Advertisement

ಹೆಣ್ತನ ಎಂಬ ಸುಮಧುರ ಪರಿಮಳ

02:15 AM Feb 16, 2021 | Team Udayavani |

ಹೆಣ್ತನ ಎಂಬುದು ಸ್ತ್ರೀಲಿಂಗಕ್ಕೆ ಸಂಬಂಧ ಪಟ್ಟದಲ್ಲ. ಅದೊಂದು ಗುಣ. ಸಹಾನು ಭೂತಿ, ಪ್ರೀತಿ, ತಾಳ್ಮೆ, ಒಲುಮೆ, ಅನು ಕಂಪ ಇವೆಲ್ಲ ಅದರ ಲಕ್ಷಣಗಳು. ಎಲ್ಲ ಪುರುಷರೂ ಹೆಣ್ತನವಿಲ್ಲದ ಸ್ತ್ರೀಯರೂ ಬೆಳೆಸಿಕೊಳ್ಳಬೇಕಾದಂಥ ಸದ್ಗುಣವಿದು.
ಒಂದು ಕಥೆಯಿದೆ.

Advertisement

ವಾಚಸ್ಪತಿ ಒಂಬತ್ತನೇ-ಹತ್ತನೇ ಶತ ಮಾನದಲ್ಲಿ ಆಗಿಹೋದ ಒಬ್ಬ ಮಹಾ ಜ್ಞಾನಿ. ಸಣ್ಣ ವಯಸ್ಸಿನಿಂದಲೇ ಪಾರ ಲೌಕಿಕ ಚಿಂತನೆಗಳು ಆತನ ಬದುಕಿನ ಭಾಗವಾಗಿದ್ದವು, ಅವನಿಗೆ ಇಹದ ಪರಿವೆಯೇ ಇರಲಿಲ್ಲ.

ವಾಚಸ್ಪತಿ ಪ್ರಾಪ್ತ ವಯಸ್ಕನಾದಾಗ ಒಂದು ದಿನ ಅವನ ತಂದೆ “ಮದುವೆ ಆಗುವೆಯಾ’ ಎಂದು ಅವನನ್ನು ಪ್ರಶ್ನಿಸಿದರು. ಸದಾ ದೇವರು, ಅಧ್ಯಾತ್ಮ, ಮೋಕ್ಷ ಇತ್ಯಾದಿ ಚಿಂತನೆ ಯಲ್ಲೇ ಇರುತ್ತಿದ್ದ ವಾಚಸ್ಪತಿಗೆ ತಂದೆ ಹೇಳಿದ್ದು ಏನು ಕೇಳಿಸಿತೋ! “ಹ್ಹೂಂ’ ಎಂದುಬಿಟ್ಟ.

ಮದುವೆಗೆ ತಯಾರಿ ಆರಂಭ ವಾಯಿತು. ವಾಚಸ್ಪತಿಗೆ ಇದೆಲ್ಲ ಯಾವುದೂ ತಲೆಯೊಳಗೆ ಹೊಕ್ಕಲೇ ಇಲ್ಲ. ಮದುವೆಯ ದಿನವೂ ಬಂತು. ಸಿಂಗರಿಸಲ್ಪಟ್ಟು ಕುದುರೆಯ ಮೇಲೆ ಕುಳ್ಳಿರಿಸಿದಾಗಲಷ್ಟೇ ಅವನಿಗೆ ಏನೋ ನಡೆಯುತ್ತಿದೆ ಎಂದು ಅನ್ನಿಸಿದ್ದು.

“ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತಿರುವಿರಿ’ ಎಂದು ವಾಚಸ್ಪತಿ ತಂದೆಯನ್ನು ಪ್ರಶ್ನಿಸಿದ. “ಮೂರ್ಖ! ನಿನ್ನ ಮದುವೆಯಲ್ಲವೇ? ಅವತ್ತು ಹ್ಹೂಂ ಅಂದದ್ದು ನೀನಲ್ಲವೇ’ ಎಂದು ಬೈದರು. ಅಲ್ಲಿಂದ ಮುಂದೆ ವಾಚಸ್ಪತಿ ಮಾತಾಡಲಿಲ್ಲ. ಮೌನವಾಗಿ ತಂದೆ, ಪುರೋಹಿತರು ಹೇಳಿದಂತೆ ನಡೆದುಕೊಂಡ. ವಧುವಿನೊಂದಿಗೆ ಮನೆಗೆ ಮರಳಿದ್ದೂ ಆಯಿತು.

Advertisement

ಇಷ್ಟಾದರೂ ವಾಚಸ್ಪತಿಗೆ ತನಗೆ ಮದುವೆಯಾಗಿದೆ, ಮನೆಯಲ್ಲಿ ತನ್ನವ ಳಾದ ಹೆಣ್ಣೊಬ್ಬಳು ಇದ್ದಾಳೆ ಎಂಬುದರ ಅರಿವೇ ಇರಲಿಲ್ಲ. ಆತ ಮತ್ತೆ ತನ್ನ ಹಿಂದಿನ ಜೀವನಕ್ರಮಕ್ಕೆ ಹೊರಳಿ ಕೊಂಡ. ವೇದಾಧ್ಯಯನ, ಜಪತಪ, ಧ್ಯಾನ ಇತ್ಯಾದಿಗಳೇ ಬದುಕಾದವು. ಆ ಸಮಯದಲ್ಲಿ ವಾಚಸ್ಪತಿ ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆಯಲು ಆರಂಭಿಸಿದ್ದ. ಅವನ ಹಗಲು ರಾತ್ರಿಗಳು ಅದರಲ್ಲೇ ಕಳೆಯ ತೊಡಗಿದವು.

ವಾಚಸ್ಪತಿಗೆ ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆದು ಮುಗಿಸಲು ಹನ್ನೆರಡು ವರ್ಷಗಳು ತಗಲಿದವು. ಆದರೆ ಒಂದು ದಿನವೂ ನವವಧು ಆತನ ಏಕಾಂತಕ್ಕೆ ಅಡ್ಡಿ ಬರಲಿಲ್ಲ. ಪ್ರತೀ ದಿನವೂ ಸಂಜೆ ಆಕೆ ಅವನ ವ್ಯಾಸಪೀಠದ ಮುಂದೆ ಹಣತೆ ಹಚ್ಚಿಡುತ್ತಿದ್ದಳು. ಬೆಳಗ್ಗೆ ಅವನ ಪಾದಗಳ ಮೇಲೆ ಹೂವುಗಳನ್ನು ಇರಿಸುತ್ತಿದ್ದಳು. ಹೊತ್ತುಹೊತ್ತಿಗೆ ಊಟ ತಂದಿಡುತ್ತಿದ್ದಳು. ಆಗೆಲ್ಲ ತನ್ನ ಇರವು ವಾಚಸ್ಪತಿಯ ಅರಿವಿಗೆ ಬರದಂತೆ ಎಚ್ಚರದಿಂದ ಇರುತ್ತಿದ್ದಳು.

ಹೀಗೆ ಹನ್ನೆರಡು ವರ್ಷಗಳು ಕಳೆದವು. ಒಂದು ಹುಣ್ಣಿಮೆಯ ದಿನ ಇರುಳು ವಾಚ ಸ್ಪತಿಯ ಭಾಷ್ಯ ರಚನೆ ಪೂರೈಸಿತು. ಆತ ಬರವಣಿಗೆ ಮುಗಿಸಿ ಮಲಗಲು ಎದ್ದಾಗ ಪತ್ನಿ ದೀಪವನ್ನು ಆರಿಸುವುದಕ್ಕೆ ಮುಂದಾದಳು. ಬಳೆಗಳ ಸಪ್ಪಳ ಕೇಳಿ ವಾಚಸ್ಪತಿಗೆ ಅಚ್ಚರಿಯೋ ಅಚ್ಚರಿ. “ಬಾಗಿಲುಗಳೆಲ್ಲ ಮುಚ್ಚಿರುವಾಗ ಒಳಗೆ ಹೇಗೆ ಬಂದೆ? ಯಾರು ನೀನು?’ ಎಂದು ಪ್ರಶ್ನಿಸಿದನಾತ.
“ನೀವು ಮರೆತಿರಬಹುದು. ಹನ್ನೆರಡು ವರ್ಷಗಳ ಹಿಂದೆ ನಿಮಗೆ ಮದುವೆ ಯಾಯಿತು. ನಿಮ್ಮ ಕೈಹಿಡಿದು ಬಂದ ನಿಮ್ಮ ಪತ್ನಿ ನಾನು’ ಎಂದಳು ಭಾಮತಿ. ಅದು ವಾಚಸ್ಪತಿಯ ಪತ್ನಿಯ ಹೆಸರು.

ವಾಚಸ್ಪತಿ ಮಗುವಿನಂತೆ ಅತ್ತುಬಿಟ್ಟ. “ದಿನವೂ ನನಗೆ ಊಟೋಪಹಾರಗಳನ್ನು ತಂದಿಡುತ್ತಿದ್ದದ್ದು ನೀನೆಯೇ! ನನ್ನ ಪಾದಗಳ ಮೇಲೆ ಹೂವುಗಳನ್ನು ಇರಿಸು ತ್ತಿದ್ದದ್ದು ನೀನೆಯೇ! ನೀನೇ ದೀಪ ಹಚ್ಚಿಡುತ್ತಿದ್ದೆಯಾ’ ಎಂದು ಕೇಳಿದ. “ಹೌದು, “ಆದರೆ ನಿಮ್ಮ ಏಕಾಗ್ರತೆಗೆ ಭಂಗ ಬರಬಾರದು ಎಂದು ನಾನು ಮರೆ ಯಲ್ಲೇ ಇದ್ದೆ’ ಎಂದಳು ಭಾಮತಿ.

ವಾಚಸ್ಪತಿ ತನ್ನ ಪತ್ನಿಯ ಗೌರವಾರ್ಥ ತನ್ನ ಭಾಷ್ಯಗ್ರಂಥಕ್ಕೆ “ಭಾಮತಿ’ ಎಂದೇ ಹೆಸರಿಟ್ಟ. “ಭಾಮತಿ’ ಇಂದು ಕೂಡ ಸುಪ್ರಸಿದ್ಧ. ವಾಚಸ್ಪತಿಯ ಹೆಸರು ಕೇಳಿದವರು ಹೆಚ್ಚು ಜನರಿಲ್ಲ!

ತಾನು ಅದೃಶ್ಯವಾಗಿದ್ದು ಪ್ರೀತಿ, ಸಹನೆ, ಸಹಾನುಭೂತಿಯಂತಹ ಗುಣಗಳ ಮಧುರ ಕಂಪನ್ನು ಹರಡಬಲ್ಲಂಥದ್ದು ಹೆಣ್ತನ.

( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next