Advertisement

ಕೃಷಿ ಉಳಿಯಬೇಕು ಎನ್ನುವುದೇ ಮುಖ್ಯ ಉದ್ದೇಶ

09:46 AM Dec 24, 2019 | mahesh |

ಹೆಸರು: ಬಿ. ನಾರಾಯಣದಾಸ್‌
ಏನೇನು ಕೃಷಿ: ಭತ್ತ, ಬಾಳೆ, ತೆಂಗು, ಅಡಿಕೆ, ತರಕಾರಿ.
ಎಷ್ಟು ವರ್ಷ: 51
ಕೃಷಿ ಪ್ರದೇಶ: 13 ಎಕ್ರೆ

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಉಡುಪಿ: ಆಧುನಿಕ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ಕೃಷಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪಾಳು ಬಿದ್ದ ಭೂಮಿಯನ್ನು ಗೇಣಿಗೆ ಪಡೆದು, ಒಟ್ಟು 13 ಎಕ್ರೆ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಬಿ. ನಾರಾಯಣದಾಸ್‌ ಅವರು ಕೃಷಿ ಇಲಾಖೆಯಿಂದ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

76 ಬಡಗಬೆಟ್ಟು ನಿವಾಸಿ ಬಿ. ನಾರಾಯಣದಾಸ್‌ ಅವರು 38 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತೆಂಗು, ಭತ್ತ, ಬಾಳೆ, ಅಡಿಕೆ, ಮಾವು ಸಹಿತ ವಿವಿಧ ಬಗೆಯ ಮಿಶ್ರ ಬೆಳೆ ತೆಗೆಯುತ್ತಿದ್ದಾರೆ. ಊರಿನಲ್ಲಿ ಪಾಳು ಬಿದ್ದಿರುವ ಹೊಲದಲ್ಲಿ ಮಾಲಕರ ಅನುಮತಿ ಪಡೆದು ಬೇಸಾಯ ಮಾಡುವ ಇವರಿಗೆ ಕೃಷಿಯಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಇಲ್ಲ. ಕೃಷಿ ಉಳಿಯಬೇಕು ಎನ್ನುವುದೇ ಮುಖ್ಯ ಉದ್ದೇಶವಾಗಿದೆ.

ಯಾಂತ್ರೀಕೃತ ಕೃಷಿಗೆ ಒತ್ತು
ನಾರಾಯಣ ಅವರಿಗೆ ಕೃಷಿಗೆ ಒಮ್ಮೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿತ್ತು. ಈ ಸಮಸ್ಯೆಯಿಂದ ಹೊರ ಬರಲು ಯಾಂತ್ರೀಕೃತ ಕೃಷಿ ಪದ್ಧತಿ ಆಳವಡಿಸಿಕೊಂಡರು. ಇಂದು ಅವರು ಯಂತ್ರಗಳಿಂದ ಮಾಡಲಾಗದ ಬೆರಳೆಣಿಕೆಯ ಕೆಲಸಗಳನ್ನು ಮಾತ್ರ ಕಾರ್ಮಿಕರ ಮೂಲಕ ಮಾಡಿಸುತ್ತಿದ್ದಾರೆ. ನಗರದಲ್ಲಿ ಮೊದಲ ಬಾರಿಗೆ ಚಾಪೆ ನೇಜಿಯನ್ನು ಆಳವಡಿಸಿಕೊಂಡ ಕೀರ್ತಿ ನಾರಾಯಣ ಅವರಿಗೆ ಸಲ್ಲುತ್ತದೆ.

Advertisement

ವಾಣಿಜ್ಯ ಬೆಳೆ
ಭತ್ತದ ಕೃಷಿಯೊಂದಿಗೆ ಅಲಸಂಡೆ, ಹರಿವೆ, ಬಸಳೆ, ಗುಳ್ಳ, ಸುವರ್ಣಗಡ್ಡೆ, ಸೋರೆಕಾಯಿ, ಹೀರೆಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಸೌತೆಕಾಯಿ, ಇತರೆ ವಾಣಿಜ್ಯ ಬೆಳೆಗಳನ್ನು ಹಟ್ಟಿಗೊಬ್ಬರ ಬಳಸಿಯೇ ಬೆಳೆಸುವುದರಿಂದ ಮನೆಯ ಪ್ರದೇಶದಲ್ಲಿಯೇ ಖಾಯಂ ಗ್ರಾಹಕರು ಖರೀದಿದಾರರಾಗಿರುತ್ತಾರೆ. ಇನ್ನುಳಿದ ತರಕಾರಿಗಳಿಗೆ ಉಡುಪಿ -ಮಂಗಳೂರು ಪೇಟೆಯ ಅಂಗಡಿಗಳೇ ಮಾರುಕಟ್ಟೆಯಾಗಿದೆ.

ಮಾದರಿ ಕೃಷಿಕ
ನಾರಾಯಣ ಅವರು ಬಿ.ಕಾಂ. ಪದವೀಧರರು. ಶಿಕ್ಷಣ ಮುಗಿಸಿದ ಕೂಡಲೇ ಹಲವು ಉದ್ಯೋಗಗಳು ಇವರನ್ನು ಅರಸಿ ಬಂದಿದ್ದವು. ಆದರೆ ಇವರು ಅದರತ್ತ ಮುಖಮಾಡದೆ ಕೃಷಿಯಲ್ಲಿ ಜೀವನ ರೂಪಿಸಿಕೊಂಡು ಯುವ ಜನರಿಗೆ ಮಾದರಿಯಾಗಿದ್ದಾರೆ. 5 ಎಕ್ರೆ ಭೂಮಿಯಲ್ಲಿ ವಾರ್ಷಿಕ ಸುಮಾರು 150 ಕ್ವಿಂಟಾಲ್‌ ಭತ್ತದ ಬೆಳೆ ತೆಗೆಯುತ್ತಾರೆ. ಕೃಷಿ ಚಟುವಟಿಕೆಗೆ ಪತ್ನಿ ವೀಣಾ ಅವರ ಜತೆಗೆ ಮಕ್ಕಳು ಸಹ ಕೈ ಜೋಡಿಸಿದ್ದಾರೆ. ಕೃಷಿಯೊಂದಿಗೆ ಹೈನುಗಾರಿಕೆಯಲ್ಲೂ ಸಾಧನೆ ತೋರಿದ್ದಾರೆ.

ಕೃಷಿಯಲ್ಲಿ ಲೆಕ್ಕಾಚಾರವಿಲ್ಲ!
ಕೃಷಿಯಲ್ಲಿ ಲಾಭ ನಷ್ಟದ ಲೆಕ್ಕಾಚಾರವಿಲ್ಲ. ಖಾಲಿ ಇರುವ ಹೊಲದಲ್ಲಿ ಬೇಸಾಯ ಮಾಡಿ ಕೃಷಿ ಉಳಿಸಬೇಕು ಎನ್ನುವ ಆಶಯವಿದೆ. ಕಾರ್ಮಿಕರ ಕೊರತೆ ಇಂದು ಕೃಷಿಗೆ ಬಹುದೊಡ್ಡ ಸವಾಲು. ಸಮಸ್ಯೆಯಿಂದ ಹೊರ ಬರಲು ಕೃಷಿಗೆ ಸಂಬಂಧಿಸಿದ ಉಳುಮೆ, ಬಿತ್ತನೆ ಮುಂತಾದ ಕೆಲಸಗಳನ್ನು ಯಂತ್ರದ ಮೂಲಕ ಮಾಡಲಾಗುತ್ತದೆ. ಇದರಿಂದ ಖರ್ಚು ಕಡಿಮೆ ಹಾಗೂ ಇತರರಿಗಾಗಿ ಕಾಯಬೇಕಾದ ಪರಿಸ್ಥಿತಿ ಇಲ್ಲ. ಅಗತ್ಯವಿದ್ದರೆ ಮಾತ್ರ ಕಾರ್ಮಿಕರನ್ನು ಕೃಷಿ ಕೆಲಸಕ್ಕೆ ಬಳಸಲಾಗುತ್ತದೆ. ಪ್ರಯೋಗಾತ್ಮಕ ಮನೋಭಾವದಿಂದ ಬೇರೆ-ಬೇರೆ ಬೆಳೆ ಬೆಳೆದರೆ ಲಾಭ ಗಳಿಸಬಹುದಾಗಿದೆ. ವ್ಯವಸ್ಥಿತವಾಗಿ ಬೇಸಾಯದಲ್ಲಿ ತೊಡಗಿದರೆ ಲಕ್ಷಾಂತರ ರೂ. ಲಾಭ ಗಳಿಸಲು ಸಾಧ್ಯವಿದೆ.
-ಬಿ. ನಾರಾಯಣದಾಸ್‌, ಕೃಷಿಕ

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next