Advertisement

ಮದ್ಯ ಮಾರಾಟಗಾರರೇಕೆ ಗ್ರಾಹಕರಿಗೆ ಮಾಹಿತಿ ನೀಡುತ್ತಿಲ್ಲ

11:29 AM Apr 16, 2018 | Harsha Rao |

ಮಂಗಳೂರು: ಮನೆಯಲ್ಲಿ ನಡೆಯುವ ಕೌಟುಂಬಿಕ ಸಮಾರಂಭಗಳಲ್ಲಿಯೂ ಮದ್ಯ ವಿತರಣೆಗೆ ಇಲಾಖೆಯ ಅನುಮತಿ ಕಡ್ಡಾಯ ಎಂದಾದರೆ ಈ ಬಗ್ಗೆ ಮದ್ಯ ಖರೀದಿಸುವಾಗ ಮಾರಾಟಗಾರರೇಕೆ ಮಾಹಿತಿ ನೀಡುತ್ತಿಲ್ಲ? ಅವರಿಗೂ ಮಾಹಿತಿ ಇಲ್ಲವೇ? ಅವರಿಗೆ ಮಾಹಿತಿ ಇಲ್ಲದಿದ್ದರೆ ಮಾರಾಟ ಮಾಡಲೇ ಬಾರದಲ್ಲವೆ? ಅಧಿಕಾರಿಗಳೇಕೆ ಸಾರ್ವಜನಿಕರಿಗೆ ನೀತಿ ಸಂಹಿತೆ ಕುರಿತು ಸ್ಪಷ್ಟ ಮಾಹಿತಿ ನೀಡುವ ವ್ಯವಸ್ಥೆ ಮಾಡಿಲ್ಲ?
ಇದು ಬಂಟ್ವಾಳ ತಾಲೂಕು ಇರಾ ಗ್ರಾಮದ ಡ್ಯಾನಿಯಲ್‌ ಡಿ’ಸಿಲ್ವಾ ಅವರ ಪ್ರಶ್ನೆ. 

Advertisement

ಶನಿವಾರ ಮಧ್ಯಾಹ್ನ ಡ್ಯಾನಿಯಲ್‌ ಡಿ’ಸಿಲ್ವಾ ಪುತ್ರಿಯ ವಿವಾಹ ನಿಶ್ಚಿತಾರ್ಥ ವೇಳೆ ಅಬಕಾರಿ ಇಲಾಖೆಯ ಬಂಟ್ವಾಳ ಉಪ ಅಧೀಕ್ಷಕರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮದ್ಯ ದಾಸ್ತಾನು ಆರೋಪ ಹೊರಿಸಿ ಡ್ಯಾನಿಯಲ್‌ ಅವರ ಸಹೋದರ ಸ್ಟೀವನ್‌ ಡಿ’ಸಿಲ್ವಾ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಶುಭ ಸಮಾರಂಭ ನಡೆಯುತ್ತಿರುವಾಗಲೇ ನಡೆದ ಈ ದಾಳಿಯಿಂದ ಕುಟುಂಬದವರು ತೀವ್ರವಾಗಿ ನೊಂದಿದ್ದು, ಅಧಿಕಾರಿಗಳ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಕ್ತ ಮಾಹಿತಿ ಕೊರತೆಯಿಂದಾಗಿ ತಾವೂ ಎಡವಟ್ಟು ಮಾಡಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. 

ಸುಮಾರು 11.30ರ ವೇಳೆಗೆ ನಿಶ್ಚಿತಾರ್ಥ ಆರಂಭಿಸಬೇಕೆನ್ನುವಷ್ಟರಲ್ಲಿ ಮಫ್ತಿಯಲ್ಲಿ ಬಂದ ಇಬ್ಬರು ಫ್ರಿಜ್‌ ಪರಿಶೀಲಿಸಿದರು. ಫೋಟೋ ತೆಗೆದರು. ಟಾಯ್ಲೆಟ್‌ಗೆ ಹೋಗಿ ಶೋಧಿಸಿದರು. ಮನೆಯೊಳಗೆ ಹುಡುಕಾಡಿದರು. ಮದ್ಯ ಇರುವುದನ್ನು ಖಾತರಿ ಪಡಿಸಿಕೊಂಡು ಇನ್ನಷ್ಟು ಸಿಬಂದಿಯನ್ನು° ಕರೆಸಿಕೊಂಡರು. ಮದ್ಯ ದಾಸ್ತಾನು ಅಕ್ರಮ ಎಂದು ಹೇಳಿ ವಶಕ್ಕೆ ಪಡೆದರು. ಬಳಿಕ ಸ್ಟೀವನ್‌ ಅವರನ್ನು ವಶಕ್ಕೆ ಪಡೆದು ಬಂಧಿಸಿದರು ಎಂದು ಡ್ಯಾನಿಯಲ್‌ ವಿವರಿಸಿದ್ದಾರೆ.

ಸಮಾರಂಭದಲ್ಲಿ ಮದ್ಯ ವಿತರಿಸುವುದಿಲ್ಲ. ಇಲಾಖೆಯ ಇಬ್ಬರು ಸಿಬಂದಿ ಇಲ್ಲಿಯೇ ಇದ್ದು ಗಮನಿಸಲಿ. ಸಮಾರಂಭ ಮುಗಿಯಲಿ, ಇದು ಓರ್ವ ಹೆಣ್ಣುಮಗಳ ಭವಿಷ್ಯದ ಪ್ರಶ್ನೆ ಎಂದು ಮನವಿ ಮಾಡಿದೆವು. ಆದರೆ ಅವರು ಮನ್ನಿಸಲಿಲ್ಲ

– ಇದು ಡ್ಯಾನಿಯಲ್‌ ಅವರ ನೊಂದ ನುಡಿ.

Advertisement

ಮಾಹಿತಿ ಬೇಕಾದರೆ ಆನ್‌ಲೈನ್‌ ನೋಡಿ ಇಂತಹ ಕಟ್ಟುನಿಟ್ಟಿನ ನಿಯಮಗಳ ಬಗ್ಗೆ ನಮಗೆ ತಿಳಿವಳಿಕೆ ಇಲ್ಲ ಎಂದು ಹೇಳಿದಾಗ “ಆನ್‌ಲೈನ್‌ ನಲ್ಲಿ ನೋಡಿ, ಅಲ್ಲಿ ವಿವರವಾಗಿ ಇದೆ’ ಎಂದರು. ಹಳ್ಳಿಗಳಲ್ಲಿ ಆನ್‌ಲೈನ್‌ ಮಾಹಿತಿ ಯಾರು ನೋಡುತ್ತಾರೆ ಸ್ವಾಮಿ? ನೀತಿ ಸಂಹಿತೆ ಬಗ್ಗೆ ಸ್ಥಳೀಯ ಗ್ರಾ.ಪಂ. ಅಧ್ಯಕ್ಷರಿಗೂ ಮಾಹಿತಿ ಇಲ್ಲ; ಅವರಿಗೂ ಮಾಹಿತಿ ನೀಡುವ ಕೆಲಸವನ್ನು ಮಾಡಿಲ್ಲವೇಕೆ? ಇದು ಡ್ಯಾನಿಯಲ್‌ ಅವರ ಪ್ರಶ್ನೆ. 

ನಾವು ಮದ್ಯವನ್ನು ಕದ್ದು ತಂದಿಲ್ಲ ಅಥವಾ ಮಾರಾಟ ಮಾಡಲು ತಂದದ್ದಲ್ಲ. ಪರವಾನಿಗೆ ಬೇಕಿದ್ದರೆ ಪಡೆಯುತ್ತಿದ್ದೆವು. ಮಾರಾಟ ಮಾಡಿದವರು ಪರವಾನಿಗೆ ಅಗತ್ಯವಿಲ್ಲ ಎಂದದ್ದೇಕೆ ಎಂದು ಡ್ಯಾನಿಯಲ್‌ ಪ್ರಶ್ನಿಸಿದರು.

ತಪ್ಪಾಗಿದೆ, ಕ್ಷಮಿಸಿ ಎಂದರೂ ಕೇಳಲಿಲ್ಲ ಯಾವುದೇ ಅವ್ಯವಹಾರ, ಅನ್ಯಾಯ ಎಸಗಿಲ್ಲ. ನಮ್ಮಿಂದ ತಪ್ಪಾಗಿದೆ, ಕ್ಷಮಿಸಿ ಎಂದು ವಿನಂತಿಸಿದರೂ ಕೇಳಲಿಲ್ಲ. ಅಧಿಕಾರಿಗಳ ನಡವಳಿಕೆಯಿಂದ ನಮಗೆ ಅವಮಾನವಾಗಿದೆ. ನಮ್ಮ ಸಮಾರಂಭಕ್ಕೆ ಕಪ್ಪು ಚುಕ್ಕೆ ಬರುವಂತೆ ಮಾಡಿದ್ದಾರೆ. ಮಾನಸಿಕ ಹಿಂಸೆಯಾಗಿದೆ, ಯಾರಿಗೂ ಹೀಗಾಗಬಾರದು ಎಂದು ಡ್ಯಾನಿಯಲ್‌ ಕುಟುಂಬದ ಸದಸ್ಯೆ ಲೀನಾ ಡಿ’ಸೋಜಾ ತಿಳಿಸಿದರು.

ನ್ಯಾಯಾಲಯಕ್ಕೆ ಎರಡು ದಿನ ರಜೆ ಶನಿವಾರ (ಎ. 14) ಅಂಬೇಡ್ಕರ್‌ ಜಯಂತಿ ಪ್ರಯುಕ್ತ ನ್ಯಾಯಾಲಯಕ್ಕೆ ರಜೆ, ರವಿವಾರ ರಜೆ. ಹಾಗಾಗಿ ಅಬಕಾರಿ ಕಾಯ್ದೆಯಡಿ ಬಂಧಿತರಾದ ಸ್ಟೀವನ್‌ ಡಿ’ಸಿಲ್ವಾ ಅವರಿಗೆ ಜಾಮೀನು ಪಡೆಯಲು ಈ ಎರಡೂ ದಿನ ಸಾಧ್ಯವಾಗದೆ ಜೈಲು ಅನಿವಾರ್ಯವಾಗಿತ್ತು. ಸೋಮವಾರ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಕುಟುಂಬದವರು ನಿರ್ಧರಿಸಿದ್ದಾರೆ. 

ವೈರಲ್‌ ಆದ ವೀಡಿಯೋ
ನಿಶ್ಚಿತಾರ್ಥ ನಡೆಯುತ್ತಿದ್ದಾಗ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಮನೆಯೊಡೆಯ ಸ್ಟೀವನ್‌ ಅವರನ್ನು ಜೈಲಿಗೆ ಕಳುಹಿಸಿರುವ ಘಟನೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿರುವ ವಿಚಾರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next