹೆಚ್ಚು ಗ್ರಾಮೀಣ ಬ್ಯಾಂಕುಗಳ ಪ್ರಧಾನ ಶಾಖೆಗಳಿದ್ದವು. ಕಾಲಕ್ರಮೇಣ ವಿಲೀನಗೊಳ್ಳುತ್ತಾ ಈಗ ಕೇವಲ ಮೂರೇ ಪ್ರಧಾನ ಶಾಖೆಗಳಿವೆ. ಇವುಗಳನ್ನೂ ವಿಲೀನಗೊಳಿಸಿ ರಾಜ್ಯಕ್ಕೆ ಒಂದೇ ಗ್ರಾಮೀಣ ಬ್ಯಾಂಕಿನ ಮುಖ್ಯ ಶಾಖೆಯನ್ನಾಗಿಸುವುದರಿಂದ ನೌಕರರ ಕಾರ್ಯವ್ಯಾಪ್ತಿ ಹೆಚ್ಚಲಿದೆ. ಅಲ್ಲದೆ, ಮೂರೂ ಬ್ಯಾಂಕಿನ ನಾನಾ ಶಾಖೆಗಳಲ್ಲಿ ಅಂದಾಜು 75 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದೆ. ಅಂದಾಜು 400 ಕೋಟಿಯಷ್ಟು ನಿವ್ವಳ ಲಾಭ ಹರಿದು ಬರುತ್ತಿದೆ. ವಿಲೀನ ಪ್ರಕ್ರಿಯೆಯಿಂದ ಬ್ಯಾಂಕಿನ ವಹಿವಾಟು ಮತ್ತು ನಿವ್ವಳ ಲಾಭಾಂಶ ಹೆಚ್ಚುವ  ಸಾಧ್ಯತೆಯಿದೆ.

Advertisement

ಬ್ಯಾಂಕ್‌ ಸ್ಥಾಪನೆಯ ಉದ್ದೇಶ: ರೈತ ಸಮುದಾಯ ಅತೀವ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದನ್ನು ಅರಿತಿದ್ದ ಅಂದಿನ ಕೇಂದ್ರ ಸರ್ಕಾರ ಕೆನರಾ ಬ್ಯಾಂಕಿನ ಪ್ರಾಯೋಜಕತ್ವದಡಿ ತುಂಗಭದ್ರಾ ಗ್ರಾಮೀಣ ಬ್ಯಾಂಕ್‌ (ಇಂದಿನ ಪಿಕೆಜಿಬಿ) ಆರಂಭಕ್ಕೆ ಮುಂದಾಗಿತ್ತು. ಅದಕ್ಕಾಗಿ ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ಕರ್ನಾಟಕದ ಬಳ್ಳಾರಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿತ್ತು. ಬ್ಯಾಂಕ್‌ನ ಮೊದಲ ಶಾಖೆಯನ್ನು ತಾಲೂಕಿನ ಬಾಣಾಪುರದಲ್ಲಿ ಅಂಚೆ ಕಚೇರಿ ಮಾದರಿಯಲ್ಲಿ ತೆರೆಯಲಾಗಿತ್ತು.

ಸಹಕಾರಿ ತತ್ವದಡಿ ಹಾಗೂ ವಾಣಿಜ್ಯಿಕ ಹೆಸರಿನಡಿ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕುಗಳು ಗ್ರಾಮೀಣ ಪ್ರದೇಶದ ಜನರ ಸೇವೆಗೆ ಮುಂದಾಗದ ಕಾರಣ, 1975ರಲ್ಲಿ ಪ್ರಧಾನಿಯಾಗಿದ್ದ  ದಿ.ಇಂದಿರಾಗಾಂಧಿ ಗ್ರಾಮೀಣ ಬ್ಯಾಂಕ್‌ ಸ್ಥಾಪನೆಗೆ ಮುಂದಾಗಿದ್ದರು. ಬಳ್ಳಾರಿ ತಾಲೂಕಿನ ಬಾಣಾಪುರ ಹಾಗೂ ರಾಯಚೂರು ಜಿಲ್ಲೆಯ ಕಲ್ಲೂರು ಗ್ರಾಮದಲ್ಲಿ ತುಂಗಭದ್ರಾ ಗ್ರಾಮೀಣ ಬ್ಯಾಂಕಿನ ಗ್ರಾಮೀಣ ಶಾಖೆಯನ್ನು ಮೊದಲ ಬಾರಿಗೆ ಆರಂಭಿಸಿದ್ದರು. ಕೇಂದ್ರ ಸರ್ಕಾರದ 50 ಲಕ್ಷ, ಕೆನರಾ ಬ್ಯಾಂಕಿನ 35 ಲಕ್ಷ ಹಾಗೂ ಆಯಾ ರಾಜ್ಯ ಸರ್ಕಾರದಿಂದ 15 ಲಕ್ಷ  ರೂ. ಸೇರಿದಂತೆ ಅಂದಾಜು 1 ಕೋಟಿ ರೂ. ಬಂಡವಾಳದಲ್ಲಿ ಗ್ರಾಮೀಣ ಬ್ಯಾಂಕ್‌ ಪ್ರಾರಂಭವಾಗಿತ್ತು.

ಮೊದಲಿಂದಲೂ ಗ್ರಾಮೀಣ ಬ್ಯಾಂಕುಗಳ ಕಾರ್ಯವೈಖರಿ ಏಕರೂಪದ್ದಾಗಿರಬೇಕು ಎಂಬ ಬೇಡಿಕೆಯಿತ್ತು. ಅದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸುವ ಲಕ್ಷಣ ಇತ್ತು. ಬೆಂಗಳೂರು ಅಥವಾ ಬಳ್ಳಾರಿ ಹಾಗೂ ಮೈಸೂರಿನಲ್ಲೇ ಗ್ರಾಮೀಣ ಬ್ಯಾಂಕುಗಳ ಕೇಂದ್ರ ಕಚೇರಿಯಾಗಲಿ  ಅಭ್ಯಂತರವಿಲ್ಲ.
– ಕೆ.ಎಂ.ಗುರುಮೂರ್ತಿ, ಪ್ರಗತಿಕೃಷ್ಣಾ ಗ್ರಾಮೀಣ ಬ್ಯಾಂಕ್‌ ನೌಕರರ ಸಂಘದ ಮುಖಂಡ.

– ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next