Advertisement

ನಿರೀಕ್ಷಿಸಿದ್ದು ಬಹಳ; ಸಿಕ್ಕಿದ್ದು ಮಾತ್ರ ಅಲ್ಪ!

01:47 AM Mar 06, 2020 | mahesh |

ಮಹಾನಗರ: ಮಂಗಳೂರು ಸಹಿತ ದ.ಕ. ಜಿಲ್ಲೆಗೆ ಈ ಬಾರಿಯ ರಾಜ್ಯ ಬಜೆಟ್‌ ಮೇಲೆ ಬಹಳಷ್ಟು ನಿರೀಕ್ಷೆ, ಆಶಾ ವಾದವಿತ್ತು. ಆದರೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ಮಂಡಿಸಿದ ಬಜೆಟ್‌ ದ.ಕ. ಜಿಲ್ಲೆಗೆ ಅಲ್ಪ ಪ್ರಮಾಣದಲ್ಲಿ ಮಾತ್ರ ಲಾಭ ನೀಡಿದೆ! ರಾಜಧಾನಿ ಬೆಂಗಳೂರಿನ ಅಭಿವೃದ್ಧಿ ಗಾಗಿ ಹಲವಾರು ಯೋಜನೆಗಳನ್ನು ರಾಜ್ಯ ಬಜೆಟ್‌ನಲ್ಲಿ ಪ್ರಕಟಿಸಿದ ಮುಖ್ಯ ಮಂತ್ರಿಗಳು ರಾಜ್ಯದ ಎರಡನೇ ಮುಖ್ಯ ನಗರ ಮಂಗಳೂರಿನ ಅಭಿವೃದ್ಧಿಗಾಗಿ ಯಾವುದೇ ಹೊಸ ಯೋಜನೆಗಳನ್ನು ಪ್ರಕಟಿಸಿಲ್ಲ. ಜಿಲ್ಲೆಯ ಪಾಲಿಗೂ ಮಹತ್ವದ ಯಾವುದೇ ಹೊಸ ಯೋಜನೆಗಳಿಲ್ಲ.

Advertisement

ದೊರಕಿದ್ದೇನು?
ಮೀನುಗಾರರು ಆಧುನಿಕ ಮೀನುಗಾರಿಕೆ ತಾಂತ್ರಿಕತೆಗಳನ್ನು ಅಳವಡಿ ಸಿಕೊಳ್ಳುವಂತೆ ಪ್ರೋತ್ಸಾಹಿಸಲು ಕರ್ನಾಟಕ ಮತ್ಸ್ಯವಿಕಾಸ ಯೋಜನೆ’ ಯನ್ನು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆ ಜಾರಿಗೆ ತರಲು ಉದ್ದೇಶಿ ಸಲಾಗಿದೆ. 1.5 ಕೋ.ರೂ.ಗಳನ್ನು ಇದ ಕ್ಕಾಗಿ ಒದಗಿಸಲಾಗಿದೆ. ಮೀನುಗಾರ ಮಹಿಳೆಯರು ಮೀನು ಇಳಿದಾಣದಿಂದ ಮಾರುಕಟ್ಟೆಗೆ ತ್ವರಿತವಾಗಿ ಮೀನು ಸಾಗಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ 1,000 ಮೀನುಗಾರ ಮಹಿಳೆಯರಿಗೆ ಮಹಿಳಾ ಮೀನುಗಾರ ಸಬಲೀಕರಣ ಯೋಜನೆಯ ಮೂಲಕ ದ್ವಿಚಕ್ರ ವಾಹನಗಳನ್ನು ನೀಡಲು ಉದ್ದೇಶಿಸಲಾಗಿದೆ. ಈ ಯೋಜನೆಯನ್ನು 5 ಕೋ.ರೂ. ವೆಚ್ಚದಲ್ಲಿ ಅನುಷ್ಠಾನಿಸುವ ಭರವಸೆ ದೊರೆತಿದೆ.

ಮೂಲ್ಕಿ: ಹಿನ್ನೀರು ಮೀನುಮರಿ ಉತ್ಪಾದನ ಕೇಂದ್ರ
ಕರಾವಳಿ ಜಲಕೃಷಿ ಎಂದೇ ಕರೆಯಲ್ಪಡುವ ಹಿನ್ನೀರು ಜಲ ಕೃಷಿಯು ದೇಶದ, ರಾಜ್ಯದ ಒಟ್ಟಾರೆ ಮೀನುಗಾರಿಕೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಹಿನ್ನೀರು ಮೀನುಗಾರಿಕೆಯನ್ನು ಸದೃಢಗೊಳಿಸಲು ಮೂಲ್ಕಿಯಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರವನ್ನು 2 ಕೋ.ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಉಲ್ಲೇಖೀಸಲಾಗಿದೆ.

ಕುಳಾಯಿ: ಮೀನು ರಫ್ತು ಸ್ಥಾವರ
ಕುಳಾಯಿಯಲ್ಲಿ ಹೊಸ ಮೀನುಗಾರಿಕೆ ಬಂದರು ನಿರ್ಮಿಸಲಾಗುತ್ತಿದೆ. ಈ ಪ್ರದೇಶದ ರಫ್ತು ವಹಿವಾಟು ಹೆಚ್ಚಿಸುವ ಉದ್ದೇಶದಿಂದ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರವನ್ನು ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯಡಿ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ 12.50 ಕೋ.ರೂ. ವೆಚ್ಚದಲ್ಲಿ ಸ್ಥಾಪಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಿಲಾಗಿದೆ.

ಮಂಗಳೂರು-ಬೆಂಗಳೂರು ರೈಲು ವೇಗ ಉದ್ದೇಶ
ಹಾಸನ-ಮಂಗಳೂರು ರೈಲ್‌ ಡೆವೆಲಪ್‌ಮೆಂಟ್‌ ಕಾರ್ಪೊರೇಷನ್‌ ಸಂಸ್ಥೆಯು 2020-21ನೇ ಸಾಲಿನಲ್ಲಿ ಸಕಲೇಶಪುರ, ಸುಬ್ರಹ್ಮಣ್ಯ ಲ್ದಾಣಗಳ ನಡುವಿನ ಘಾಟಿ ಪ್ರದೇಶದ ರೈಲು ಮಾರ್ಗದ ಕ್ಷಮತೆಯನ್ನು ಹೆಚ್ಚಿಸಲಾಗುವುದು. ಇದರಿಂದ ಬೆಂಗಳೂರು-ಮಂಗಳೂರಿನ ನಡುವಿನ ರೈಲುಗಳ ವೇಗ ಹೆಚ್ಚುವುದಲ್ಲದೆ, ಹೆಚ್ಚುವರಿ ರೈಲು ಸೇವೆ ಆರಂಭಿಸಲು ನೆರವಾಗುತ್ತದೆ. ಆದರೆ ಯಾವ ಯೋಜನೆ ಎಂಬುದರ ಬಗ್ಗೆ ಇಲ್ಲಿ ಸ್ಪಷ್ಟತೆಯಿಲ್ಲ!

Advertisement

ಪಶ್ಚಿಮವಾಹಿನಿಗೆ ಒತ್ತು
ಕರಾವಳಿ ಪ್ರದೇಶದಲ್ಲಿ ಪಶ್ಚಿಮಘಟ್ಟದ ನದಿಗಳಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ಯೋಜನೆಗಳನ್ನು ವ್ಯಾಪಕವಾಗಿ ಅನುಷ್ಠನಗೊಳಿಸುವ ಕುರಿತು ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಲಾಗುವುದು. ಅಡಿಕೆ ಬೆಳೆಗಾರರ ಅಭಿವೃದ್ಧಿಗಾಗಿ ದೀರ್ಘಾವಧಿ ಕೃಷಿ ಸಾಲದ ಪೈಕಿ ಗರಿಷ್ಠ 2 ಲಕ್ಷ ರೂ.ವರೆಗಿನ ಸಾಲಕ್ಕೆ ಶೇ.5 ಬಡ್ಡಿ ವಿನಾಯಿತಿ, ಬೆಂಗಳೂರು ಸಹಿತ ರಾಜ್ಯದ 10 ಮಹಾನಗರ ಪಾಲಿಕೆ ವ್ಯಾಪ್ತಿಯ ಕೊಳಚೆ ಪ್ರದೇಶ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ನಿರೀಕ್ಷೆಗಳೇನಿತ್ತು?
ಮಂಗಳೂರು ಪಾಲಿಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ, ಕೈಗಾರಿಕೆಗಳ ಹೂಡಿಕೆಗೆ ಪ್ರೋತ್ಸಾಹ, ಕೈಗಾರಿಕಾ ಪಾರ್ಕ್‌ ನಿರ್ಮಾಣ, ಮಂಗಳೂರು ಏರ್‌ಪೋರ್ಟ್‌ನ ವಿಮಾನಗಳಿಗೆ ವಿಧಿಸಲಾಗುತ್ತಿರುವ ಎಟಿಎಫ್‌ ವ್ಯಾಟ್‌ನಲ್ಲಿ ವಿನಾಯಿತಿ, 3ನೇ ಹಂತದ ಜೆಟ್ಟಿ ವಿಸ್ತರಣೆಗೆ ಅನುದಾನ, ತುಂಬೆ ವೆಂಟೆಡ್‌ ಡ್ಯಾಂನಲ್ಲಿ 7 ಮೀಟರ್‌ ನೀರು ನಿಲುಗಡೆಗೆ ಅನುದಾನ, ಮಂದಾರ ತ್ಯಾಜ್ಯ ನಿರ್ವಸಿತರಿಗೆ ಪರಿಹಾರ, ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನದ ನಿರೀಕ್ಷೆಯಿತ್ತು. ಆದರೆ ಇದಾವುದೂ ಈ ಬಜೆಟ್‌ನಲ್ಲಿ ಉಲ್ಲೇಖವಾಗಿಲ್ಲ. ಜತೆಗೆ ಈ ಹಿಂದೆ ಘೋಷಣೆಯಾಗಿದ್ದ ಹಳೆ ಬಂದರಿನಲ್ಲಿ ಕೋಸ್ಟಲ್‌ ಬರ್ತ್‌ ನಿರ್ಮಾಣ, ನದಿಗಳಲ್ಲಿ ಆಯ್ದಕಡೆ ಬೋಟ್‌ಹೌಸ್‌ಗಳು, ಸರಕಾರಿ ಆಸ್ಪತ್ರೆಗಳನ್ನು ಸೂಪರ್‌ಸ್ಪೆಷಾಲಿಟಿ ಆಗಿ ಉನ್ನತೀಕರಣ, ಮಂಗಳೂರು ಸಹಿತ ರಾಜ್ಯದ ಕೆಲವು ಕಡೆ ಡಿಜಿಟಲ್‌ ಸ್ತನರೇಖನ (ಮ್ಯಾಮೋಗ್ರಾಮ್‌) ಹಾಗೂ ಪಾಪ್ಸ್‌ಮಿಯರ್‌ ಸ್ಕ್ಯಾನಿಂಗ್‌, ಕೊಣಾಜೆ – ಮಣಿಪಾಲ ನಾಲೆಡ್ಜ್-ಹೆಲ್ತ್‌ ಕಾರಿಡಾರ್‌, ಕೊಣಾಜೆ -ಮಣಿಪಾಲ ನಾಲೆಡ್ಜ್-ಹೆಲ್ತ್‌ ಕಾರಿಡಾರ್‌ ಯೋಜನೆ ಬಗ್ಗೆಯೂ ಉಲ್ಲೇಖವಿಲ್ಲ.

ಹಳಿಯೇರದ ಮೆಟ್ರೋ, ಮೋನೋ ರೈಲು!
2018ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಬಜೆಟ್‌ನಲ್ಲಿ ಘೋಷಿಸಿದ್ದ ಬೆಂಗಳೂರು ಮಾದರಿಯಲ್ಲಿ ಮೆಟ್ರೋ ವ್ಯವಸ್ಥೆ ಅನುಷ್ಠಾನದ ಬಗ್ಗೆ ಪೂರ್ವಕಾರ್ಯಸಾಧ್ಯತೆ ವರದಿ ತಯಾರಿಸುವ ಬಗ್ಗೆ ಪ್ರಕಟಿಸಲಾಗಿತ್ತು. ಆದರೆ ಈ ಯೋಜನೆಯ ಬಗ್ಗೆ ಈ ಬಜೆಟ್‌ನಲ್ಲಿ ಉಲ್ಲೇಖವನ್ನೇ ಮಾಡಿಲ್ಲ. ಹೀಗಾಗಿ ನಗರಕ್ಕೆ ಮೆಟ್ರೋ ಕನಸು ಸದ್ಯ ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿಲ್ಲ. ಜತೆಗೆ, 2008ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿಯೇ ಬಜೆಟ್‌ನಲ್ಲಿ ಘೋಷಿಸಿದ್ದ ಮೋನೋ ರೈಲು ಪ್ರಸ್ತಾವನೆಯೂ ಈಗ ಹಳ್ಳಸೇರಿದೆ.

ನೇತ್ರಾವತಿ-ಗುರುಪುರ: ಜಲಸಾರಿಗೆ ಮಾರ್ಗ
ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಸಾಗರ, ಹಿನ್ನೀರು ಪ್ರವಾಸೋದ್ಯಮ, ಧಾರ್ಮಿಕ, ಹೆಲ್ತ್‌ ಟೂರಿಸಂನಲ್ಲೂ ಅವಕಾಶವಿದೆ. ಆದರೆ ಇದರ ಬಗ್ಗೆ ಹೆಚ್ಚು ಗಮನ ನೀಡಿಲ್ಲ. ಈ ಹಿಂದೆ ಘೋಷಣೆಯಾಗಿದ್ದ ಜಲಸಾರಿಗೆ ಮಾರ್ಗದ ಬಗ್ಗೆ ಮಾತ್ರ ಬಜೆಟ್‌ನಲ್ಲಿ ಉಲ್ಲೇಖೀಸಲಾಗಿದೆ. ಕೇಂದ್ರ ಸರಕಾರದ ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯದ ಜಲಸಾರಿಗೆ ನದಿಗಳಾದ ಗುರುಪುರ, ನೇತ್ರಾವತಿ ಜಲಸಾರಿಗೆ ಮಾರ್ಗಗಳನ್ನು, ದ್ವೀಪಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ಉಲ್ಲೇಖೀಸಲಾಗಿದೆ.

ಮಂಗಳೂರಿನಲ್ಲಿ ಉತ್ಕೃಷ್ಟತ ಕೇಂದ್ರ
ಮಂಗಳೂರು ಸಹಿತ ಹಲವೆಡೆ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳಲ್ಲಿ 353 ಕೋ.ರೂ. ವೆಚ್ಚದಲ್ಲಿ ಉತ್ಕೃಷ್ಟತ ಕೇಂದ್ರ ಸ್ಥಾಪಿಸಲಾಗುವುದು. ಇದರಿಂದ ಕೈಗಾರಿಕಾ ಉದ್ಯಮ ಕ್ಷೇತ್ರಗಳ ಉನ್ನತ ಮಟ್ಟದ ಡೊಮೈನ್‌ಗಳಲ್ಲಿ ಕೌಶಲ ತರಬೇತಿ ನೀಡುವುದರ ಮೂಲಕ ರಾಜ್ಯದ ಯುವಜನತೆಗೆ ಉದ್ಯೋಗವಕಾಶ ಹೆಚ್ಚಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ 12,600 ವಿದ್ಯಾರ್ಥಿಗಳಿಗೆ ಉದ್ಯೋಗ ನಿಯುಕ್ತಿಗೊಳಿಸುವ ಗುರಿ ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next