Advertisement
ಮಾರ್ಚ್ ತಿಂಗಳು ಬಂದರೆ ಸಾಕು; ಬೇಸಿಗೆಯ ಜತೆಗೇ ಈ ಬೀಳ್ಕೊಡುಗೆ ಕಾರ್ಯಕ್ರಮವೂ ಬಂದು ಬಿಡುತ್ತದೆ. ನೆನ್ನೆ ಮೊನ್ನೆ ಕಾಲೇಜು ಸೇರಿದ ನೆನಪು ಹಸಿರಾಗಿರುವಾಗಲೇ ಬೀಳ್ಕೊಡುಗೆಯ ತಾಪ ಎದೆಗೆ ತಾಕಿ ಮನಸ್ಸು ಅಲ್ಲೋಲ ಕಲ್ಲೋಲ! ನೆನಪು, ಕನಸು, ಕನವರಿಕೆ, ಉಲ್ಲಾಸ, ಉತ್ಸಾಹ, ಆಯಾಸ, ನಿರಾಯಾಸ, ಬವಣೆ, ಚಿಮ್ಮುವ ನಗು, ಕಾಂತಿ, ಕ್ರಾಂತಿ, ಸೋಲು, ಗೆಲವು, ಕಚಗುಳಿ, ಆಕಳಿಕೆ, ಸೀನು, ಬೈಗುಳ, ಆಕಾಂಕ್ಷೆ, ಹೊಸತನ, ಪ್ರಯಾಣ, ಪ್ರಯಾಸ, ತೂಕಡಿಕೆ, ನೀರಡಿಕೆ, ಮೋಹ, ಸ್ವಾಹ… ಅಬ್ಟಾ, ಇಂಥಾ ಅನೇಕ ವಿಶೇಷಗಳನ್ನು ಒಟ್ಟುಗೂಡಿಸಿದಾಗ ಈ ಎದೆ ಬಿರಿವ ನೋವು ಬೀಳ್ಕೊಡುಗೆಯ ರೂಪದಲ್ಲಿ ಕೈ ಜಗ್ಗುತ್ತದೆ.
ಅಂದು ಎಲ್ಲರೂ ಹೊಸ ದಿರಿಸಿನೊಂದಿಗೆ ಕಾಲೇಜಿಗೆ ಬರುತ್ತೇವೆ. ಆಟೋಗ್ರಾಫ್ ಹಾಕುತ್ತೇವೆ, ಹಾಕಿಸಿಕೊಳ್ಳುತ್ತೇವೆ. ಸಿಹಿ ಹಂಚುತ್ತೇವೆ. ಅಳು- ನಗು ಎರಡೂ ಒಂದನ್ನೊಂದು ಸಂಧಿಸುವ ಸಂಕ್ರಮಣ. ಭಾವನೆಗಳಿಗೆ ಪದ ಜೋಡಿಸಿ ಹಾಡುತ್ತೇವೆ, ಹಾಡಿನಲ್ಲಿ ಇಷ್ಟು ದಿನ ಹೇಳದಿದ್ದದ್ದನ್ನು ಹೇಳಿ ಹಗುರಾಗುತ್ತೇವೆ. ಮಾತು ಎಷ್ಟು ಆಡಿದರೂ ಮುಗಿಯದ ಗಣಿ. ಮೌನಕ್ಕೆ ಜಾಗವೇ ಇಲ್ಲ. ನೋಟ, ಅಳು, ತಳಮಳ, ಕಂಪನ, ಸಂಕಟಗಳಿಗೆ ಲಗಾಮು ಕಳಚಿಕೊಂಡಿರುತ್ತದೆ. ಇಷ್ಟಕ್ಕೂ ಬೀಳ್ಕೊಡುಗೆಯ ದಿನ ಕಣ್ಣೀರು ಹಾಕದವರು ಯಾರಾದರೂ ಇದ್ದಾರೆಯೇ? ಮೂರ್ನಾಲ್ಕು ವರ್ಷದ ನೆನಪುಗಳೆಲ್ಲಾ ಒಟ್ಟಿಗೇ ಎದುರುಗೊಂಡಾಗ ಮುಷ್ಟಿ ಗಾತ್ರದ ಹೃದಯ ಹೇಗೆ ತಾನೆ ಸಹಿಸೀತು? ಯಾರಲ್ಲಿ ಹೇಳಿಕೊಂಡೀತು ತಲ್ಲಣ ತಹತಹವ? ಒಂದೇ ಗೂಡಿನ ಹಕ್ಕಿಗಳಂತಿದ್ದವರು ಇಂದಿನಿಂದ ನಾನೊಂದು ತೀರ ನೀನೊಂದು ತೀರ. ಒಬ್ಬರ ಮುಖ ಮತ್ತೂಬ್ಬರು ನೋಡುವುದು ಯಾವ ಕಾಲಕ್ಕೋ? ಗೊಂಬೆ ಆಡೊÕàನೇ ಹೇಳಬೇಕು.
ಅವಳು ಸಖತ್ತು ಡ್ರೆಸ್ ಮಾಡಿಕೊಂಡು, ಇವನು ಟ್ರಿಮ್ಮಾಗಿ ಬಂದಿದ್ದರೂ ಅಲ್ಲೇನೇ ಘಟಿಸಿದರೂ ಅದು ಅಲ್ಪಾಯು. ಉಳಿಯಲು ಸಾಧ್ಯವಿಲ್ಲ. ಆದರೂ ಬದುಕಿನೆಡೆಗಿನ ಕಡು ಮೋಹಿಗಳಲ್ಲವೆ ನಾವು! ಸಾಯುವಾಗಲೂ ಹುಲ್ಲು ಕಡ್ಡಿ ಹಿಡಿದುಕೊಂಡುಬಿಡುತ್ತೇವೆ. ಅವಳು ಮತ್ತೆ ಮತ್ತೆ ತಿರುಗಿ ನೋಡುತ್ತಾಳೆ, ಇವನು ಕಣ್ಣಲ್ಲೇ ಅಸಹಾಯಕತೆ ಹೊರಹಾಕುತ್ತಾನೆ. ಅವಳು ಏನನ್ನೋ ಹೇಳ ಬಯಸುತ್ತಾಳೆ, ಇವನು ಮೌನದಲ್ಲಿ ಮಹಾಕಾವ್ಯ ಬರೆದು ಬಿಸಾಕುತ್ತಾನೆ. ಅವಳು ದೀರ್ಘವಾಗಿ ಉಸಿರು ಚೆಲ್ಲಿ ತಲೆ ತಗ್ಗಿಸುತ್ತಾಳೆ, ಇವನು- ಓ ನನ್ನ ಚೇತನ ಆಗು ನೀ ಅನಿಕೇತನವಾಗುತ್ತಾನೆ. ಅವಳ ಕೆನ್ನೆಯ ಮೇಲಿನ ನಿಂತ ಕಣ್ಣೀರ ಹನಿಯೊಳಗೆ ಕೋಟಿ ಕನಸುಗಳು ಕರಗುತ್ತಿವೆ, ಇವನ ಎದೆ ಬಡಿತ ಇಮ್ಮಡಿಯಾಗಿ ಆಮೂಲಾಗ್ರ ಪ್ರಳಯ ಸಂಭವಿಸುತ್ತದೆ.
Related Articles
Advertisement
– ಕಂಡಕ್ಟರ್ ಸೋಮು, ಎಡೆಯೂರು