Advertisement

ಮೇಳಕುಂದಿ ಮೊಬೈಲ್‌ಗೆ ಸಿಐಡಿ ಚಡಪಡಿಕೆ!

03:10 PM May 12, 2022 | Team Udayavani |

ಕಲಬುರಗಿ: ಪಿಎಸ್‌ಐ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಕೆ ಮಾಡಿ ಅಕ್ರಮ ಎಸಗಿದ್ದ ಆರೋಪದಡಿ ಹೆದರಿ ಶರಣಾಗಿರುವ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್‌ ಮಂಜುನಾಥ ಮೇಳಕುಂದಿ ಮೊಬೈಲ್‌ ಗಾಗಿ ಸಿಐಡಿ ಅಧಿಕಾರಿಗಳು ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾರೆ.

Advertisement

ಕಳೆದ ಮೂರು ದಿನಗಳಿಂದ ಚಡಪಡಿಸುತ್ತಲೇ ಹುಡುಕಾಡುತ್ತಿದ್ದಾರೆ. ಮೂರು ದಿನಗಳಿಂದ ಡಿವೈಎಸ್ಪಿ ಪ್ರಕಾಶ್‌ ಹಾಗೂ ಇತರೆ ಸಿಬ್ಬಂದಿ ತಂಡ ಮೊಬೈಲ್‌ ಹುಡುಕಲು ಸತತವಾಗಿ ಪ್ರಯತ್ನಿಸುತ್ತಿದೆ. ಅನುಭವಿ ಮುಳುಗು ತಜ್ಞರನ್ನು ಕರೆತಂದು ಅಮರ್ಜಾ ನದಿಯ ಡ್ಯಾಂನಲ್ಲಿ ಹುಡುಕಾಡಿಸುತ್ತಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.

ನಗರದ ರಾಜ ಕಾಲುವೆಯಲ್ಲೂ ಹುಡುಕಾಡಿದರೂ ಬ್ಲೂಟೂತ್‌ ಸೆಟ್‌ಗಳು ಸಿಗುತ್ತಿಲ್ಲ. ಇದರಿಂದ ವಿಚಾರಣೆಯಲ್ಲಿ ಪಡೆದ ಮಾಹಿತಿಗೆ ಸಾಕ್ಷ್ಯ ಒದಗಿಸುವುದು ಸವಾಲಿನ ಕೆಲಸವಾಗಿದೆ. ಚಾಲಾಕಿ ಮೇಳಕುಂದಿ ಶರಣಾಗುವ ಮುನ್ನ ಅಮರ್ಜಾ ನದಿಯ ಡ್ಯಾಂನಲ್ಲಿ ಮೊಬೈಲ್‌ ಬೀಸಾಡಿದ್ದಾನೆ. ಅಲ್ಲಿಯೇ ಮೂರಕ್ಕೂ ಹೆಚ್ಚು ಒಎಂಆರ್‌ಗಳನ್ನು ಸುಟ್ಟಿದ್ದಾನೆ. ಅಲ್ಲದೇ, ಕಲಬುರಗಿ ನಗರದ ಕೋಟನೂರು (ಡಿ) ಗ್ರಾಮದ ಪಕ್ಕದಲ್ಲಿ ಹಾಯ್ದು ಹೋಗಿರುವ ಹಳೆಯ ರಾಜ ಕಾಲುವೆಯಲ್ಲಿ ಬ್ಲೂಟೂತ್‌ ಸಲಕರಣೆಗಳನ್ನು ಎಸೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ಆದರೆ, ಅವ್ಯಾವೂ ಸಿಐಡಿ ಕೈಗೆ ಸಿಗುತ್ತಿಲ್ಲ. ಇದರಿಂದಾಗಿ ಅಧಿಕಾರಿಗಳು ಕೊತಕೊತ ಕುದಿಯುತ್ತಿದ್ದಾರೆ.

ರಹಸ್ಯ ನುಂಗಿ ನೀರಿಗೆ ಬಿದ್ದ ದಾಖಲೆಗಳ ಗುಡ್ಡ

ಸಿಐಡಿ ಅಧಿಕಾರಿಗಳ ಎದುರು ಹೇಳಿರುವ ಮತ್ತು ಒಪ್ಪಿಕೊಂಡಿರುವ ಮಾಹಿತಿಯ ಎಲ್ಲ ಸಾಕ್ಷ್ಯಗಳು ಇರುವುದು ಮೇಳಕುಂದಿಯ ಮೊಬೈಲ್‌ ನಲ್ಲಿ. ಅದು ಕೇವಲ ಮೊಬೈಲ್‌ ಅಲ್ಲ. ಬಹಳಷ್ಟು ಪರೀಕ್ಷಾ ಕದೀಮರ ರಹಸ್ಯವನ್ನು ನುಂಗಿ ನೀರಿಗೆ ಬಿದ್ದಿರುವ ಗುಡ್ಡದಂತಿದೆ. ಅದರಲ್ಲಿ ಮೇಳಕುಂದಿಗೆ ಸಹಾಯ ಮಾಡಿದ ಬೆಂಗಳೂರು, ಕಲಬುರಗಿ, ವಿಜಯಪುರದ ಪೊಲೀಸ್‌ ಅಧಿಕಾರಿಗಳು, ರಾಜಕಾರಣಿಗಳು, ಪತ್ರಕರ್ತರು ಮತ್ತು ಇನ್ನೂ ಕೆಲವು ಮಾಹಿತಿಗಳು, ಆಡಿಯೋ ಮುದ್ರಣಗಳು, ಒಎಂಆರ್‌ ಶೀಟ್‌ ಫೋಟೋಗಳು ಇವೆ ಎಂದು ಹೇಳಲಾಗುತ್ತಿದೆ. ಇವಿಷ್ಟು ಸಿಐಡಿ ಅಧಿಕಾರಿಗಳ ಕೈವಶವಾದರೆ ಅಲ್ಲಿಗೆ ಮೇಳಕುಂದಿ ಚಾಪ್ಟರ್‌ ಕ್ಲೋಸ್‌.

Advertisement

ದಿವ್ಯಾ ಎರಡನೇ ಮೊಬೈಲ್‌ ವಶ ಸಾಕ್ಷ್ಯ ನಾಶದ ಹಿನ್ನೆಲೆಯಲ್ಲಿ ಮೇಳಕುಂದಿ ಡ್ಯಾಮ್‌ಗೆ ಮೊಬೈಲ್‌ ಎಸೆದಿದ್ದರೆ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಕೂಡ ಸೊಲ್ಲಾಪುರದಲ್ಲಿ ಸಿಐಡಿ ಪೊಲೀಸರಿಗೆ ವಶವಾಗುವ ಮುನ್ನವೇ ಮೊಬೈಲ್‌ನ್ನು ಕಲ್ಲಿನಿಂದ ಜಜ್ಜಿ ಒಡೆದು ಹಾಕಿದ್ದರು. ದಿವ್ಯಾ ಮೊಬೈಲ್‌ನಲ್ಲಿ ಬಹಳಷ್ಟು ಸಾಕ್ಷ್ಯಗಳಿದ್ದವು. ಮೊಬೈಲ್‌ ನಾಶಪಡಿಸಿದ್ದರಿಂದ ನೆಮ್ಮದಿಯಾಗಿದ್ದ ದಿವ್ಯಾಗೆ ಈಗ ಭಾರೀ ಶಾಕ್‌ ತಟ್ಟಿದೆ.

ದಿವ್ಯಾ ಬಳಿ ಇದ್ದ ಎರಡನೇ ಮೊಬೈಲ್‌ ಈಗ ಸಿಐಡಿ ಅಧಿಕಾರಿಗಳ ಕೈಗೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಪುನಃ ದಿವ್ಯಾಗೆ ದೊಡ್ಡ ಆತಂಕ ಎದುರಾಗಿದೆ. ಹಣಕಾಸಿನ ವ್ಯವಹಾರ, ಅಭ್ಯರ್ಥಿಗಳ ಯಾರ ಮುಖೇನ ಪರಿಚಯವಾದರು, ಒಎಂಆರ್‌ ಶೀಟ್‌ ಮಾಹಿತಿ, ಪ್ರಶ್ನೆಗಳಿಗೆ ಉತ್ತರ ಯಾರು ಕೊಟ್ಟಿದ್ದು, ಹೀಗೆ ಉತ್ತರ ಸಿಗದ ಪ್ರಶ್ನೆಗಳಿಗೆ ಎರಡನೇ ಮೊಬೈಲ್‌ ಬೆಳಕು ಚೆಲ್ಲುವ ಸಾಧ್ಯತೆ ಇದೆ. ಅಲ್ಲದೇ ವಿಚಾರಣೆ ವೇಳೆ ಪೊಲೀಸರು ಸಂಗ್ರಹಿಸಿದ ಮಾಹಿತಿಗೆ ಮಹತ್ವದ ಸಾಕ್ಷಿಗಳು ಲಭಿಸುವ ವಿಶ್ವಾಸ ಮೂಡಿದೆ.

ಶಾಂತಾಬಾಯಿ ಇನ್ನೂ ನಾಪತ್ತೆ

ಪಿಎಸ್‌ಐ ಪರೀಕ್ಷೆ ಅಕ್ರಮ ಬಯಲಾಗುತ್ತಿದ್ದಂತೆ ಕಣ್ಮರೆಯಾಗಿರುವ ಅಭ್ಯರ್ಥಿ ಶಾಂತಾಬಾಯಿ ಇನ್ನೂವರೆಗೂ ಸಿಕ್ಕಿಲ್ಲ. ಇವರು ಶಹಾಬಾದ್‌ ನಗರಸಭೆಯಲ್ಲಿ ಎಸ್‌ಡಿಸಿ ಆಗಿರುವ ಜ್ಯೋತಿ ಪಾಟೀಲ ಎನ್ನುವ ಮಧ್ಯವರ್ತಿ ಮೂಲಕ ದಿವ್ಯಾ ಹಾಗರಗಿ ತಂಡದಿಂದ ಸಹಾಯ ಪಡೆದು ಪರೀಕ್ಷೆ ಬರೆದಿದ್ದರು. ಮಧ್ಯವರ್ತಿ ಜ್ಯೋತಿ ಬಂಧನವಾಗಿ ವಿಚಾರಣೆಯೂ ಆಗಿದೆ. ಅದರೆ, ಶಾಂತಾಬಾಯಿ ಸಿಗುವವರೆಗೂ ಪ್ರಕರಣದ ಸುಖಾಂತ್ಯ ಕಾಣುವ ಲಕ್ಷಣಗಳು ಸದ್ಯಕಂತೂ ಕಾಣುತ್ತಿಲ್ಲ.

ಸಾಲಿಗೆ ಹೆದರಿ ಸಾಕ್ಷ್ಯ ನಾಶ?

ಲಿಂಗಸುಗೂರು ಡಿವೈಎಸ್ಪಿ ಮಂಜುನಾಥ ಸಾಲಿ, ಕಲಬುರಗಿ ಜಿಲ್ಲೆಯ ಆಳಂದ ಡಿವೈಎಸ್ಪಿ ಆಗಿದ್ದಾಗಲೇ ಪಿಎಸ್‌ಐ ಪರೀಕ್ಷಾ ಅಕ್ರಮದ ಜಾಡಿನ ಸುಳಿವು ಪಡೆದಿದ್ದರು. 2022, ಮಾ.13ರಂದು ಗುಲಬರ್ಗಾ ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯಲ್ಲಿ ಅಕ್ರಮದ ಕುರಿತು ಆರ್‌.ಡಿ.ಪಾಟೀಲ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರಲ್ಲಿ ಮೇಳಕುಂದಿ ಹೆಸರು ಡಿವೈಎಸ್ಪಿ ಸಾಲಿ ಕಿವಿಗೂ ಬಿದ್ದಿತ್ತು. ಅಲ್ಲಿಂದ ಸಾಲಿ ಅವರು ಮೇಳಕುಂದಿ ಬೆನ್ನು ಬಿದ್ದಿದ್ದರು. ಆದರೆ, ಚಾಲಾಕಿ ಮೇಳಕುಂದಿ ಎಲ್ಲ ಸಾಕ್ಷ್ಯವನ್ನು ನಾಶ ಮಾಡಲು ಮುಂದಾಗಿದ್ದರು. ಹಾಗೆ ಮಾಡಲು ಪೊಲೀಸ್‌ ಅಧಿಕಾರಿಗಳೇ ಐಡಿಯಾ ಕೂಡ ನೀಡಿದ್ದರು ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಸಾಕ್ಷ್ಯವನ್ನು ತನ್ನ ಬಳಿ ಇಟ್ಟುಕೊಳ್ಳದ ಚಾಲಾಕಿ ಆರೋಪಿತ ಎಂಜಿನಿಯರ್‌ ಈತ. ಇಡೀ ಪ್ರಕರಣದ ವಾಸನೆ ಗ್ರಹಿಸಿದ್ದ ಸಾಲಿ ಮನಸ್ಸು ಮಾಡಿದ್ದರೆ ಪೊಲೀಸ್‌ ಇಲಾಖೆ ತಲೆ ಎತ್ತಿ ಗೌರವದಿಂದ ಮೆರೆಯಬಹುದಿತ್ತು. ಆದರೆ, ಹಣದಾಸೆಗೆ ತಾನು ತಲೆತಗ್ಗಿಸಿ, ಇಲಾಖೆ ಸಾರ್ವಜನಿಕರ ಎದುರು ತಲೆ ತಗ್ಗಿಸುವಂತಾಗಿದೆ.

-ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next