ಸಾಗರ: ಇಲ್ಲಿನ ಜಂಬಗಾರು ರೈಲ್ವೆ ನಿಲ್ದಾಣದ ಸಮೀಪದ ಗೋಪಾಲಗೌಡ ಕ್ರೀಡಾಂಗಣದ ಬಳಿಯ ರೈಲ್ವೆ ಹಳಿಯ ಮೇಲೆ ಸೋಮವಾರ ವ್ಯಕ್ತಿಯೊಬ್ಬ ಮಲಗಿ ನಿದ್ರಿಸುತ್ತಿದ್ದ ಸಮಯದಲ್ಲಿ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ರೈಲ್ವೆ ಸಿಬ್ಬಂದಿ ಮತ್ತು ಪೊಲೀಸರು ಆ ವ್ಯಕ್ತಿಯನ್ನು ಸ್ಥಳದಿಂದ ಎಬ್ಬಿಸಿ, ಮನೆಗೆ ಕಳುಹಿಸಿದ್ದಾರೆ.
ಇಲ್ಲದಿದ್ದರೆ ಕೆಲವೇ ಸಮಯದಲ್ಲಿ ಬರುತ್ತಿದ್ದ ರೈಲಿಗೆ ಈ ವ್ಯಕ್ತಿ ಬಲಿಯಾಗಬೇಕಾದ ಅಪಾಯ ಸ್ವಲ್ಪದರಲ್ಲಿ ತಪ್ಪಿದಂತಾಗಿದೆ. ರೈಲಿನ ವಿಳಂಬದಿಂದಲೂ ಒಂದು ಜೀವ ಉಳಿದಂತಾಗಿದೆ!
ತಾಳಗುಪ್ಪ ಮೂಲದ ಸುಮಾರು 40 ವರ್ಷದ ವ್ಯಕ್ತಿಯೊಬ್ಬ ಹಳಿಯ ಮೇಲೆ ಮಲಗಿರುವುದನ್ನು ಮಸೂದ್ ಎಂಬಾತ ಗಮನಿಸಿದ್ದಾರೆ. ಅವರು ನೀಡಿದ ಮಾಹಿತಿ ಮೇರೆಗೆ ರಫೀಕ್ ಮತ್ತು ಜಮೀಲ್ ತಕ್ಷಣ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ರೈಲ್ವೆ ಪೊಲೀಸ್ ವಿಭಾಗದ ಎಎಸ್‌ಐ ಪರಶುರಾಮಯ್ಯ, ಸಚಿನ್ ಹಾಗೂ ರೈಲ್ವೆಯ ಸಿಗ್ನಲ್ ಸಿಬ್ಬಂದಿ ಕಿರಣ್ ಆಗಮಿಸಿದ್ದಾರೆ. ಹಳಿಯ ಮೇಲೆ ಮಲಗಿದ್ದ ವ್ಯಕ್ತಿ ಮದ್ಯಸೇವನೆಯ ಅಮಲಿನಲ್ಲಿರುವುದು ಕಂಡುಬಂದಿದೆ.
ಆತನನ್ನು ಎಬ್ಬಿಸಿ, ಮನೆಗೆ ತೆರಳುವಂತೆ ತಿಳಿಸಿದ್ದಾರೆ. ಸಾಗರ ಜಂಬಗಾರು ನಿಲ್ದಾಣಕ್ಕೆ ರಾತ್ರಿ 10 ಘಂಟೆ ಸುಮಾರಿಗೆ ಬರಬೇಕಾಗಿದ್ದ ರೈಲು ಬದಲಾದ ವೇಳಾಪಟ್ಟಿಯ ಪ್ರಕಾರ ತಡವಾಗಿ ರಾತ್ರಿ 12 ಗಂಟೆಗೆ ಬಂದಿದ್ದರಿಂದ ಅಹಿತಕರ ಘಟನೆ ಸಂಭವಿಸಿಲ್ಲ.