ಕಾಪು: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಡಿದ ಅಮಲಿನಲ್ಲಿ ಸಾರ್ವಜನಿಕರ ಪ್ರಾಣಕ್ಕೆ ಎರವಾಗುವ ರೀತಿಯಲ್ಲಿ ಲಾರಿಯನ್ನು ಅಡ್ಡಾದಿಡ್ಡಿಯಾಗಿ ಓಡಿಸುತ್ತಿದ್ದ ಚಾಲಕನನ್ನು ತಡೆದು ನಿಲ್ಲಿಸಿ, ನೂರಾರು ಮಂದಿ ಹೆದ್ದಾರಿ ಸಂಚಾರಿಗಳ ಪ್ರಾಣ ಉಳಿಸುವ ಪ್ರಯತ್ನ ನಡೆಸಿದ ಕಾಪು ಎಸ್ ಐ ಸಿ. ರಾಘವೇಂದ್ರ ಅವರ ಕಾರ್ಯಾಚರಣೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಕುಡಿತದ ಅಮಲಿನಲ್ಲಿದ್ದ ಮಹಾರಾಷ್ಟ್ರ ನೋಂದಣಿಯ ಲಾರಿಯನ್ನು ಚಾಲಕ ಅಡ್ಡಾದಿಡ್ಡಿಯಾಗಿ ಓಡಿಸುತ್ತಿದ್ದು, ಇದರಿಂದಾಗಿ ಹೆದ್ದಾರಿಯಲ್ಲಿ ಎರಡು ಮೂರು ಕಡೆ ಅಪಘಾತ ಆಗುವುದರಲ್ಲಿದ್ದು, ಇತರ ವಾಹನ ಸವಾರರ ಎಚ್ಚೆತ್ತುಕೊಳ್ಳುವಿಕೆಯಿಂದಾಗಿ ಅನಾಹುತ ತಪ್ಪಿತ್ತು.
ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರು ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾದ ಕಾಪು ಎಸ್ ಐ ರಾಘವೇಂದ್ರ ಸಿ. ಅವರು ಕೂಡಲೇ ಕಾಪುವಿನ ಹೆದ್ದಾರಿಯಲ್ಲಿ ಲಾರಿಯನ್ನು ತಡೆದು ನಿಲ್ಲಿಸಿ, ಲಾರಿ ಮತ್ತು ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ದೇಶದ ಭದ್ರತಾ ವಿಚಾರ ಸೋರಿಕೆಯಾಗಿರುವುದು ಖಂಡನೀಯ: ಪ್ರಕಾಶ್ ರಾಠೋಡ್
ಕಾಪು ಎಸ್ ಐ ರಾಘವೇಂದ್ರ ಅವರ ಸಮಯ ಪ್ರಜ್ಞೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಆಗುತ್ತಿದ್ದ ದೊಡ್ಡ ಅನಾಹುತವೊಂದಕ್ಕೆ ಬ್ರೇಕ್ ಬಿದ್ದಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್ ಪೂರ್ವಾಭ್ಯಾಸ, ಬದಲಿ ಮಾರ್ಗ ಕಂಡುಕೊಳ್ಳಿ : ಸಂಚಾರಿ ಪೋಲಿಸರು