ನಂಜನಗೂಡು: ಲಾರಿ ಕದ್ದು ಮಾರಾಟಕ್ಕೆ ಮುಂದಾಗಿದ್ದ ಮೂವರು ಆರೋಪಿಗಳನ್ನುಲಾರಿ ಸಮೇತ ಬಂಧಿಸಲಾಗಿದ್ದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಉಪವಿಭಾಗದ ಎಎಸ್ಪಿ ಮೊಹಮದ್ ಸುಜೀತಾ ತಿಳಿಸಿದರು.
ಇಲ್ಲಿನ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರಿನ ಗೌಸಿಯಾ ನಗರದ ನಿವಾಸಿ ಮೊಸಿನ್ ಖಾನ್, ಶಾಂತಿನಗರದ ನಿವಾಸಿ ದಾದಾಪೀರ್ ಹಾಗೂ ತಾಲೂಕಿನ ಮೂಡಹಳ್ಳಿ ಗ್ರಾಮದ ಮಂಜುನಾಥ ಈ ಕಳುವಿನ ಆರೋಪಿಗಳಾಗಿದ್ದು ಇವರಿಂದ ಕಳುವಾಗಿದ್ದ ಲಾರಿ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಸುಜೀತಾ ಹೇಳಿದರು.
ಶಬೀರ್ ಖಾನ್ ಎಂಬುವರು ತಮ್ಮ ಲಾರಿ ಕೆಎ-14,ಎ-1826 ಅನ್ನು ಬಣ್ಣಾರಿ ಅಮ್ಮನ್ ಶುಗರ್ ಕಾರ್ಖಾನೆಗೆ ಬಾಡಿಗೆಗೆ ನೀಡಿದ್ದರು. ಸೆ.26ರಂದು ಲಾರಿ ಚಾಲಕ ಮಹೇಶ್ ಕಾರ್ಖಾನೆ ಬಳಿ ಲಾರಿ ನಿಲ್ಲಿಸಿ ಬಿಲ್‌ಗಾಗಿ ಒಳಗೆ ಹೋಗಿ ಬಂದು ನೋಡುವಷ್ಟರಲ್ಲಿ ಲಾರಿ ಮಾಯಾವಾಗಿತ್ತು.
ಈ ಬಗ್ಗೆ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಅ.16ರಂದು ಮೈಸೂರಿನಲ್ಲಿ ಲಾರಿಯನ್ನು ಮಾರಾಟ ಮಾಡಲು ಮುಂದಾಗಿದ್ದ ವೇಳೆ ಈ ಮೂವರು ಆರೋಪಿಗಳನ್ನು ಬಂದಿಸಲಾಗಿದೆ. ಇವರಲ್ಲಿ ಮೊಸಿನ್ ಖಾನ್ ಹಾಗೂ ಮಂಜುನಾಥ್ ಈ ಹಿಂದೆ ಟ್ರಾಕ್ಟರ್ ಕಳುವು ಮಾಡಿ ಸಿಕ್ಕಿಬಿದ್ದರು ಎನ್ನಲಾಗಿದೆ. ಜಾಮೀನಿನ ಹೊರಬಂದ ಕೆಲವೇ ದಿನಗಳಲ್ಲಿ ಲಾರಿ ಕಳ್ಳತನ ಮಾಡಿ ಬಂಧಿಯಾಗಿದ್ದಾರೆ ಎಂದು ಸುಜೀತಾ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ಗೋಪಾಲಕೃಷ್ಣ, ಬಿಳಿಗೆರೆ ಠಾಣೆ ಪಿಎಸ್‌ಐ ಸತೀಶ್, ಸಿಬ್ಬಂದಿ ಆನಂದ್, ಸತೀಶ್, ದೇವರಾಜು, ಕೃಷ್ಣ, ಪ್ರಸನ್ನಕುಮಾರ್, ಅಬ್ದುಲ್ ಲತೀಫ್, ಶ್ರೀಕಾಂತ್ ಸುರೇಶ್ ಅವರಿಗೆ ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣವರ್ ಬಹುಮಾನ ಘೋಷಿಸಿರುವುದಾಗಿ ಇದೇ ಸಮಯದಲ್ಲಿ ಹೇಳಿದರು.