Advertisement

ಇನ್ನೂ ಸಿಗದ ಬೆಳಕು! ಸಾವಿರಾರು ಮನೆ ವಂಚಿತ; ಅವಧಿ ವಿಸ್ತರಣೆಗೆ ಬೇಡಿಕೆ

10:29 AM Jan 12, 2022 | Team Udayavani |

ಕೋಟ: ರಾಜ್ಯದಲ್ಲಿ ವಿದ್ಯುತ್‌ ಸಂಪರ್ಕರಹಿತ ಮನೆಗಳ ಮಾಹಿತಿ ಸಂಗ್ರಹಿಸಿ ಆದ್ಯತೆಯ ಮೇರೆಗೆ ಸಂಪರ್ಕ ಕಲ್ಪಿಸುವ “ಬೆಳಕು’ ಯೋಜನೆಯ ಅವಧಿ ಮುಗಿದಿದೆ. ಆದರೆ ಸಾವಿರಾರು ವಿದ್ಯುತ್‌ ರಹಿತ ಕುಟುಂಬಗಳಿದ್ದು, ಇನ್ನೂ ಗುರುತಿಸಲಾಗಿಲ್ಲ. ಯೋಜನೆಯ ಅವಧಿ ವಿಸ್ತರಿಸಿ ಬಡ ಕುಟುಂಬಗಳಿಗೆ ನೆರವಾಗಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.

Advertisement

ಸುನಿಲ್‌ ಕುಮಾರ್‌ ಅವರು 2021ರ ಆ. 11ರಂದು ಇಂಧನ ಸಚಿವರಾಗಿ ಅಧಿಕಾರ ವಹಿಸಿಕೊಂಡ ತತ್‌ಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ವಿದ್ಯುತ್‌ ಸಂಪರ್ಕ ವಿಲ್ಲದ ಮನೆಗಳ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದರು. ಈ ಹಿಂದೆ ಜಾರಿಯಲ್ಲಿದ್ದ ದೀನ ದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಮತ್ತು ಸೌಭಾಗ್ಯ ಯೋಜನೆಯ ಅವಧಿ ಮುಕ್ತಾಯಗೊಂಡದ್ದರಿಂದ ಹೊಸದಾಗಿ “ಬೆಳಕು’ ಎನ್ನುವ ಯೋಜನೆ ರೂಪಿಸಿದ್ದರು.ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ 100 ದಿನಗಳ ಕಾಲಮಿತಿ ವಿಧಿಸಿದ್ದರು.

1.2 0 ಲಕ್ಷ ಮನೆಗಳಿಗೆ ವಿದ್ಯುತ್‌
ಸುಮಾರು 155.25 ಕೋಟಿ ರೂ. ವೆಚ್ಚದಲ್ಲಿ 1.2 0 ಲಕ್ಷ ಮನೆಗಳಿಗೆ ಈಗಾಗಲೇ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಸ್ಥಳೀಯಾಡಳಿತದ ಮಾಹಿತಿ ಕೊರತೆ, ನಿರ್ಲಕ್ಷ್ಯ ಮುಂತಾದ ಕಾರಣಗಳಿಂದ ಸಾವಿರಾರು ವಿದ್ಯುತ್‌ ರಹಿತ ಕುಟುಂಬಗಳನ್ನು ಗುರುತಿಸದ ಕಾರಣ ಅವರೆಲ್ಲ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ದಾಖಲೆ ರಹಿತರಿಗೆ ಅನುಕೂಲ
ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸುವುದಕ್ಕೆ ಹಿಂದೆ ಸ್ಥಳೀಯಾಡಳಿತದಿಂದ ನಿರಾಕ್ಷೇಪಣ ಪತ್ರ (ಎನ್‌ಒಸಿ) ಕಡ್ಡಾಯವಾಗಿತ್ತು. ಆದರೆ ದಾಖಲೆ ಸಮಸ್ಯೆ ಮುಂತಾದ ಕಾರಣಗಳಿಂದ ಸ್ಥಳೀಯಾಡಳಿತಗಳು ಎನ್‌ಒಸಿ ನೀಡದಿರುವುದರಿಂದ ಹಲವಾರು ಮನೆಗಳಿಗೆ ವಿದ್ಯುತ್‌ ಸಂಪರ್ಕ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಈ ಯೋಜನೆಯಡಿ ಪಡಿತರ ಚೀಟಿ, ಆಧಾರ್‌, ಮತದಾರರ ಗುರುತಿನ ಚೀಟಿ, ಗ್ರಾ.ಪಂ. ಒದಗಿಸುವ ಮಾಹಿತಿ ಪರಿಗಣಿಸಲು ಅವಕಾಶ ಕಲ್ಪಿಸಿದ್ದರಿಂದ ದಾಖಲೆಗಳ ಸಮಸ್ಯೆ ಇರುವವರಿಗೂ ವಿದ್ಯುತ್‌ ಸಂಪರ್ಕ ಪಡೆಯಲು ಅವಕಾಶವಾಗಿದೆ. ಪ್ರಸ್ತುತ ಈ ಯೋಜನೆ ಡಿಸೆಂಬರ್‌ ಮೊದಲ ವಾರದಲ್ಲೇ ಅಂತ್ಯಗೊಂಡಿದೆ.

ಬೆಳಕು ಯೋಜನೆಯನ್ನು ವಿಸ್ತರಿಸುವಂತೆ ಎಲ್ಲ ಶಾಸಕರು, ಜನಪ್ರತಿನಿಧಿಗಳಿಂದ ಬೇಡಿಕೆ ಇದೆ. ಆದರೆ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳಬೇಕಾಗಿರುವುದ ರಿಂದ ದೀರ್ಘ‌ ಕಾಲಾವಕಾಶ ನೀಡಲು ಸಾಧ್ಯವಾಗುತ್ತಿಲ್ಲ. ಸ್ಥಳೀಯಾಡಳಿತಗಳಿಂದ ಇನ್ನೊಮ್ಮೆ ಕೊನೆಯ ಹಂತದ ಪಟ್ಟಿ ಪಡೆದು ವಿದ್ಯುತ್‌ ರಹಿತರಿಗೆ ಸೌಲಭ್ಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಸುನಿಲ್‌ ಕುಮಾರ್‌, ಇಂಧನ ಖಾತೆ ಸಚಿವ

Advertisement

- ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next