Advertisement

ಟಾಂಗಾವಾಲಾಗಳ ಬದುಕು ಜಟಕಾ ಬಂಡಿ

04:34 PM Jun 12, 2022 | Team Udayavani |

ಗದಗ: ಸ್ವಾತಂತ್ರ್ಯ ಪೂರ್ವದಿಂದಲೂ ಗದಗ-ಬೆಟಗೇರಿ ಅವಳಿನಗರದಲ್ಲಿ ಪರಿಸರ ಸ್ನೇಹಿಯಾಗಿ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದ ಟಾಂಗಾಗಳು ಇಂದು ಅಳಿವಿನಂಚಿಗೆ ಸರಿಯುತ್ತಿವೆ.

Advertisement

ಹಲವು ದಶಕಗಳ ಕಾಲ ಬಹುಬೇಡಿಕೆಯಲ್ಲಿದ್ದ ಟಾಂಗಾಗಳು ಕುದುರೆಗಳ ನಿರ್ವಹಣೆ, ಪ್ರಯಾಣಿಕರ ಕೊರತೆ, ಮೇವಿನ ಅಲಭ್ಯತೆಯ ಸಂಕಷ್ಟ ಹಾಗೂ ಆಟೋ ರಿಕ್ಷಾ ಹಾಗೂ ಟಂಟಂಗಳ ಹೆಚ್ಚಳದಿಂದಾಗಿ ಟಾಂಗಾಗಳ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ.

1960ರ ಸಮಯದಲ್ಲಿ ಗದಗ-ಬೆಟಗೇರಿ ಅವಳಿ ನಗರದ ವಿವಿಧ ಬಡಾವಣೆ ಹಾಗೂ ಓಣಿಗಳಲ್ಲಿ 24 ಟಾಂಗಾ ನಿಲ್ದಾಣಗಳಿದ್ದವು. 800ಕ್ಕೂ ಹೆಚ್ಚು ಟಾಂಗಾಗಳಿದ್ದವು. ರೈಲು, ಬಸ್‌ ನಿಲ್ದಾಣ ಸೇರಿ ಸುತ್ತಮುತ್ತಲಿನ ವಸತಿ ಪ್ರದೇಶಗಳಿಗೆ ತೆರಳಲು ಪ್ರಯಾಣಿಕರು ಟಾಂಗಾಗಳನ್ನೇ ಅವಲಂಬಿಸಿದ್ದರು.

ಜತೆಗೆ ಚುನಾವಣೆ, ನಾಟಕ, ವ್ಯಾಪಾರ, ಸಿನಿಮಾ ಪ್ರದರ್ಶನ ಪ್ರಚಾರ ಹೀಗೆ ಅನೇಕ ರೀತಿಯ ಪ್ರಚಾರಗಳಿಗೆ ಟಾಂಗಾಗಳನ್ನೇ ಬಳಸಲಾಗುತ್ತಿತ್ತು. ಕಾಲಕ್ರಮೇಣ ಆಟೋ ರಿಕ್ಷಾ, ಟಂಟಂ ಹಾವಳಿಯಿಂದ ಟಾಂಗಾಗಳು ಅಳಿವಿನಂಚಿಗೆ ಸರಿಯುತ್ತಿವೆ. ಸದ್ಯ ನಗರದ ನವೀಕರಣಗೊಂಡ ಪಂಡಿತ್‌ ಪುಟ್ಟರಾಜ ಬಸ್‌ ನಿಲ್ದಾಣ ಹಾಗೂ ರೈಲು ನಿಲ್ದಾಣದಲ್ಲಿ ಕೇವಲ 20ರಿಂದ 25 ಟಾಂಗಾಗಳು ನಗರದಲ್ಲಿ ಸಂಚರಿಸುತ್ತಿವೆ.

ಗದಗ ನಗರದ ಪ್ರಮುಖ ಸ್ಥಳ ಟಾಂಗಾಕೂಟ. ತರಕಾರಿ, ದಿನಸಿ, ಚಿನ್ನಾಭರಣ, ಬಟ್ಟೆ ಹಾಗೂ ಇತರೆ ವಸ್ತುಗಳ ಖರೀದಿಗಾಗಿ ಮಾರುಕಟ್ಟೆಗೆ ಹತ್ತಿರವಾಗಿದ್ದ ಟಾಂಗಾಕೂಟದಲ್ಲಿ ನಿತ್ಯ ಕನಿಷ್ಟ 20ರಿಂದ 25 ಟಾಂಗಾಗಳು ನಿಲ್ಲುತ್ತಿದ್ದವು. ಈಗ ಟಾಂಗಾ ಕಾಣುವುದೇ ಅಪರೂಪವಾಗಿದೆ.

Advertisement

ಇನ್ನು, ಟಾಂಗಾಗಳನ್ನೇ ಉಪಜೀವನವನ್ನಾಗಿಸಿಕೊಂಡಿದ್ದ ಟಾಂಗಾವಾಲಾಗಳು ಜೀವನ ನಿರ್ವಹಿಸಲು ಸಾಧ್ಯವಾಗದೇ ಕೆಲವರು ಆಟೋ ರಿಕ್ಷಾ ಓಡಿಸುತ್ತಿದ್ದಾರೆ. ಹಲವರು ಗೌಂಡಿ ಹಾಗೂ ಕೂಲಿ ಕಾರ್ಮಿಕರಾಗಿದ್ದಾರೆ. ಇನ್ನೂ ಕೆಲವರು ಉದ್ಯೋಗವನ್ನರಸಿ ಗುಳೆ ಹೋಗಿದ್ದಾರೆ.

ಪುನರ್‌ ಬದುಕು ಕಟ್ಟಿಕೊಳ್ಳಲು ಮನವಿ: ಕಳೆದ ಎರಡ್ಮೂರು ತಿಂಗಳಿನಿಂದ ದಿನೇ ದಿನೆ ಪೆಟ್ರೋಲ್‌, ಡೀಸೆಲ್‌ ಗಗನಕ್ಕೇರುತ್ತಿದೆ. ಲೀಟರ್‌ ಪೆಟ್ರೋಲ್‌, ಡೀಸೆಲ್‌ ಶತಕದ ಗಡಿ ದಾಟಿದೆ. ಆದ್ದರಿಂದ ಇದರ ಪರ್ಯಾಯವಾಗಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಟಾಂಗಾಗಳಿಗೆ ಬೇಡಿಕೆ ಹೆಚ್ಚಿಸಲು ಜಿಲ್ಲಾಡಳಿತ ಹಾಗೂ ನಗರಸಭೆ ಯೋಜನೆ ರೂಪಿಸಬೇಕು. ಟಾಂಗಾವಾಲಾಗಳಿಗೆ ಪುನರ್‌ ಬದುಕು ಕಟ್ಟಿಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.

ನಿರ್ವಹಣೆ ಸಂಕಷ್ಟ:

ಪ್ರತಿನಿತ್ಯ 100ರಿಂದ 150 ರೂಪಾಯಿ ಕುದುರೆ ನಿರ್ವಹಣೆಗೆ ಖರ್ಚಾಗುತ್ತದೆ. ತಲಾ ಒಂದು ಕುದುರೆಗೆ ವಾರಕ್ಕೆ 2 ಮಟ್ಟಿ ಮೇವು ಬೇಕು. 1 ಮಟ್ಟಿಗೆ (50 ಕೆಜಿ ಮೇವು) 500 ರೂ. ಹಾಗೂ ವರ್ಷಕ್ಕೆ ಟಾಂಗಾ ನಿರ್ವಹಣೆಗೆ ಕನಿಷ್ಠ 10 ಸಾವಿರ ರೂ. ಬೇಕು. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಕೆಲವರು ಟಾಂಗಾವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಪರಿಸರ ಸ್ನೇಹಿಯಾಗಿರುವ ಟಾಂಗಾಗಳ ಸೇವೆಗೆ ಸರ್ಕಾರ ಅನುಕೂಲ ಕಲ್ಪಿಸಿಕೊಡಬೇಕು ಎನ್ನುತ್ತಾರೆ ಟಾಂಗಾವಾಲಾ ಫಕ್ಕೀರಪ್ಪ ಗೌಡರ.

ಸ್ವಾತಂತ್ರ್ಯ ಪೂರ್ವದಿಂದ 1990ರವರೆಗೂ ಟಾಂಗಾದಿಂದಲೇ ಉಪಜೀವನ ನಿರ್ವಹಿಸಿಕೊಂಡು ಹೋಗಲು ಸಾಧ್ಯವಾಯಿತು. ಅನಂತರ ರಸ್ತೆಗಿಳಿದ ಆಟೋ ರಿಕ್ಷಾ, ಟಂಟಂಗಳಿಂದ ಟಾಂಗಾವಾಲಾಗಳ ಬದುಕು ದುಸ್ತರವಾಯಿತು. ಇದರಿಂದ ಕೆಲವರು ಬೇರೆ ದುಡಿಮೆ ಗೊತ್ತಿಲ್ಲದೆ, ಮೂಲವೃತ್ತಿಯನ್ನು ಹೇಗೋ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. –ಇಮಾಮ್‌ ಹುಸೇನ್‌ ನಾಶಿಪುಡಿ, ಟಾಂಗಾವಾಲಾ.

ಸರ್ಕಾರ ವಿದ್ಯುತ್‌ ಚಾಲಿತ ವಾಹನಗಳಿಗೆ ನೀಡುತ್ತಿರುವ ಪ್ರೋತ್ಸಾಹದಂತೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಟಾಂಗಾ ಬಳಕೆಗೆ ಪ್ರಾಮುಖ್ಯತೆ ನೀಡಬೇಕಿದೆ. – ಗೌತಮ್‌ ಗದಗಿನ, ಪ್ರಯಾಣಿಕ

-ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next