ಒಂದೆರಡು ದಿನ ಬಿಡುವಿತ್ತು. ಸುಮ್ಮನೆ ಕುಳಿತುಬಿಟ್ಟರೆ, ಮೊಬೈಲಿನಲ್ಲಿ ಕಳೆದುಹೋಗುವ ಅಪಾಯವಿದ್ದ ಕಾರಣ, ಬೈಕ್ ಏರಿ ಎಲ್ಲಾದರೂ ಹೋಗೋಣ ಅಂತ ನನಗೇ ನಾನು ಸೂಚನೆ ಹೊರಡಿಸಿಬಿಟ್ಟೆ. ಆಗ ನನಗೆ ಹೊಳೆದಿದ್ದು, ಬಲ್ಲಾಳರಾಯನದುರ್ಗದ ಯಾನ.
ಮಳೆಗಾಲ ಅಲ್ಲದ ಕಾರಣ, ರೈನ್‌ಕೋಟ್ ಅವಶ್ಯಕತೆ ಇಲ್ಲವೆಂದು, ಟಿಪ್‌ಟಾಪ್ ಆಗಿ ಝುಮ್ಮನೆ ಹೊರಟು, ಬಲ್ಲಾಳರಾಯನ ದುರ್ಗದ ಬುಡದಲ್ಲಿದ್ದೆ. ಅಲ್ಲಿನ ಸುಂದರ ಇತಿಹಾಸವನ್ನು ಅರಿಯುತ್ತಾ, ಪ್ರಕೃತಿಯ ಸೊಬಗನ್ನು ಕಣ್ತುಂಬಾ ನೋಡಿಕೊಂಡು, ಅಲ್ಲಿಂದ ಹೊರಡುವಾಗ, ಜೋರು ಮಳೆ. ಬೈಕ್ ಓಡಿಸಲೂ ಸಾಧ್ಯವಾಗದಷ್ಟು ವರುಣನ ಅಬ್ಬರ. ಆದರೂ, ಧೈರ್ಯ ಮಾಡಿ, ಹೊರಟೇ ಬಿಟ್ಟೆ.
ಘಾಟಿಯ ರಸ್ತೆಯ ತಿರುವುಗಳನ್ನು ದಾಟಿ ಬರುತ್ತಿದ್ದಂತೆ, ಹಿಂದಿನ ಟಯರ್ ಪುಸ್ ಎಂದು ಶಬ್ದ ಮಾಡಿತು. ಗಾಡಿ ನಿಂತಿತು. ಆ ಜೋರು ಮಳೆಗೆ ಮೈಯೆಲ್ಲ ಒದ್ದೆ ಆಯಿತು. ಸುತ್ತ ನೋಡಿದರೆ, ಕಾಡು. ನಡುವೆ ನಾನಿದ್ದೇನೆ. ಇಲ್ಲೆಲ್ಲಿ ಪಂಕ್ಚರ್ ಶಾಪ್ ಅನ್ನು ಹುಡುಕಿಕೊಂಡು ಹೋಗೋದು..? ನನ್ನ ತಲೆ ಗಿರ್ರೆಂದಿತ್ತು.
ಮೆಕ್ಯಾನಿಕ್ ಕರೆತರಬೇಕು, ಡ್ರಾಪ್ ಕೊಡಿ ಅಂತ ಸಿಕ್ಕವರನ್ನೆಲ್ಲ ಕೇಳಿಕೊಂಡೆ. ಯಾರೂ ಗಾಡಿಯನ್ನು ನಿಲ್ಲಿಸಲಿಲ್ಲ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ನನ್ನ ಅವಸ್ಥೆ ಕಂಡು, ಅಂತೂ ಒಬ್ಬ ಡ್ರಾಪ್ ಕೊಟ್ಟ. ನನಗೆ ಹೋದ ಜೀವ ಬಂದ ಹಾಗಾಯಿತು. ಮೆಕ್ಯಾನಿಕ್ ಅನ್ನು ಕರೆತಂದು, ಅಂತೂ ಕಷ್ಟದಿಂದ ಪಾರಾದೆ. ನನಗೆ ಡ್ರಾಪ್ ಕೊಟ್ಟ ಪುಣ್ಯಾತ್ಮನಿಗೆ ಒಂದು ಥ್ಯಾಂಕ್ಸ್.
ಪರಿಚಿತ ಅಲ್ಲದ ಒಬ್ಬ ವ್ಯಕ್ತಿ, ನಿಮ್ಮ ಬದುಕಿನೊಳಗೆ ಒಂದು ಕ್ಷಣದ ಮಟ್ಟಿಗೆ, ಕೆಲ ನಿಮಿಷಗಳ ಮಟ್ಟಿಗೆ ಪ್ರವೇಶ ಕೊಟ್ಟಿದ್ದರೆ, ಅಂಥ ಅತಿಥಿ ಪಾತ್ರದ ಬಗ್ಗೆ ನಮಗೆ 60 ಪದಗಳಲ್ಲಿ ಬರೆದು ಕಳುಹಿಸಿ.
— ಮಹಮ್ಮದ್ ಅಲ್ಪಾಜ್, ಕಾರ್ಕಳ