Advertisement

ಗಣಪತಿಯ ಮದುವೆ

11:30 PM Sep 09, 2021 | Team Udayavani |

ನಾವೆಲ್ಲ “ಗಣಾನಾಂ ತ್ವಾ ಗಣಪ ತಿಂ ಹವಾಮಹೇ, ಪ್ರಿಯಾಣಾಂ ತ್ವಾ ಪ್ರಿಯಪತಿಂ ಹವಾಮಹೇ, ನಿಧೀನಾಂ ತ್ವಾ ನಿಧಿಪತಿಂ ಹವಾಮಹೇ’ ಎಂದು ಸ್ತುತಿಸುತ್ತಿರುವ ಈ ಲಂಬೋದರನ ಉತ್ಪತ್ತಿ ಬಹಳ ಸ್ವಾರಸ್ಯಪೂರ್ಣವಾದುದು.

Advertisement

ಪಾಶ್ಚಿಮಾತ್ಯ ವಿದ್ವಾಂಸರು ಈ ಗಣಪತಿಯನ್ನು ಆರ್ಯರ ದೇವತೆಯೆಂದು ಪರಿಗಣಿಸದೆ, ಆರ್ಯರ ಪೂರ್ವದಲ್ಲಿದ್ದ ಭಾರತೀಯ ಆದಿವಾಸಿಗಳ ದೇವರೆಂದು ವಾದಿಸುತ್ತಾರೆ. ಕ್ರಮೇಣ ಈ ಮೂಲಜನರ ಸಂತೃಪ್ತಿಗಾಗಿ ಅವರೂ ಈ ಗಣಪತಿಯ ಪೂಜೆಯನ್ನು ಮಾಡಲಾರಂಭಿಸಿದರೆಂದು ಅವರು ವಾದಿಸುತ್ತಾರೆ. ಪಾಶ್ಚಿ ಮಾತ್ಯ ವಿದ್ವಾಂಸರ ಈ ವಾದಕ್ಕೆ ನಮ್ಮ “ಮಾನವ- ಗೃಹ್ಯ ಸೂತ್ರ’ ದಲ್ಲಿ ಹೇಳಲಾಗಿರುವ ಗಣಪತಿಯ ಚತುರ್ವಿಧ ನಾಮಾಂಕಿತಗಳೇ ಆಧಾರವೆನ್ನಲಾ­ಗುತ್ತಿದೆ. ಈ ಚತುರ್ವಿಧ ಗಣಪತಿ ಗಳ ಹೆಸರು ಇಂತಿವೆ

1. ಶಾಲಕಟಂಕಟ 2. ಕೂಷ್ಮಾಂಡ ರಾಜಪುತ್ರ 3. ಅಜಸ್ಮಿತ 4. ದೇವ ಯಜನ. ಮುಂದೆ “ಯಾಜ್ಞವಲ್ಕ್ಯಸ್ಮತಿ’ ಪ್ರಚಾರಕ್ಕೆ ಬಂದಾಗ ಗಣಪತಿಗೆ ಅರು ಹೆಸರುಗಳುಂಟಾದವು. ಶಾರಿ, ತಟಂಕಟ, ಕೂಷ್ಮಾಂಡ, ರಾಜಪುತ್ರ, ಮಿತ, ಸಮ್ಮಿತ. ಈ ಹೆಸರುಗಳೆಲ್ಲಾ ದ್ರಾವಿಡ ಜನರೇ ಇತ್ತವು ಗಳೆಂದು ವಿದಿತವಾಗುತ್ತದೆ. ಈ ಆದಿವಾಸಿಗಳು ತಮ್ಮ ಭೂತ, ಪ್ರೇತ, ಪಿಶಾ ಚಾದಿಗಳ ವಿಘ್ನಗಳಿಂದ ಪಾರಾಗಲು ಮೇಲಿನ ವಿವಿಧ ಗಣಪತಿಗಳನ್ನು ಆರಾಧಿಸುತ್ತಿದ್ದರೆಂದು ಪ್ರತೀತಿ. ಕ್ರಮೇಣ ಸುಸಂಸ್ಕೃತ ಜನರು ಆರಾಧಿಸುತ್ತ ಬಂದಂತೆ ಶುದ್ಧಿ ಸಂಸ್ಕಾರಗಳೊಂದಿಗೆ ಇಂದಿನ ಸುಂದರ ಗಜವದನ ರೂಪ ಪ್ರಚಲಿತವಾಗಿದೆ.

ಗಣಪತಿಯ ಉತ್ಪತ್ತಿಯ ಬಗ್ಗೆ ಇರುವ ಇನ್ನೊಂದು ಕಥೆ ಬಹುರಂಜಕ ಹಾಗೂ ಜನಜನಿತವಾಗಿದೆ. ಪರ್ವತರಾಜನ ಮಗಳು ಪಾರ್ವತಿಗೆ ಇಬ್ಬರು ಸಖೀಯರಿದ್ದರು. ಅವರ ಹೆಸರು ಜಯಾ ಮತ್ತು ವಿಜಯಾ ಎಂದು. ಹೆಸರಿನಂತೆಯೇ ಈ ಸಖೀಯರು ಜಗಳ ಸಾಧಿಸಿ ತಮ್ಮ ವಿಜಯ ಸ್ಥಾಪಿಸಲು ಯತ್ನಿಸುವವರಾಗಿದ್ದರು. ಇವರು ಒಂದು ದಿನ ಪಾರ್ವತೀ­ದೇವಿಯೊಡನೆ- “ಶಿವನಿಗಾದರೋ, ಆಜ್ಞಾಧಾರಕ­ರಾದ ನಂದಿ, ಭೃಂಗಿ ಮುಂತಾದ ಅಸಂಖ್ಯ ಗಣಸಮೂಹವಿದೆ. ನಿಮಗೆ ಮಾತ್ರ ನಿಮ್ಮ ಆಜ್ಞೆ ಪಾಲಿಸುವಂತಹ ಅಂಥ ಯಾವುದೇ ಗಣಗಳಿಲ್ಲ ‘ಎಂದು ಹೇಳಿದರು. ಪಾರ್ವತಿಗೂ ಇದು ಹೌದೆಂದು ಕಂಡಿತು. ಒಡನೆಯೇ ಅವಳು ಮಣ್ಣು, ನೀರು ಮುಂತಾದ ಪ್ರಕೃತಿಜನ್ಯ ವಸ್ತುಗಳಿಂದ ದಪ್ಪನ್ನ ಒಂದು ಮೂರ್ತಿಯನ್ನು ಸ್ವತಃ ನಿರ್ಮಿಸಿ ತನ್ನ ಮಗನೆಂದು ಹೇಳಿ ಬಾಗಿಲಿನಲ್ಲಿ ಪ್ರತಿಷ್ಠಾಪಿಸಿದಳು. ಜೀವಕಳೆ ತುಂಬಿ, ಆ ತನ್ನ ನವಜಾತ ಮಗನಿಗೆ ಒಳಗೆ ಯಾರೂ ಬಾರದಂತೆ  ನೋಡಿಕೊಳ್ಳಬೇಕೆಂದು ಕಟ್ಟಾಜ್ಞೆ ವಿಧಿಸಿದಳು.  ಶಿವನಿಗೆ ಭಾರೀ ಫಜೀತಿ ಉಂಟಾಯಿತು.

ಈ ಗಂಡಹೆಂಡಿರ ಜಗಳದಲ್ಲಿ ವಿನಾಯಕ ಗಣಗಳ ನಾಯಕನಾದನು. ತಾನೂ ಶಿವನಿಗೆ ಕಮ್ಮಿಯಿಲ್ಲವೆಂದು ಬಗೆದು ಪಾರ್ವತೀದೇವಿ ಕೂಡ ಸ್ಪರ್ಧೆಗಿಳಿದಳು. ಈ ಸ್ಪರ್ಧೆಗೆ ಗಣಪತಿ ದಳಪತಿಯಾದನು. ಹೊರಗೆ ಹೋಗಿದ್ದ ಶಿವ ಒಳಗೆ ಬರುವಷ್ಟರಲ್ಲಿ ಗಣಪತಿಯಿಂದ ತಡೆಯಲ್ಪಟ್ಟನು. ತನಗಾದ ಅಪಮಾನದಿಂದ ಕಿಡಿಯಾದ ಪರಮೇಶ್ವರ, ಗಣಗಳ ಮೂಲಕ ತನ್ನ ಪರಿಚಯ ಹೇಳಿದರೂ ಪ್ರಯೋಜನವಾಗಲಿಲ್ಲ. ಗಣಗಳಿಗೂ, ಗಣಪತಿಗೂ ಭಾರೀ ಯುದ್ಧವಾಗಿ ಗಣಪನು ಅವರನ್ನೆಲ್ಲ ಹೊಡೆದೋಡಿಸಿದನು. ಆಗ ಈಶ್ವರನ ಸಹಾಯಕ್ಕೆ ಬಂದ ಇಂದ್ರ, ವರುಣ, ಕುಬೇರ ಮೊದಲಾದವರನ್ನೂ ಸೋಲಿಸಿದನು. ಇತ್ತ ಪಾರ್ವತೀದೇವಿ ಕೊಡ ತನ್ನೀ ನವಜಾತ ಕುವರನಿಗೆ ಸರ್ವವಿಧದ ಸಹಾಯವನ್ನು ಪರೋಕ್ಷವಾಗಿ ಮಾಡಿದಳು. ಕೊನೆಗೆ ಮಹಾವಿಷ್ಣುವೇ ಬಂದ. ಗಣಪತಿ- ವಿಷ್ಣು ಕಾದಾಡುತ್ತಿದ್ದಾಗಲೇ ಶಿವನೇ ಹಿಂದಿನಿಂದ ಬಂದು ಗಣಪತಿಯ ರುಂಡವನ್ನು ತನ್ನ ತ್ರಿಶೂಲದಿಂದ ಹಾರಿಸಿದ. ಇದರಿಂದ ಕುಪಿತಳಾದ ಪಾರ್ವತಿ ರಣಚಂಡಿಯಾಗಿ ಪ್ರತ್ಯಕ್ಷಳಾದಳು. ತನ್ನ ಮಗುವಿನ ಮೇಲೆ ಆಪತ್ತು ಬಂತೆಂದರೆ ಇಲಿ ಕೂಡಾ ಹುಲಿ, ದನ ಕೂಡಾ ಸಿಂಹವಾಗುತ್ತದಂತೆ! ಹೀಗೆ ಈ ಗಂಡ ಹೆಂಡಿರಲ್ಲಿ ಜಗಳವಾದರೆ ಪ್ರಳಯ ಸನ್ನಿಹಿತವೆಂದು ಬಗೆದು ದಿಗಿಲುಗೊಂಡ ಇಂದ್ರ- ನಾರದರೇ ಮೊದಲಾದ ದೇವ- ಋಷಿಗಣಗಳೆಲ್ಲ ನಾನಾ ವಿಧದಿಂದ ಪಾರ್ವತಿಯನ್ನು ಸಂತೈಸಲು ಆರಂಭಿಸಿದರು. ಕೊನೆಗೆ ಪಾರ್ವತಿಯ ಮನಃ ಪರಿವರ್ತನೆಯಾಗಿ ಗಣೇಶನೊಡನೆ ಯುದ್ಧ ನಿಲ್ಲಿಸುವಂತೆ ಹೇಳಿದಳು. ಆದರೆ ಈ ಗಣಪನಂತೂ ತನ್ನ ರುಂಡ ಕಳೆದು ಕೊಂಡುಬಿಟ್ಟಿದ್ದಾನೆ. ಆಗ ಮಹಾವಿಷ್ಣುವು ಎಲ್ಲಿಂದಲೋ ಒಂದು ದಂತವಿರುವ ಆನೆಯ ರುಂಡವನ್ನು ತಂದು ಆ ಗಣಪತಿಯ ಮೂರ್ತಿಗೆ ಜೋಡಿಸಿದನು. ಒಡನೆ ಗಣಪತಿ ಚಂಗನೆದ್ದು ಕುಳಿತನು. ಆಗ ಶಿವನು ಈ ಅಸಾಮಾನ್ಯ ಏಕದಂತನನ್ನು ತನ್ನ ಜೇಷ್ಠ ಪುತ್ರನೆಂದೂ, ತನ್ನೆಲ್ಲಾ ಗಣಗಳಿಗೆ ನಾಯಕನೆಂದೂ ನಿಯುಕ್ತಗೊಳಿಸಿದನು.

Advertisement

ಹೀಗೆ ಸಂಘರ್ಷದಿಂದ ಜನಿಸಿ ಈ ಗಣಗಳ ದಳಪತಿಯಾದ ಗಣಪತಿಗೆ ಈ ಬರಡು ಜೀವನದಲ್ಲಿ ಸಂತೋಷ ಸಿಗಲಿಲ್ಲ. ವಿ-ನಾಯಕರೆಂದು ಕರೆಸಿಕೊಳ್ಳು ವವರಿಗೆ ಪರಿಶ್ರಮ ಮಾಡದೆ ಸುಖ ಸಿಗದಿದ್ದರೆ ಹೇಗೆ? ಹೀಗೆ ಜಿಜ್ಞಾಸೆಗೆ ಒಳಗಾದ ಗಣಪತಿ ಒಡನೆ ತನ್ನದೊಂದು ಷರತ್ತ‌ನ್ನು ಶಿವ-ಪಾರ್ವತಿಯರ ಮುಂದೆ ಇಟ್ಟನು. ಅದು: ತನ್ನ ಮದುವೆಯನ್ನು ಬೇಗ ನಡೆಸಿಕೊಡ­ಬೇಕೆಂದು. ಗಣಪತಿ ಮದುವೆಯ ಪ್ರಸ್ತಾಪ ಮಾಡಿದಾಗ ಪರಮೇಶ್ವರನ ಪ್ರಥಮ ಪುತ್ರ ಷಣ್ಮುಖ ಕೂಡ ತನಗೆ ಮದುವೆ ಯಾಗಬೇಕೆಂದು ಪ್ರಾರ್ಥಿಸಿಕೊಂಡನು. ಆಗ ವಿನೋದವಾಗಿ ಶಿವನು- “ಆಗಬಹುದು. ಇಬ್ಬರಿಗೂ ಮದುವೆ ಮಾಡೋಣ. ಆದರೆ ನಿಮ್ಮಿಬ್ಬರಲ್ಲಿ ಯಾರು ಮೊದಲು ಭೂ ಪ್ರದಕ್ಷಿಣೆ ಮಾಡುವರೋ ಅವರಿಗೆ ಮೊದಲು ಮದುವೆ ಮಾಡುವೆ’ ಎಂದನು. ಡೊಳ್ಳು ಹೊಟ್ಟೆಯ ಗಣಪತಿಯ ಬುದ್ದಿ ಯೆಂದೂ ಟೊಳ್ಳಾಗಿರಲಿಲ್ಲ. ಒಡನೆ ಎದ್ದು ಶಿವ-ಪಾರ್ವತಿ­ಯರಿಗೆ ಏಳು ಸುತ್ತು ಬಂದು ಪ್ರಣಾಮ ಸಲ್ಲಿಸಿದನು. ಷಣ್ಮುಖ­ನಾದರೋ ಭೂಮಂಡಲ ಪ್ರದಕ್ಷಿಣೆಗೆ ಹೊರಟುಹೋದನು.

ತನ್ನ ಕಾರ್ಯಗೈದ ಗಣಪತಿ ಶಿವನೊಡನೆ ತನಗೆ ಬೇಗ ಮದುವೆ ಮಾಡುವಂತೆ ಕೇಳಿಕೊಂಡನು. ಆಗ ಶಂಕರ- “ನೀನು ಭೂಪ್ರದಕ್ಷಿಣೆ ಮಾಡಲಿಲ್ಲವಲ್ಲಾ’ ಎಂದನು. ಗಣಪತಿ ಕೂಡಲೇ, “ನಾನು ಏಳು ಬಾರಿ ಈ ಜಗತ್ತಿನ ಒಡೆಯನಾದ ನಿನಗೂ ಜಗದ್ಧಾತ್ರಿಯಾದ ತಾಯಿ ಪಾರ್ವತಿಗೂ ಪ್ರದಕ್ಷಿಣೆ ಮಾಡಿ ವಂದಿಸಿದ್ದೇನೆ. ನನ್ನ ಅಂತರಂಗದಲ್ಲಿ ಈ ತಣ್ತೀವನ್ನು ಹುಡುಕಿ ಸಾಧಿಸಿದ ಮೇಲೆ ಬಹಿರ್‌ ಜಗತ್ತಿನ ಪ್ರದಕ್ಷಿಣೆಯೇಕೆ ಬೇಕು?’ ಎಂದುತ್ತರಿಸಿದಾಗ, ಈಶ್ವರನಿಗೆ ಗಣಪತಿಯ ಚುರುಕು­ಬುದ್ದಿ ಕಂಡು ಆನಂದವಾಗಿ ಮದುವೆ ಮಾಡಲು ಒಪ್ಪಿ   ಕನ್ಯಾನ್ವೇಷಣೆಗಾರಂಭಿಸಿದನು. ಪಾರ್ವತಿ- ಶಂಕರ ರಿ ಬ್ಬರೂ ತಮ್ಮ ಒಲವಿನ ಕುವರನಿಗೆ ಯೋಗ್ಯ ಕುವರಿಯನ್ನು ಅರಸುತ್ತ ಸ್ವರ್ಗಲೋಕಕ್ಕೆ ಬಂದು ಅಲ್ಲಿದ್ದ ವಿಶ್ವಕರ್ಮನ ಇಬ್ಬರು ಕನ್ಯೆಯರಾದ ಬುದ್ಧಿ ಮತ್ತು ಸಿದ್ಧಿಯರನ್ನು ಕಂಡು ತಮ್ಮ ಸೊಸೆ ಯರನ್ನಾಗಿಸಿಕೊಳ್ಳಲು ನಿರ್ಧರಿಸಿದರು. ಅಂತೂ ಗಣಪತಿಯ ಮದುವೆ ಬುದ್ದಿ- ಸಿದ್ದಿಯರೊಂದಿಗೆ ವೈಭವದಿಂದ ನೆರವೇರಿತು. ವಿವಾಹವಾಗಿ ಎರಡು ವರ್ಷಗಳೊಳಗೆ ವಿವಾಹ ಸುಖದ ಫಲ-ಪುತ್ರ ಸಂತಾನವನ್ನು  ಪಡೆದರು. ಬುದ್ದಿಯಲ್ಲಿ ‘ಲಕ್ಷ್ಯ’ ಎಂಬ ಕುಮಾರನೂ, ಸಿದ್ದಿಯಲ್ಲಿ “ಲಾಭ’ ಎಂಬ ಕುವ ರನೂ ಜನಿಸಿದರು. ಹೀಗೆ ಈ ಲಂಬೋದರನು ತನ್ನ ಬುದ್ದಿ- ಸಿದ್ದಿ ಯರೊಡಗೂಡಿ, ಲಕ್ಷ್ಯ -ಲಾಭರೆಂಬ ಪುತ್ರರೊಂದಿಗೆ ಸುಖ ಮಯ ಜೀವನ ಮಾಡುತ್ತ,  ಅಗ್ರಪೂಜೆ ಪಡೆಯ ತೊಡಗಿದನು.

(ಕೀರ್ತಿನಾಥ ಕುರ್ತಕೋಟಿ  ಸಂಪಾದಿಸಿದ “ವಿಶ್ವವ್ಯಾಪಿ ಗಣೇಶ’ ಪುಸ್ತಕದಿಂದ ಆಯ್ದುಕೊಂಡ ಅಧ್ಯಾಯ)

 

-ಬಿ. ನಾರಾಯಣ ಜೋಗಿತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next