Advertisement

ಲೈಫ್ ಕ್ಯಾಮೆರಾ ಆ್ಯಕ್ಷನ್‌

06:00 AM Aug 14, 2018 | Team Udayavani |

6. ದ ವೇ ಬ್ಯಾಕ್‌ (2010)
ನಿರ್ದೇಶನ: ಪೀಟರ್‌ ವೆಯರ್‌
ನಿರ್ಮಾಣ: ನ್ಯಾಷನಲ್‌ ಜಿಯಾಗ್ರಫಿಕ್‌ ಫಿಲಂಸ್‌ 

Advertisement

1956ರಲ್ಲಿ ಪ್ರಕಟವಾದ “ದ ಲಾಂಗ್‌ ವಾಕ್‌’ ಎಂಬ ಸತ್ಯಘಟನೆಗಳ ಆಧಾರಿತ ಕಾದಂಬರಿಯ ಬೆಳ್ಳಿಪರದೆ ರೂಪಾಂತರ ಈ ಚಿತ್ರ. ದ್ವಿತೀಯ ಮಹಾಯುದ್ಧದ ವೇಳೆ ರಷ್ಯಾ, ಪೋಲೆಂಡ್‌ ಮೇಲೆ ದಾಳಿ ನಡೆಸುತ್ತದೆ. ಜಯ ಸಾಧಿಸುವ ರಷ್ಯನ್ನರು ಪೋಲೆಂಡಿನ ಸೈನಿಕರನ್ನು ಸೈಬೀರಿಯಾ ಪ್ರಾಂತ್ಯದ ಜೈಲಿಗೆ ರವಾನಿಸುತ್ತದೆ. ಭೂಖಂಡದ ಅತಿ ದುರ್ಗಮ ಪ್ರದೇಶವಾಗಿರುವ ಹಾಗೂ ಅತಿಯಾದ ಹವಾಮಾನ ವೈಪರೀತ್ಯ ಹೊಂದಿರುವ ಸೈಬೀರಿಯಾದ ಜೈಲಿನಿಂದ ತಪ್ಪಿಸಿಕೊಂಡು ಹೋಗುವುದೆಂದರೆ ಅದು ಸಾವಿಗೆದುರಾಗಿ ನಡೆಸುವ ಹೋರಾಟ ಎಂದೇ ಹೇಳಬಹುದು. ಅಂಥ ಪ್ರದೇಶಕ್ಕೆ ಪೋಲೆಂಡ್‌ನಿಂದ ಕೈದಿಯಾಗಿ ರವಾನೆಯಾಗುವ ಜನುಝ್ ವೀಝೆಕ್‌, ಆ ಜೈಲಿನಿಂದ ಪಲಾಯನ ಮಾಡಲು ಯೋಜನೆ ರೂಪಿಸುತ್ತಾನೆ. ತನ್ನ ಯೋಜನೆಗೆ ಕೆಲ ಸಮಾನ ಮನಸ್ಕರನ್ನು ಒಗ್ಗೂಡಿಸುತ್ತಾನೆ. ಅದೊಂದು ದಿನ ಪ್ಲಾನ್‌ ಮಾಡಿದಂತೆಯೇ ಜೈಲಿನಿಂದ ಅವರು ಹೊರಬೀಳುತ್ತಾರೆ. ಆದರೆ ಮುಂದೇನು? ವೈರಿಗಳಿಂದ ತಪ್ಪಿಸಿಕೊಂಡು ಹೊರಟವರು ಪ್ರಕೃತಿಯ ವಿರುದ್ಧ ಸೆಣಸಾಟಕ್ಕೆ ನಿಂತುಬಿಡುತ್ತಾರೆ. ಮುಂದಾಗುವುದು ಎಣಿಸಿದ್ದಕ್ಕಿಂತ ಘೋರವಾಗಿರುತ್ತದೆ. ಹವಾಮಾನ ವೈಪರೀತ್ಯ, ಹಸಿವು, ಬಳಲಿಕೆಗಳು ತಂಡದ ಸದಸ್ಯರನ್ನು ಹೈರಾಣಾಗಿಸುತ್ತದೆ. ಕೆಲವರಿಗೆ ಇದಕ್ಕಿಂತ ಜೈಲಿನಲ್ಲಿ ನಿಧಾನವಾಗಿ ಸಾಯುವುದೇ ಚೆನ್ನಾಗಿತ್ತು ಎಂದೆನಿಸತೊಡಗುತ್ತದೆ. ಆದರೆ ಸ್ವಾತಂತ್ರ್ಯವಿಲ್ಲದೆ ಬದುಕುವುದಕ್ಕಿಂತ ನೀಲಾಕಾಶದ ಕೆಳಗೆ ಕೈಕಾಲುಗಳಿಗೆ ಸಂಕೋಲೆಗಳಿಲ್ಲದೆ ಕಣ್ಮುಚ್ಚುವುದೇ ಲೇಸು ಅನ್ನುವುದು ಅರ್ಥವಾಗುತ್ತಾ ಹೋಗುತ್ತೆ. ಹಿಮ, ಬಿಸಿಲು, ಭ್ರಮೆ ಎಲ್ಲವನ್ನೂ ದಾಟಬೇಕಿದೆ. ಈ ಪಯಣದಲ್ಲಿ ಉಳಿಯುವವರೆಷ್ಟು ಜನ, ಮಡಿಯುವವರೆಷ್ಟು ಜನ? ಪೂರ್ಣಚಂದ್ರ ತೇಜಸ್ವಿಯವರ “ಮಹಾ ಪಲಾಯನ’ ಹೊತ್ತಗೆಯನ್ನು ಈ ಸಿನಿಮಾ ನೆನಪಿಸುತ್ತದೆ. 

ಚೇತನ್‌ ಓ.ಆರ್‌.

Advertisement

Udayavani is now on Telegram. Click here to join our channel and stay updated with the latest news.

Next