Advertisement
ಹಲವು ದಶಕಗಳ ಕಾಲ ಬಹುಬೇಡಿಕೆಯಲ್ಲಿದ್ದ ಟಾಂಗಾಗಳು ಕುದುರೆಗಳ ನಿರ್ವಹಣೆ, ಪ್ರಯಾಣಿಕರ ಕೊರತೆ, ಮೇವಿನ ಅಲಭ್ಯತೆಯ ಸಂಕಷ್ಟ ಹಾಗೂ ಆಟೋ ರಿಕ್ಷಾ ಹಾಗೂ ಟಂಟಂಗಳ ಹೆಚ್ಚಳದಿಂದಾಗಿ ಟಾಂಗಾಗಳ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ.
Related Articles
Advertisement
ಇನ್ನು, ಟಾಂಗಾಗಳನ್ನೇ ಉಪಜೀವನವನ್ನಾಗಿಸಿಕೊಂಡಿದ್ದ ಟಾಂಗಾವಾಲಾಗಳು ಜೀವನ ನಿರ್ವಹಿಸಲು ಸಾಧ್ಯವಾಗದೇ ಕೆಲವರು ಆಟೋ ರಿಕ್ಷಾ ಓಡಿಸುತ್ತಿದ್ದಾರೆ. ಹಲವರು ಗೌಂಡಿ ಹಾಗೂ ಕೂಲಿ ಕಾರ್ಮಿಕರಾಗಿದ್ದಾರೆ. ಇನ್ನೂ ಕೆಲವರು ಉದ್ಯೋಗವನ್ನರಸಿ ಗುಳೆ ಹೋಗಿದ್ದಾರೆ.
ಪುನರ್ ಬದುಕು ಕಟ್ಟಿಕೊಳ್ಳಲು ಮನವಿ: ಕಳೆದ ಎರಡ್ಮೂರು ತಿಂಗಳಿನಿಂದ ದಿನೇ ದಿನೆ ಪೆಟ್ರೋಲ್, ಡೀಸೆಲ್ ಗಗನಕ್ಕೇರುತ್ತಿದೆ. ಲೀಟರ್ ಪೆಟ್ರೋಲ್, ಡೀಸೆಲ್ ಶತಕದ ಗಡಿ ದಾಟಿದೆ. ಆದ್ದರಿಂದ ಇದರ ಪರ್ಯಾಯವಾಗಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಟಾಂಗಾಗಳಿಗೆ ಬೇಡಿಕೆ ಹೆಚ್ಚಿಸಲು ಜಿಲ್ಲಾಡಳಿತ ಹಾಗೂ ನಗರಸಭೆ ಯೋಜನೆ ರೂಪಿಸಬೇಕು. ಟಾಂಗಾವಾಲಾಗಳಿಗೆ ಪುನರ್ ಬದುಕು ಕಟ್ಟಿಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.
ನಿರ್ವಹಣೆ ಸಂಕಷ್ಟ:
ಪ್ರತಿನಿತ್ಯ 100ರಿಂದ 150 ರೂಪಾಯಿ ಕುದುರೆ ನಿರ್ವಹಣೆಗೆ ಖರ್ಚಾಗುತ್ತದೆ. ತಲಾ ಒಂದು ಕುದುರೆಗೆ ವಾರಕ್ಕೆ 2 ಮಟ್ಟಿ ಮೇವು ಬೇಕು. 1 ಮಟ್ಟಿಗೆ (50 ಕೆಜಿ ಮೇವು) 500 ರೂ. ಹಾಗೂ ವರ್ಷಕ್ಕೆ ಟಾಂಗಾ ನಿರ್ವಹಣೆಗೆ ಕನಿಷ್ಠ 10 ಸಾವಿರ ರೂ. ಬೇಕು. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಕೆಲವರು ಟಾಂಗಾವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಪರಿಸರ ಸ್ನೇಹಿಯಾಗಿರುವ ಟಾಂಗಾಗಳ ಸೇವೆಗೆ ಸರ್ಕಾರ ಅನುಕೂಲ ಕಲ್ಪಿಸಿಕೊಡಬೇಕು ಎನ್ನುತ್ತಾರೆ ಟಾಂಗಾವಾಲಾ ಫಕ್ಕೀರಪ್ಪ ಗೌಡರ.
ಸ್ವಾತಂತ್ರ್ಯ ಪೂರ್ವದಿಂದ 1990ರವರೆಗೂ ಟಾಂಗಾದಿಂದಲೇ ಉಪಜೀವನ ನಿರ್ವಹಿಸಿಕೊಂಡು ಹೋಗಲು ಸಾಧ್ಯವಾಯಿತು. ಅನಂತರ ರಸ್ತೆಗಿಳಿದ ಆಟೋ ರಿಕ್ಷಾ, ಟಂಟಂಗಳಿಂದ ಟಾಂಗಾವಾಲಾಗಳ ಬದುಕು ದುಸ್ತರವಾಯಿತು. ಇದರಿಂದ ಕೆಲವರು ಬೇರೆ ದುಡಿಮೆ ಗೊತ್ತಿಲ್ಲದೆ, ಮೂಲವೃತ್ತಿಯನ್ನು ಹೇಗೋ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. –ಇಮಾಮ್ ಹುಸೇನ್ ನಾಶಿಪುಡಿ, ಟಾಂಗಾವಾಲಾ.
ಸರ್ಕಾರ ವಿದ್ಯುತ್ ಚಾಲಿತ ವಾಹನಗಳಿಗೆ ನೀಡುತ್ತಿರುವ ಪ್ರೋತ್ಸಾಹದಂತೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಟಾಂಗಾ ಬಳಕೆಗೆ ಪ್ರಾಮುಖ್ಯತೆ ನೀಡಬೇಕಿದೆ. – ಗೌತಮ್ ಗದಗಿನ, ಪ್ರಯಾಣಿಕ
-ಅರುಣಕುಮಾರ ಹಿರೇಮಠ