ಮಾನ್ವಿ: ತಾಲೂಕಿನ ನೀರಮಾನವಿ ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನ ಎದುರಿನ ಪರಶುರಾಮ ಹಾಗೂ ಮಾತಂಗಿ ಮಂದಿರಗಳನ್ನು ನಿರ್ಮಾಣ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸರ್ಕಾರಿ, ಅರೆಕಾಲಿಕ ದಿನಗೂಲಿ ನೌಕಕರ ಸಂಘದ ಪದಾಧಿಕಾರಿಗಳು ಶನಿವಾರ ಶಾಸಕರ ಭವನದ ಎದುರು ಧರಣಿ
ನಡೆಸಿದರು.
ಯಲ್ಲಮ್ಮದೇವಿ ದೇವಸ್ಥಾನ ಸರ್ಕಾರ ಸ್ವಾಧೀನದಲ್ಲಿದೆ. ತಾಲೂಕು ದಂಡಾ ಧಿಕಾರಿಗಳು ದೇವಸ್ಥಾನ ನಿರ್ಮಾಣ ಕಾರ್ಯವನ್ನೆತ್ತಿಕೊಂಡು ಮೂರು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಯಲ್ಲಮ್ಮದೇವಿಯ ಮಕ್ಕಳಾದ ಪರುಶುರಾಮ ಹಾಗೂ ಮಾತಂಗಿ ಮಂದಿರಗಳನ್ನು ಹೊಸದಾಗಿ ನಿರ್ಮಿಸುವ ಕುರಿತು ಶಿಲ್ಪಿಗಾರ ಹಾಗೂ ತಾಲೂಕು ದಂಡಾಧಿಕಾರಿಗಳ ಮತ್ತು ಗ್ರಾಮಸ್ಥರ ನಡುವೆ ಮಾತುಕತೆಯಾಗಿದೆ. ಆದರೆ ಶಿಲ್ಪಿಗಾರ ಮಂದಿರಗಳ ನಿರ್ಮಾಣಕ್ಕೆ 60 ಲಕ್ಷ ರೂ. ಖರ್ಚಾಗುತ್ತದೆ ಎಂದು ನೆಪ ಹೇಳಿ ದೇವಸ್ಥಾನ ಅರ್ಚಕರು ಹಾಗೂ ಶಿಲ್ಪಿಗಾರರು ಲಕ್ಷಾಂತರ ರೂ.
ಗಳನ್ನು ಲೂಟಿ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಪತ್ರಿ ವರ್ಷ ದೇವಸ್ಥಾನದ ಆದಾಯದಲ್ಲಿ ಅರ್ಚಕರ ವರ್ಗ ಹಾಗೂ ಆಡಳಿತ ತಮ್ಮ ಪ್ರತ್ಯೇಕ ಬ್ಯಾಂಕ್ ಖಾತೆಗಳನ್ನು ತೆರೆದಿಟ್ಟುಕೊಂಡು ದೇವಸ್ಥಾನದ ಹಣವನ್ನು ಲೂಟಿ ಮಾಡುತ್ತಿದ್ದಾರೆ. ದೇವಸ್ಥಾನಕ್ಕೆ ಯಾವ ಸಮಿತಿ ರಚನೆ ಹಾಗೂ ದೇವಸ್ಥಾನ ಜೀರ್ಣೋದ್ಧಾರ ಮಾಡದೇ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ದೇವಸ್ಥಾನಕ್ಕೆ ಭೂ ದಾನಿಗಳು ಭೂಮಿಗಳನ್ನು ವಿವಿಧ ಗ್ರಾಮಗಳಲ್ಲಿ ನೀಡಿದ್ದರೂ ಅದರ ಆದಾಯ ಲೆಕ್ಕಕ್ಕೆ ಇಲ್ಲವಾಗಿದೆ. ಕೂಡಲೇ ಯಲ್ಲಮ್ಮದೇವಿ ದೇವಸ್ಥಾನದ ಎದುರಿನ ಪರುಶುರಾಮ ಹಾಗೂ ಮಾತಂಗಿ ಮಂದಿರಗಳನ್ನು ನಿರ್ಮಾಣ ಮಾಡಬೇಕು ಹಾಗೂ ದೇವಸ್ಥಾನವನ್ನು ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸರ್ಕಾರಿ, ಅರೆಸರ್ಕಾರಿ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಮಣ್ಣ ನೀರಮಾನವಿ, ದಲಿತ ಮೈನಾರಿಟಿ ಸೇನೆ ತಾಲೂಕು ಅಧ್ಯಕ್ಷ ಕರಿಯಪ್ಪ ನೀರಮಾನವಿ, ದಲಿತ ಸಂಘರ್ಷ ಸಮಿತಿ ಗ್ರಾಮ ಘಟಕ ಅಧ್ಯಕ್ಷ ರಾಮಣ್ಣ ಅನ್ವರಿ, ಡಿಎಸ್‌ಎಸ್ ತಾಲೂಕು ಸಂಚಾಲಕ ಪೋಲೋರಾಜ್ ಜಾಗೀರಪನ್ನೂರು ಇತರರಿದ್ದರು.