Advertisement
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ ಬೆಂಗಳೂರಿನವರು, ಜೆಡಿಎಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಪಪ್ಪಿ ಚಳ್ಳಕೆರೆಯವರು. ಈ ಹಿನ್ನೆಲೆಯಲ್ಲಿ ಸ್ಥಳೀಯರಾದ ತಿಪ್ಪಾರೆಡ್ಡಿ ಅವರು ಸ್ಥಳೀಯರಿಗೆ ಮತ ನೀಡಿ, ಹೊರಗಿನವರನ್ನು ಕಾಣಬೇಕಾದರೆ ಬೆಂಗಳೂರು, ಗೋವಾಕ್ಕೆ ಹುಡುಕಿಕೊಂಡು ಹೋಗಬೇಕಾಗುತ್ತದೆ ಎಂಬುದಾಗಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ನೆರೆಯ ವಿಧಾನಸಭಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಲಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.
Related Articles
Advertisement
ಹೊರಗಿನವರು: ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಳೀಯರು ಮತ್ತು ಹೊರಗಿನವರು ಎನ್ನುವ ಚರ್ಚೆ ಹೆಚ್ಚಾಗಿ ಕೇಳಿ ಬರುತ್ತಿರುವುದು ಚಿತ್ರದುರ್ಗ, ಮೊಳಕಾಲ್ಮೂರು, ಹಿರಿಯೂರು, ಚಳ್ಳಕೆರೆ ವಿಧಾನಸಭಾ ಕ್ಷೇತ್ರಗಳಲ್ಲಾದರೂ ಹೊಳಲ್ಕೆರೆ ಮತ್ತು ಹೊಸದುರ್ಗದಲ್ಲೂ ಸ್ಥಳೀಯರು, ಹೊರಗಿನವರು ಎನ್ನುವ ಕಿಡಿಯಾಡುತ್ತಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸ್ಥಳೀಯರು. ನಿರಂತರವಾಗಿ ಐದು ಸಲ ಆಯ್ಕೆಯಾಗಿರುವ ಅವರು ಏಕೆ ಸ್ಥಳೀಯರು, ಹೊರಗಿನವರು ಎನ್ನುವ ಪ್ರಶ್ನೆ ಎತ್ತಿದರೋ ಗೊತ್ತಿಲ್ಲ. ಆದರೆ, ಜಿಲ್ಲೆಯ ಬಹುತೇಕ ಕ್ಷೇತ್ರಗಳಿಗೆ ಬಿಜೆಪಿ ಪಕ್ಷವೇ ಹೊರಗಿನವರಿಗೆ ಮಣೆ ಹಾಕಿದೆ.
ಮೊಳಕಾಲ್ಮೂರು ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಬಳ್ಳಾರಿ ಸಂಸದ ಬಿ. ರಾಮುಲು, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಕ್ಕೆ ಚಿತ್ರದುರ್ಗ ನಿವಾಸಿ ಎಂ.ಚಂದ್ರಪ್ಪ, ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಬೆಂಗಳೂರಿನ ಬಿಬಿಎಂಪಿ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್, ಹೊಸದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಗೂಳಿಹಟ್ಟಿಯ ವಡ್ಡರಹಟ್ಟಿ ಆದರೂ ಅವರು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಉಳಿದ ಚಳ್ಳಕೆರೆ ಮತ್ತು ಚಿತ್ರದುರ್ಗ ಕ್ಷೇತ್ರಗಳಿಗೆ ಬಿಜೆಪಿ ಸ್ಥಳೀಯವಾಗಿ ಟಿಕೆಟ್ ನೀಡಿದೆ.
ಕಾಂಗ್ರೆಸ್ ಪಕ್ಷವು ಕೂಡ ಹೊರಗಿನವರಿಗೆ ಟಿಕೆಟ್ ನೀಡಲು ಹಿಂದೆ ಬಿದ್ದಿಲ್ಲ. ಹೊಸದುರ್ಗ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್ ಸ್ಥಳೀಯರಿಗೆ ಟಿಕೆಟ್ ನೀಡಿದರೆ, ಚಿತ್ರದುರ್ಗ ಕ್ಷೇತ್ರಕ್ಕೆ ಬೆಂಗಳೂರು ನಿವಾಸಿ ಹನುಮಲಿ ಷಣ್ಮುಖಪ್ಪ, ಹೊಳಲ್ಕೆರೆ ಕ್ಷೇತ್ರಕ್ಕೆ ಎಚ್. ಆಂಜನೇಯ (ಮೂಲ ದಾವಣಗೆರೆ ನಗರ), ಹಿರಿಯೂರು ಕ್ಷೇತ್ರಕ್ಕೆ ಚಳ್ಳಕೆರೆ ನಿವಾಸಿ ಡಿ. ಸುಧಾಕರ್ ಸೇರಿ ಒಟ್ಟು ಮೂರು ಕ್ಷೇತ್ರಗಳಿಗೆ ಸ್ಥಳೀಯರಿಗೆ ಮತ್ತು ಮೂರು ಕ್ಷೇತ್ರಗಳಿಗೆ ಹೊರಗಿನವರಿಗೆ ಟಿಕೆಟ್ ನೀಡಿದೆ.
ಜೆಡಿಎಸ್ ಪಕ್ಷವು ಮೂರು ಸ್ಪರ್ಧಿಗಳಿಗೆ ಸ್ಥಳೀಯರಿಗೆ ಟಿಕೆಟ್ ನೀಡಿದರೆ ಚಿತ್ರದುರ್ಗ, ಚಳ್ಳಕೆರೆ ಮತ್ತು ಹೊಸದುರ್ಗ ಕ್ಷೇತ್ರಗಳಿಗೆ ಹೊರಗಿನವರಿಗೆ ಟಿಕೆಟ್ ನೀಡಿದೆ. ಚಳ್ಳಕೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ದೇವನಹಳ್ಳಿ, ಚಿತ್ರದುರ್ಗ ಕ್ಷೇತ್ರಕ್ಕೆ ಚಳ್ಳಕೆರೆ ನಿವಾಸಿ ವೀರೇಂದ್ರ ಪಪ್ಪಿ, ಹೊಸದುರ್ಗ ಕ್ಷೇತ್ರಕ್ಕೆ ಬೆಂಗಳೂರು ನಿವಾಸಿ ಚಿತ್ರ ನಟ ಶಶಿಕುಮಾರ್ ಅವರಿಗೆ ಟಿಕೆಟ್ ನೀಡಿದೆ. ಸ್ಥಳೀಯರಾದ ಹಿರಿಯೂರು ಡಿ. ಯಶೋಧರ, ಮೊಳಕಾಲ್ಮೂರು ಎತ್ತಿನಹಟ್ಟಿ ಗೌಡ, ಹೊಳಲ್ಕೆರೆ ಗದ್ದಿಗೆ ಶ್ರೀನಿವಾಸ್ ಅವರಿಗೂ ಟಿಕೆಟ್ ನೀಡಿದೆ.
ಮೂರು ಪಕ್ಷಗಳು ಹೊರಗಿನವರಿಗೆ ಟಿಕೆಟ್ ನೀಡಿರುವುದರಿಂದ ಸ್ಥಳೀಯರು ಮತ್ತು ಹೊರಗಿನವರು ಎನ್ನುವುದು ಅಪ್ರಸ್ತುತವಾಗಿದೆ. ರಾಜಕೀಯ ಪಕ್ಷಗಳು ಓಟಿಗಾಗಿ ಬೇಟೆಯಾಡಲು ಹೊರಗಿನವರ ಬೆನ್ನ ಬಿದ್ದು ಟಿಕೆಟ್ ನೀಡಿವೆ ಎನ್ನುವುದು ಅಷ್ಟೇ ಕಠೊರ ಸತ್ಯ.
ಹರಿಯಬ್ಬೆ ಹೆಂಜಾರಪ್ಪ