Advertisement
ಪ್ರದರ್ಶನದ ವಿಧಾನ:ಯಕ್ಷಿಣಿಗಾರ ಒಂದು ಟ್ರೇನಲ್ಲಿ ನಾಲ್ಕು ಲಕೋಟೆಗಳನ್ನು ತಂದು ಟೇಬಲ್ ಮೇಲಿಡುತ್ತಾನೆ. ಮೂವರು ಪ್ರೇಕ್ಷಕರನ್ನು ವೇದಿಕೆಯ ಮೇಲೆ ಕರೆದು, ಲಕೋಟೆಗಳ ಜಾಗವನ್ನು ಪ್ರೇಕ್ಷಕರಿಂದ ಅದಲು ಬದಲು ಮಾಡಿಸುತ್ತಾನೆ. “ಆ ನಾಲ್ಕರಲ್ಲಿ ಯಾವುದೋ ಒಂದು ಲಕೋಟೆಯಲ್ಲಿ 100 ರೂ. ನೋಟು ಇದೆ. ಒಬ್ಬೊಬ್ಬರು ಒಂದು ಲಕೋಟೆಯನ್ನು ತೆಗೆದುಕೊಳ್ಳಿ. ಉಳಿದ ಒಂದು ಲಕೋಟೆ ನನಗೆ. ಯಾರ ಲಕೋಟೆಯಲ್ಲಿ ನೋಟು ಇದೆಯೋ, ಅದು ಅವರಿಗೇ’ ಎನ್ನುತ್ತಾನೆ. ಮೂವರು ಪ್ರೇಕ್ಷಕರು ಒಬ್ಬೊಬ್ಬರಾಗಿ ಲಕೋಟೆ ಕೈಗೆತ್ತಿಕೊಂಡು ತೆರೆದು ನೋಡುತ್ತಾರೆ. ಮೊದಲ ಪ್ರೇಕ್ಷಕನ ಲಕೋಟೆಯಲ್ಲಿ ನೋಟಿಲ್ಲ, ಬರೀ ಬಿಳಿ ಪೇಪರ್ ಇದೆ. ಎರಡನೆಯವನು ಆಸೆಯಿಂದ ಲಕೋಟೆ ತೆರೆದರೆ, ಅದರಲ್ಲೂ ಬಿಳಿ ಪೇಪರ್. ಮೂರನೆಯವನಿಗೂ ನಿರಾಸೆಯೇ… ಟೇಬಲ್ ಮೇಲೆ ಉಳಿದ ಕೊನೆಯ ಲಕೋಟೆಯನ್ನು ಜಾದೂಗಾರ ಗಿಲಿ ಗಿಲಿ ಪೂವ್ವಾ ಎಂದು ಮಂತ್ರಿಸಿ, ತೆರೆದು ನೋಡಿದರೆ; ಅದರಲ್ಲಿ 100 ಸಾವಿರದ ನೋಟು ಇರುತ್ತದೆ. ಜಾದೂಗಾರ ತೆರೆಯುವ ಲಕೋಟೆಯಲ್ಲೇ ಹಣ ಬಂದಿದ್ದು ಹೇಗೆ?
ನಾಲ್ಕು ಲಕೋಟೆಗಳು, 100 ರೂ. ನೋಟು, ಒಂದು ಟ್ರೇ ಮಾಡುವ ವಿಧಾನ:
ಒಂದು ಟ್ರೇಯಲ್ಲಿ ನಾಲ್ಕು ಲಕೋಟೆಗಳನ್ನೂ ಜೋಡಿಸಿಕೊಳ್ಳಿ. ನಾಲ್ಕೂ ಲಕೋಟೆಗಳಲ್ಲೂ ಬಿಳಿ ಪೇಪರ್ ಇಡಿ. ಈಗ ಪ್ರೇಕ್ಷಕರು ಯಾವುದೇ ಲಕೋಟೆಯನ್ನು ಆರಿಸಿಕೊಂಡರೂ, ಅದರಲ್ಲಿ ಬಿಳಿ ಪೇಪರ್ ಇರುತ್ತದೆ. ಕಡೆಯಲ್ಲಿ ಎಲ್ಲರೂ ಆರಿಸಿ ಬಿಟ್ಟ ಲಕೋಟೆಯಲ್ಲಿಯೂ ಬಿಳಿ ಪೇಪರ್ ಇರುತ್ತದೆ. ಹಾಗಿದ್ದರೆ ಜಾದೂಗಾರನಿಗೆ ಸೇರಿದ ಆ ಕಡೆಯ ಲಕೋಟೆಯಲ್ಲಿ ದುಡ್ಡು ಸಿಗೋದು ಹೇಗೆ? ಅದೇ ಗಮ್ಮತ್ತು. ನೀವು ಲಕೋಟೆಯನ್ನು ಇಟ್ಟುಕೊಂಡಿರುವ ಟ್ರೇ ಕೆಳಗೆ 10 ರೂ. ನೋಟೊಂದನ್ನು ನಿಮ್ಮ ಬಲಗೈ ನಾಲ್ಕು ಬೆರಳುಗಳಿಂದ ಅದುಮಿ ಹಿಡಿದಿರಬೇಕು. ಮೇಲೆ ಹೆಬ್ಬೆರಳು ಟ್ರೇ ಹಿಡಿದಿರಬೇಕು. ಟೇಬಲ… ಮೇಲೆ ಟ್ರೇ ಇಡುವಾಗ, ನೋಟು ನಿಮ್ಮ ಕಡೆಗೆ ಬರುವ ಹಾಗೆ ಎಚ್ಚರ ವಹಿಸಿ. ಟ್ರೇ ಕೊಂಚ ಟೇಬಲ್‌ನಿಂದ ಆಚೆ(ಹೊರಗೆ) ಬಂದಿರಲಿ. ಕೊನೆಯಲ್ಲಿ ಉಳಿದ ಲಕೋಟೆಯನ್ನು ತೆಗೆದುಕೊಳ್ಳುವಾಗ ಲಕೋಟೆಯನ್ನು ಟೇಬಲ್‌ನ ತುದಿಯವರೆಗೂ ಎಳೆದು, ಜೊತೆಗೆ ನೋಟನ್ನು ಸೇರಿಸಿ ಮೇಲಕ್ಕೆ ಎತ್ತಿಕೊಳ್ಳಿ. ಈಗ ಲಕೋಟೆಯನ್ನು ಒಂದು ಬಾಗ ಮಾತ್ರ ಪ್ರೇಕ್ಷಕರಿಗೆ ಕಾಣುತ್ತದೆ. ಲಕೋಟೆ ತೆರೆಯುವ ಭಾಗ, ಅಂದರೆ ಜಾದೂಗಾರನಿಗೆ ಕಾಣುವ ಭಾಗದ ಹಿಂದುಗಡೆ ನೋಟು ಇರುತ್ತದೆ. ಈಗ ಲಕೋಟೆ ತೆರೆಯುವಂತೆ ನಟಿಸುತ್ತಾ, ನೋಟು ಲಕೋಟೆಯೊಳಗೇ ಇತ್ತೇನೋ ಎಂಬಂತೆ ನೋಟನ್ನು ಈಚೆಗೆ ಎಳೆದು ತೋರಿಸಿ. ಪ್ರೇಕ್ಷಕರು ತಾವು ಆರಿಸದೆ ಬಿಟ್ಟಿದ್ದ ಲಕೋಟೆಯಲ್ಲಿ ದುಡ್ಡು ಇದ್ದಿದ್ದನ್ನು ನೋಡಿ ತಮ್ಮ ಅದೃಷ್ಟ ಸರಿಯಿಲ್ಲ ಅಂದುಕೊಳ್ಳುತ್ತಾರೆ. ಆದರೆ ಈ ಮ್ಯಾಜಿಕ್‌ನಿಂದ ಜಾದೂಗಾರನೇ ಯಾವತ್ತಿಗೂ ಅದೃಷ್ಟಶಾಲಿ ಎಂದು ಸಾಬೀತುಪಡಿಸಬಹುದು.
Related Articles
Advertisement