Advertisement

ನೂತನ ಲೋಕಾಯುಕ್ತರ “ದರ್ಬಾರ್‌’ಶುರು

03:45 AM Feb 01, 2017 | Harsha Rao |

ಬೆಂಗಳೂರು: ನಾಯಕನಿಲ್ಲದೆ ವರ್ಷದಿಂದ ಸೊರಗಿ ಹೋಗಿದ್ದ ಲೋಕಾಯುಕ್ತಕ್ಕೆ ನ್ಯಾ. ವಿಶ್ವನಾಥ ಶೆಟ್ಟಿ ಅವರು ನೂತನ ಲೋಕಾಯುಕ್ತರಾಗಿ ಆಗಮನವಾಗುತ್ತಿದ್ದಂತೆ ಸಂಸ್ಥೆ ಆಡಳಿತ ಯಂತ್ರ ಚುರುಕುಗೊಂಡಿದೆ.

Advertisement

 ಅಧಿಕಾರ ವಹಿಸಿಕೊಂಡ ಎರಡೇ ದಿನದಲ್ಲಿ ಲೋಕಾಯುಕ್ತರು ಕೂಡ ಪ್ರತಿ ವಿಭಾಗದ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ ಸಂಸ್ಥೆ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇನ್ನೊಂದೆಡೆ, ಸಾರ್ವಜನಿಕರು ಕೂಡ ದೂರು ಹಿಡಿದು ಲೋಕಾಯುಕ್ತರ ಭೇಟಿಗೆ ಆಗಮಿಸುತ್ತಿದ್ದಾರೆ. ಆ ಮೂಲಕ ನೂತನ ಲೋಕಾಯುಕ್ತರ “ದರ್ಬಾರ್‌’
ಶುರುವಾಗಿದೆ.

ನೂತನ ಲೋಕಾಯುಕ್ತರಾಗಿ ನ್ಯಾ. ವಿಶ್ವನಾಥ ಶೆಟ್ಟಿ ಅಧಿಕಾರ ವಹಿಸಿಕೊಂಡು ಎರಡು ದಿನ ಕಳೆದಿದೆ. ಈ ಹಿನ್ನೆಲೆಯಲ್ಲಿ
ಅವರು ತಮ್ಮ ಮುಂದಿನ ಕಾರ್ಯ ಯೋಜನೆ ಹಾಗೂ ಲೋಕಾಯುಕ್ತ ಸಂಸ್ಥೆಯಲ್ಲಿನ ಆಡಳಿತ ವ್ಯವಸ್ಥೆಯಲ್ಲಿ
ತರಬೇಕಾಗಿರುವ ಸುಧಾರಣೆ ಬಗ್ಗೆ “ಉದಯವಾಣಿ’ಯೊಂದಿಗೆ ಹೀಗೆ ಮಾತನಾಡಿದ್ದಾರೆ:
“ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆಯೋ, ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಆದರೆ, ಭ್ರಷ್ಟಾಚಾರವನ್ನು ನಿಗ್ರಹಿಸಲು ಸ್ಥಾಪನೆಗೊಂಡಿರುವ ಈ ಸಂಸ್ಥೆಯಲ್ಲೇ ಭ್ರಷ್ಟ್ರಾಚಾರ ನಡೆಯುತ್ತದೆ ಎಂದಾದರೆ ಅದನ್ನು ನಾನು ಎಂದಿಗೂ ಸಹಿಸುವುದಿಲ್ಲ. ಈ ಬಗ್ಗೆ ಎಲ್ಲ ಸಿಬ್ಬಂದಿ ವಲಯಕ್ಕೂ ಈಗಾಗಲೇ ಖಡಕ್‌ ಎಚ್ಚರಿಕೆ ಕೊಟ್ಟಿದ್ದೇನೆ. ಒಂದುವೇಳೆ, ಅಂತಹ ಸಿಬ್ಬಂದಿ ಬಗ್ಗೆ ಮಾಹಿತಿ ಲಭ್ಯವಾದರೆ, ಎಷ್ಟೇ ಪ್ರಬಲರಾಗಿದ್ದರೂ ಸುಮ್ಮನೆ ಬಿಡುವುದಿಲ್ಲ.’

“ಲೋಕಾಯುಕ್ತ ಸಂಸ್ಥೆಗೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಸ್ಥಾಪನೆಯಾಗಿರುವ ಬಗ್ಗೆ ಈಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಏಕೆಂದರೆ, ಈ ಕುರಿತ ಪ್ರಕರಣ ಈಗ ನ್ಯಾಯಾಲಯದಲ್ಲಿರುವುದರಿಂದ ಎಸಿಬಿ
ಬಗ್ಗೆ ಮಾತನಾಡುವುದು ಸರಿಯಲ್ಲ. ಅದರೆ, ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಎಸಿಬಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅಗತ್ಯ ಬಂದರೆ, ನಮ್ಮ ಕೆಲಸ-ಕಾರ್ಯಕ್ಕೂ ಎಸಿಬಿ ನೆರವು ಪಡೆಯಲಾಗುವುದು.’

“ಈ ಹಿಂದೆ ಹಲವು ವರ್ಷ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದೇನೆ. ಆದರೆ, ಆ ಹುದ್ದೆಗೆ ಹೋಲಿಸಿದರೆ, ಈಗ ಲೋಕಾಯುಕ್ತನಾಗಿ ನೇಮಕಗೊಂಡಿರುವುದು ಹೆಚ್ಚು ಸಂತಸ ತಂದಿದೆ. ಏಕೆಂದರೆ, ಬಹಳ ಹತ್ತಿರದಿಂದ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಜನಸೇವೆ ಮಾಡಲು ಇದೊಂದು ಸುವರ್ಣಾವಕಾಶ. ಆ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದೇ ನನ್ನ ಮುಖ್ಯ ಗುರಿ.

Advertisement

ಶೀರ್ಘ‌ದಲ್ಲೇ ಎಲ್ಲ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು, ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಮಟ್ಟದ ಲೋಕಾಯುಕ್ತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲು ಉದ್ದೇಶಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next