Advertisement
ಬುಧವಾರ ಈ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ‘ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸೆ ತಲೆದೋರಿದೆ. ಈ ಹಿಂಸೆಗೆ ಪಾಕಿಸ್ಥಾನದ ಪ್ರಚೋದನೆ ಮತ್ತು ನೇರ ಬೆಂಬಲವೇ ಕಾರಣ. ಪಾಕಿಸ್ಥಾನ ಭಯೋತ್ಪಾದನೆಯ ಮೂಲ ಪೋಷಕ ರಾಷ್ಟ್ರ ಎಂದು ಜಗತ್ತಿಗೇ ತಿಳಿದಿದೆ’ ಎಂದು ರಾಗಾ ತಮ್ಮ ಟ್ವೀಟ್ ನಲ್ಲಿ ಹೆಳಿಕೊಂಡಿದ್ದಾರೆ.
‘ನಾನು, ಕೇಂದ್ರ ಸರಕಾರದ ಹಲವು ನಿಲುವುಗಳನ್ನು ಒಪ್ಪುವುದಿಲ್ಲ ಆದರೆ ಕಾಶ್ಮೀರ ವಿಚಾರಕ್ಕೆ ಬಂದಾಗ, ಇದು ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರ ಮತ್ತು ಇದರಲ್ಲಿ ತಲೆ ಹಾಕಲು ಪಾಕಿಸ್ಥಾನಕ್ಕಾಗಲೀ ಅಥವಾ ವಿಶ್ವದ ಇನ್ಯಾವುದೇ ರಾಷ್ಟ್ರಕ್ಕಾಗಲಿ ಅವಕಾಶವೇ ಇಲ್ಲ ಎಂಬುದನ್ನು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ’ ಎಂದು ರಾಹುಲ್ ಗಾಂಧಿ ಅವರು ಇನ್ನೊಂದು ಟ್ವೀಟ್ ನಲ್ಲಿ ಹೇಳಿಕೊಂಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಭಾರೀ ಸೇನಾ ಪಡೆಗಳ ಜಮಾವಣೆ ಅಲ್ಲಿನ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಮತ್ತು 370ನೇ ವಿಧಿ ರದ್ಧತಿಯ ಬಳಿಕ ಕಣಿವೆ ರಾಜ್ಯದಲ್ಲಿ ಕಾನೂನ್ ರಾಜ್ ನಡೆಯುತ್ತಿದೆ ಎಂದು ರಾಹುಲ್ ಗಾಂಧಿ ಅವರು ಕೇಂದ್ರ ಸರಕಾರದ ಮೇಲೆ ಹರಿಹಾಯ್ದಿದ್ದರು. ಮತ್ತು ಅವರ ನೇತೃತ್ವದಲ್ಲಿ ಕಾಶ್ಮೀರ ಪರಿಸ್ಥಿತಿಯನ್ನು ಅವಲೋಕಿಸಲು ತೆರಳಿದ್ದ ವಿಪಕ್ಷ ನಾಯಕರ ನಿಯೋಗವನ್ನು ಇತ್ತೀಚೆಗಷ್ಟೇ ಶ್ರೀನಗರ ವಿಮಾನ ನಿಲ್ದಾಣದಲ್ಲೇ ತಡೆಹಿಡಿಯಲಾಗಿತ್ತು.