Advertisement

ದ ಲೈನ್‌ ಸೌದಿ ಅರೇಬಿಯಾದ ಕನಸಿನ ನಗರ

12:18 AM Jul 31, 2022 | Team Udayavani |

ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅಧಿಕಾರಕ್ಕೇರಿದ ಬಳಿಕ ಸೌದಿ ಅರೇಬಿಯಾದ ಸ್ವರೂಪ, ಜನಜೀವನ ಶೈಲಿ ಬದಲಾಗುತ್ತಿದೆ. ಅದೀಗ ತೀರಾ ಸಾಂಪ್ರದಾಯಿಕತೆಯಿಂದ ಅಭಿವೃದ್ಧಿ ಪಥದತ್ತ ಹೊರಳುತ್ತಿದೆ. 1957ರಿಂದ 2018ರ ವರೆಗೆ ಅಲ್ಲಿ ಮಹಿಳೆಯರಿಗೆ ನಿಷೇಧಿ ಸಲಾಗಿದ್ದ ವಾಹನ ಚಾಲನೆಗೀಗ ಅವಕಾಶ ಸಿಕ್ಕಿದೆ. ಆ ಮೂಲಕ ಸ್ವಾತಂತ್ರ್ಯದ ಗಾಳಿಗೆ ಕಿಟಕಿ ತೆರೆದಂತಾಗಿದೆ.

Advertisement

ದೇಶವನ್ನು ಜಗತ್ತೇ ತಿರುಗಿ ನೋಡುವಂತೆ ಮಾಡಬೇಕು ಎಂಬ ಮಹದಾಸೆ ಸಲ್ಮಾನ್‌ ಅವರದ್ದು. ಅದಕ್ಕಾಗಿಯೇ Neom (ಇದು ತಾಜುಕ್‌ ಪ್ರಾಂತ್ಯದಲ್ಲಿ ನಿರ್ಮಾಣವಾಗುತ್ತಿರುವ ಒಂದು ಆಧುನಿಕ ನಗರ) ಎಂಬ ಒಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಿದ್ದಾರೆ. ದೇಶದ ಅಭಿವೃದ್ಧಿಯನ್ನು ಆಕರ್ಷಕ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ಅವರದ್ದು. ಇದರಲ್ಲಿರುವ M ಅಕ್ಷರವು ದೊರೆಯ ಹೆಸರಿನ ಮೊದಲಕ್ಷರವೂ ಆಗಿದೆ, ಅರೆಬಿಕ್‌ನ ಭವಿಷ್ಯ ಎಂಬ ಅರ್ಥದ ಮುಷ್ತಾಕ್‌ಬಲ್‌ ಶಬ್ದದ ಮೊದಲಕ್ಷರವೂ ಆಗಿದೆ.

ಈ ಯೋಜನೆಯ ಒಂದು ಭಾಗವಾಗಿ The Line ಹೆಸರಿನ ಒಂದು ಆಕರ್ಷಕ ಹಾಗೂ ಪರಿಸರಸ್ನೇಹಿ ನಗರ ತಲೆ ಎತ್ತಲಿದೆ. ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನವನ್ನು ಆಧರಿಸಿದ ನಗರವಿದು. ಇಲ್ಲಿ ಪಾದಚಾರಿ ಮಾರ್ಗ ಮಾತ್ರ ಇರಲಿದೆ. ವಾಹನ ಗಳಿಗೆ ಅವಕಾಶ ಇಲ್ಲ. ಶುದ್ಧ ಗಾಳಿಗೆ ಕೊರತೆ ಇಲ್ಲ. ಇಲ್ಲಿ 3.80 ಲಕ್ಷ ಮಂದಿಗೆ ಉದ್ಯೋಗವೂ ಸೃಷ್ಟಿಯಾಗಲಿದೆ ಎಂಬುದು ಲೆಕ್ಕಾಚಾರ.

ಈ ನಗರವು 170 ಕಿ.ಮೀ. ಉದ್ದ ಇರಲಿದ್ದು, ಸದ್ಯದ ಅಂದಾಜಿನ ಪ್ರಕಾರ ಇಲ್ಲಿ 9 ಮಿಲಿಯನ್‌ ಜನರು ಇರಬಹುದಾದ ನಗರವೆನ್ನಲಾಗಿದೆ.

2021ರ ಜ. 10ರಂದು ಯೋಜನೆಗೆ ಚಾಲನೆ ನೀಡಲಾಗಿದ್ದು, ಅಕ್ಟೋಬರ್‌ನಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಮೊದಲ ಹಂತದ ಕಾಮಗಾರಿಯನ್ನು 2030ರಲ್ಲಿ ಪೂರ್ತಿಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ. ಇದರಲ್ಲಿ ಅತಿ ಉದ್ದದ 500 ಮೀಟರ್‌ ಎತ್ತರದ ಎರಡು ಗಾಜಿನ ಕಟ್ಟಡಗಳಿದ್ದು, ಅವುಗಳ ಮಧ್ಯೆ 200 ಮೀಟರ್‌ ಅಗಲದ ಪಾದಚಾರಿ ಮಾರ್ಗ ಇರಲಿದೆ. ಇಲ್ಲಿನ ನಿವಾಸಿಗಳ ದಿನಬಳಕೆಯ ಎಲ್ಲ ವಸ್ತುಗಳು 5 ನಿಮಿಷಗಳ ನಡಿಗೆ ದೂರದ ಅಂತರದೊಳಗೆ ಸಿಗಲಿದೆ.

Advertisement

ಭೂಗತವಾಗಿ ಮೂಲಸೌಲಭ್ಯಕ್ಕೊಂದು ಹಾಗೂ ಸಾರಿಗೆ ಉದ್ದೇಶಕೆಕ ಮಾರ್ಗವೊಂದನ್ನು ನಿರ್ಮಿಸಲಾಗುತ್ತಿದೆ. ಕೃತಕ ಬುದ್ಧಿಮತ್ತೆ ವ್ಯವಸ್ಥೆ ಮೂಲಕ ಇಡೀ ನಗರದ ಮೇಲೆ ನಿಗಾ ಇರಿಸಲಾಗುವುದು. ಇದು ವಾಣಿಜ್ಯ ಹಾಗೂ ವಸತಿ ನಗರ ಆಗಿರಲಿದೆ.

ಕನಿಷ್ಠ ಭೂಮಿಯನ್ನು ಬಳಸಿ ಗರಿಷ್ಠ ಮಂದಿಗೆ ನೈಸರ್ಗಿಕವಾದಂಥ ನೈಜ ಪರಿಸರದಲ್ಲಿ ವಸತಿ ಅವಕಾಶ ಕಲ್ಪಿಸಬೇಕೆನ್ನುವುದು ಇದರ ಒಟ್ಟೂ ಉದ್ದೇಶ.

Advertisement

Udayavani is now on Telegram. Click here to join our channel and stay updated with the latest news.

Next