Advertisement

ನಿರ್ಜೀವ ಗ್ರೆನೇಡ್‌ ಸೇನೆ ಸೇರಿದ್ದು

01:19 AM Jun 04, 2019 | Lakshmi GovindaRaj |

ಬೆಂಗಳೂರು: ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲು ನಿಲ್ದಾಣದ ಒಂದನೇ ಪ್ಲಾಟ್‌ಫಾರಂ ಬಳಿ ಪತ್ತೆಯಾದ ಗ್ರೆನೇಡ್‌ ಭಾರತೀಯ ಸೇನೆಗೆ ಸೇರಿದ್ದು ಎಂಬ ಅಂಶ ತಿಳಿದುಬಂದಿದ್ದು, ಸೇನಾ ಸಿಬ್ಬಂದಿಗೆ ತರಬೇತಿ ನೀಡಲು ಅದನ್ನು ಬಳಸಲಾಗುತ್ತದೆ ಎಂಬುದು ರೈಲ್ವೆ ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ.

Advertisement

ಈ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈಲ್ವೆ ಪೊಲೀಸ್‌ ವಿಭಾಗದ ವರಿಷ್ಠಾಧಿಕಾರಿ ಭೀಮಾಶಂಕರ್‌ ಎಸ್‌.ಗುಳೇದ್‌, ನಿಲ್ದಾಣದಲ್ಲಿ ಪತ್ತೆಯಾಗಿದ್ದು ಸ್ಫೋಟಕ ವಸ್ತು ಅಲ್ಲ. ಅದು ಭಾರತೀಯ ಸೇನೆ ತನ್ನ ಸಿಬ್ಬಂದಿಗೆ ತರಬೇತಿ ನೀಡಲು ಬಳಸುವ “ನಿಷ್ಕ್ರಿಯ ಗ್ರೆನೇಡ್‌’. ಅದನ್ನು ತಾಂತ್ರಿಕವಾಗಿ “ಸಿಮ್ಯುಲೇಟರ್‌ ಹ್ಯಾಂಡ್‌ ಗ್ರೆನೇಡ್‌’ ಎಂದು ಕರೆಯುತ್ತಾರೆ ಎಂದು ಸ್ಪಷ್ಟಪಡಿಸಿದರು.

ಗ್ರೆನೇಡ್‌ ತುಂಬಿದ್ದ ಬಾಕ್ಸ್‌ನ ಒಂದು ಭಾಗ ಒಡೆದು ಹೋಗಿದ್ದರಿಂದ ಗ್ರೆನೇಡ್‌ ಕೆಳಗೆ ಬಿದ್ದಿದ್ದೆ. ಆದರೆ, ಬಾಕ್ಸ್‌ನ್ನು ರೈಲಿಗೆ ತುಂಬುವಾಗ ಬಿದ್ದಿದ್ದೆಯೇ? ಅಥವಾ ಇಳಿಸುವಾಗ ಬಿದ್ದಿದ್ದೆಯೇ ಎಂಬುದು ತಿಳಿದು ಬಂದಿಲ್ಲ. ತನಿಖಾಧಿಕಾರಿಯೊಬ್ಬರು ಅನುಮಾನಗೊಂಡು ಸೇನಾಧಿಕಾರಿಯನ್ನು ಸಂಪರ್ಕಿಸಿದಾಗ, ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ.

ಹೀಗಾಗಿ ಯಾರಿಂದ ಲೋಪವಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸಂಬಂಧಿಸಿದ ಸೇನಾ ವಿಭಾಗಕ್ಕೆ ಮನವಿ ಮಾಡಲಾಗಿದ್ದು, ಅವರು ವರದಿ ಕೊಟ್ಟ ನಂತರ ತಪ್ಪಿತಸ್ಥ ವ್ಯಕ್ತಿಯ ವಿರುದ್ಧ ಹೆಚ್ಚುವರಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕೈಗೊಳ್ಳಲಾಗುವುದು. ಜತೆಗೆ ಸೇನೆಯಿಂದಲೂ ಆ ವ್ಯಕ್ತಿಯ ವಿರುದ್ಧ ಕ್ರಮ ಜರುಗಲಿದೆ. ಅಲ್ಲದೆ, ಇದು ಭಾರತೀಯ ಸೇನೆಗೆ ಸೇರಿದ ಸೂಕ್ಷ್ಮ ವಿಚಾರವಾದರಿಂದ ಹೆಚ್ಚಾಗಿ ಬಹಿರಂಗ ಪಡಿಸುವಂತಿಲ್ಲ ಎಂದು ಅವರು ಹೇಳಿದರು.

ರೈಲಿನಲ್ಲಿ ಕೊಂಡೊಯ್ಯಬಹುದು: ಸ್ಫೋಟಕ ಗ್ರೆನೇಡ್‌ನ‌ ಮೇಲ್ಭಾಗದಲ್ಲಿ ಕೆಲ ನಂಬರ್‌ಗಳನ್ನು ದಾಖಲಾಗಿರುತ್ತದೆ. ಆದರೆ,ತರಬೇತಿಗೆ ಬಳಸುವ ಗ್ರೆನೇಡ್‌ ಮೇಲೆ ಯಾವುದೇ ನಂಬರ್‌ ಮುದ್ರಿಸುವುದಿಲ್ಲ. ಹೀಗಾಗಿ ತನಿಖೆ ವಿಳಂಬ ಆಗಿದೆ ಎಂದ ಅವರು, ನಿಯಮದ ಪ್ರಕಾರ ಯಾವುದೇ ಸ್ಫೋಟಕ ವಸ್ತುವವನ್ನು ರೈಲಿನಲ್ಲಿ ಕೊಂಡೊಯ್ಯುವಂತಿಲ್ಲ. ಆದರೆ, ಈ ಗ್ರೆನೇಡ್‌ ಸ್ಫೋಟಕ ವಸ್ತು ಅಲ್ಲ. ತರಬೇತಿ ನೀಡಲೆಂದು ತಯಾರಿಸಿರುವ ನಿಷ್ಕ್ರಿಯ ಗ್ರೆನೇಡ್‌. ಹೀಗಾಗಿ ಅದನ್ನು ರೈಲಿನಲ್ಲಿ ಸಾಗಿಸಲಾಗುತ್ತಿತ್ತು ಎಂದು ಮಾಹಿತಿ ನೀಡಿದರು.

Advertisement

ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ: ಬಾಕ್ಸ್‌ಗಳಲ್ಲಿದ್ದ ಗ್ರೆನೇಡ್‌ ಮಾದರಿಯ ವಸ್ತು ನಾಪತ್ತೆಯಾಗಿರುವ ಬಗ್ಗೆ ಸಂಬಂಧಿಸಿದ ಸೇನಾ ವಿಭಾಗಕ್ಕೆ ಗೊತ್ತಾಗಿದೆಯೋ? ಇಲ್ಲವೋ? ಎಂಬುದು ತಿಳಿದು ಬಂದಿಲ್ಲ. ಆದರೆ, ಪ್ರಕರಣದ ತನಿಖಾಧಿಕಾರಿ ಸೇನಾಧಿಕಾರಿಯನ್ನು ಸಂಪರ್ಕಿಸಿದಾಗ ಸ್ಪಷ್ಟ ಮಾಹಿತಿ ಲಭಿಸಿದ್ದು, ಪ್ರಾತ್ಯಾಕ್ಷಿಕೆ ಮೂಲಕ ತರಬೇತಿಗೆ ಬಳಸುವ ಗ್ರೆನೇಡ್‌ ಹೇಗೆ ತಯಾರಿಸುತ್ತಾರೆ? ಅದು ಏಕೆ ಸ್ಫೋಟ ಆಗಲ್ಲ ಎಂಬುದನ್ನು ಪ್ರಕರಣದ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಹೇಳಿದರು.

ಪ್ರಕರಣದ ಪತ್ತೆಗೆ ಆಂತರಿಕಾ ಭದ್ರತಾ ದಳ, ಕೇಂದ್ರ ಮತ್ತು ರಾಜ್ಯ ಗುಪ್ತಚರ ದಳ, ಆರ್‌ಪಿಎಫ್ ಹಾಗೂ ರೈಲ್ವೆ ಪೊಲೀಸ್‌ ತಂಡದ ಡಿವೈಎಸ್‌ಪಿ ಶ್ರೀನಿವಾಸರೆಡ್ಡಿ, ಇನ್‌ಸ್ಪೆಕ್ಟರ್‌ಗಳಾದ ಮಲ್ಲೂರು, ನಾಗರಾಜ್‌, ಪಿಎಸ್‌ಐ ದಿಲೀಪ್‌, ಭಾರತಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಕೆಲ ಲೋಪದೋಷ: ಈ ನಡುವೆಯೂ ಸಹ ರೈಲು ನಿಲ್ದಾಣದಲ್ಲಿ ಭದ್ರತೆಗೆ ಸಂಬಂಧಿಸಿದ ಕೆಲ ಲೋಪದೋಷಗಳಿವೆ. ಅವುಗಳನ್ನು ಆಗಿಂದಾಗ್ಗೆ ಸರಿಪಡಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪ್ರಯಾಣಿಕರು ಹೆದರಬೇಕಿಲ್ಲ. ಒಂದು ವೇಳೆ ನಿಲ್ದಾಣದಲ್ಲಿ ಅನುಮಾನಸ್ಪದ ವಸ್ತು ಕಂಡು ಬಂದರೆ ಕೂಡಲೇ ಪೊಲೀಸರು ಅಥವಾ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಎಸ್ಪಿ ಭೀಮಾಶಂಕರ್‌ ಎಸ್‌.ಗುಳೇದ್‌ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next