ಹಾಸನ: ಪ್ರೀತಿಯಲ್ಲಿ ವಿರಸ ಮೂಡಿದ ಹಿನ್ನೆಲೆಯಲ್ಲಿ ಪ್ರಿಯತಮೆಯು ಪ್ರಿಯಕರನಿಗೆ ಚಾಕುವಿನಿಂದ ಇರಿದು ಪರಾರಿ ಯಾಗಿರುವ ಘಟನೆ ನಗರದ ಬಿ.ಎಂ. ರಸ್ತೆ ಪ್ರತಿಷ್ಠಿತ ಖಾಸಗಿ ಹೋಟೆಲ್ ಎದುರು ಬುಧವಾರ ರಾತ್ರಿ ನಡೆದಿದೆ.
ಇರಿತಕ್ಕೆ ಒಳಗಾಗಿರುವ ಮನುಕುಮಾರ್ (25) ಸ್ಥಿತಿ ಗಂಭೀರವಾಗಿದ್ದು ಹಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತಾಲೂಕಿನ ಎ.ಗುಡುಗನ ಹಳ್ಳಿಯ ಮನುಕುಮಾರ್, ಭವಾನಿ ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರೀತಿಸುತ್ತಿದ್ದರು. ಇತ್ತೀಚೆಗೆ ವಿರಸ ಮೂಡಿತ್ತು. ಬುಧವಾರ ರಾತ್ರಿ ಹೊಸ ವರ್ಷಾಚರಣೆಗೆ ಸ್ನೇಹಿತರ ಜೊತೆ ಹೋಟೆಲ್ಗೆ ಮನುಕುಮಾರ್ ಹೋಗಿದ್ದು ಈ ವಿಷಯ ತಿಳಿದಿದ್ದ ಭವಾನಿ, ಪ್ರಿಯಕರನಿಗೆ ಪದೇ ಪದೆ ಕರೆ ಮಾಡಿದರೂ ಕರೆ ಸ್ವೀಕರಿಸಿರಲಿಲ್ಲ. ಭವಾನಿಯೇ ಹೋಟೆಲ್ ಗೇಟ್ ಒಳಗೆ ಹೋದಾಗ ಮನುಕುಮಾರ್ ಸಿಕ್ಕಿದ್ದು, ಚಾಕುವಿನಿಂದ ಇರಿದು ಪರಾರಿಯಾಗಿದ್ದಾಳೆ.
ಸದ್ಯ ಪೊಲೀಸರು ಕೊಲೆ ಯತ್ನ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.