ಯಾದಗಿರಿ: ನಾವು ಮಣ್ಣಿನ ಮಕ್ಕಳೆಂದು ಹೇಳಿಕೊಂಡವರು ಇದೀಗ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿ ಜಿಂದಾಲ್ಗೆ ಭೂಮಿ ನೀಡುವ ಮೂಲಕ ರೈತರ ಬಾಯಿಗೆ ಮಣ್ಣು ಹಾಕುವ ಕೆಲಸ ಮಾಡುತ್ತಿದ್ದಾರೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು.
ನಗರದ ರೈತ ಸಂಘದ ಜಿಲ್ಲಾ ಕಾರ್ಯಾಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪಾಯಕಾರಿ ಕಾನೂನು ರೈತರ ಕೊರಳಿಗೆ ಹಾಕಿ ಗ್ರಾಮ ವಾಸ್ತವ್ಯ ಮಾಡಿ ಏನು ಸಂದೇಶ ನೀಡಲು ಹೊರಟಿದ್ದೀರಿ ಎಂದು ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದರು.
ಸರ್ಕಾರ ಅಧಿಕಾರಿಕ್ಕೆ ಬಂದು ವರ್ಷ ಕಳೆದಿದ್ದು, ಅಧಿಕಾರಕ್ಕೆ ಬಂದ ಕೂಡಲೇರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದ ಕುಮಾಸ್ವಾಮಿ ಅವರು, 18 ಸಾವಿರ ಕೋಟಿ ಸಾಲಮನ್ನಾ ಮಾಡಿ ಮಾತನ್ನು ಮುಕ್ತಾಯಗೊಳಿಸಿದ್ದಾರೆ. ರಾಜ್ಯದಲ್ಲಿ 1.20 ಲಕ್ಷ ಕೋಟಿ ರೂಪಾಯಿ ರೈತರ ಸಾಲವಿದೆ ಎಂದರು.
2018ರಲ್ಲಿ 27 ಸಾವಿರ ಹೆಕ್ಟೇರ್ ಅತಿವೃಷ್ಟಿಯಿಂದ ಹಾನಿಯಾಗಿದ್ದು, ಮುಂಗಾರಿನಲ್ಲಿ ಬರದಿಂದ 27.32 ಲಕ್ಷ ಹೆಕ್ಟೇರ್ ಬಿತ್ತನೆಯಾಗಿಲ್ಲ, ಹಿಂಗಾರಿನಲ್ಲಿ 20.40 ಲಕ್ಷ ಹೆಕ್ಟೇರ್ ಬೆಳೆ ತೆಗೆದಿಲ್ಲ ಎಂದರು. ಇದೀಗ ರೈತರು ಸಾಲ ಕಟ್ಟುವ ಪರಿಸ್ಥಿತಿಯಲ್ಲಿಲ್ಲ, ಬ್ಯಾಂಕ್‌ನಿಂದ ರೈತರಿಗೆ ತಗಾದೆ ಶುರುವಾಗಿದ್ದು, ನೋಟಿಸ್, ವಾರಂಟಗಳು ಬರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬರಗಾಲದ ಸಂದರ್ಭದಲ್ಲಿ ಯಾವ ಭರವಸೆಯನ್ನು ರೈತ ಸಮುದಾಯಕ್ಕೆ ನೀಡುವಿರಿ ಎಂದು ಸವಾಲ್ ಎಸೆದ ಅವರು, 46 ಸಾವಿರ ಕೋಟಿ ಸಾಲಮನ್ನಾ ಘೋಷಣೆ ಮಾಡಿದ್ದು ಏನಾಯಿತು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದು. ಜನ ಗುಳೆ ಹೋಗುತ್ತಿದ್ದು, ರಾಜಸ್ಥಾನ ಹೊರತು ಪಡಿಸಿ ರಾಜ್ಯದಲ್ಲಿ ಹೆಚ್ಚಿನ ಬರ ಆವರಿಸಿದೆ. ಶಾಶ್ವತವಾಗಿ ಬರ ನಿರ್ವಹಣೆಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಕೂಡ ಜಿಂದಾಲ್ಗೆ ಜಮೀನು ನೀಡುವುದಕ್ಕೆ ವಿರೋಧಿಸುತ್ತಿದ್ದಾರೆ. ಆದರೇ, ಕಾಯ್ದೆ ಬಗ್ಗೆ ಏಕೆ ಮಾತನಾಡುತ್ತಿಲ್ಲ. ರೈತರ ಕಿವಿಗೆ ಹೂ ಮುಡಿಸುವ ಕೆಲಸ ಮಾಡದಿರಿ ಕಾಯ್ದೆ ಜಾರಿ ವೇಳೆ ಏಕೆ ಗೈರು ಆಗಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿ.ಕೆ. ಶಿವಕುಮಾರ ರೈತರ ಬಗ್ಗೆ ಉದ್ಧಟತನದ ಮಾತು ಅವಿವೇಕತನದ್ದಾಗಿದೆ ಎಂದು ತರಾಟೆಗೆ ತೆಗೆದುಕೊಂಡರು. ಮಾತಿಗೆ ಕಡಿವಾಣ ಇರಲಿ ಎಂದು ಸಲಹೆ ನೀಡಿದ ಅವರು, ರೈತರು ಏನು ತೆರಿಗೆ ಕೊಡುತ್ತಾರೆ ಎನ್ನುವುದು ಮತ್ತೆ ಎಲ್ಲಿಯೂ ಕೇಳಿಬರಬಾರದು ಎಂದು ಎಚ್ಚರಿಸಿ, ಹಿರಿಯರು ಡಿಕಿಶಿಗೆ ಸಲಹೆ ನೀಡಬೇಕು ಎಂದರು. ಈ ವೇಳೆ ರಾಜ್ಯ ಸಂಚಾಲಕ ಸುಭಾಷ ಐಕೂರು ಸೇರಿದಂತೆ ಹಲವರು ಇದ್ದರು.