Advertisement

ನೊಂದವರ ಸೇವೆಯಿಂದ ಜೀವನ ಸಾರ್ಥಕ

06:29 PM Oct 19, 2021 | Team Udayavani |

ಚಿಕ್ಕಮಗಳೂರು: ನಾವೇನು ಗಳಿಸಿದ್ದೇವೋ ಅದರಲ್ಲಿ ಒಂದು ಭಾಗವನ್ನು ನೊಂದವರಿಗೆ ನೀಡಿದಾಗ ಮಾತ್ರ ಈ ಜೀವನ ಸಾರ್ಥಕವಾಗುತ್ತದೆ ಎಂದು ಆದಿಶಕ್ತಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ| ಜಿ. ಭೀಮೇಶ್ವರ ಜೋಷಿ ಹೇಳಿದರು.

Advertisement

ಸೋಮವಾರ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆದ ಪಟ್ಟಾಭಿಷೇಕೋತ್ಸವ ಜೀವ-ಭಾವ ಕಾರ್ಯಕ್ರಮದ ಅಂಗವಾಗಿ “ಶ್ರೀಮಾತಾ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಜೀವನ ಸಮಾಜಮುಖೀಯಾಗಬೇಕು.

ಆಗ ಜೀವನ ಸಾರ್ಥಕವಾಗುತ್ತದೆ. ಮನೆಯಲ್ಲಿ ಸಂಸ್ಕಾರ, ಒಳ್ಳೆಯ ವಿಚಾರಗಳು, ಪೂಜೆ- ಪುನಸ್ಕಾರಗಳು, ದೇವರ ಧ್ಯಾನ ಮಾಡಿದಾಗ ಆ ಮನೆಯಲ್ಲಿ ಹುಟ್ಟುವ ಮಕ್ಕಳು ಆರೋಗ್ಯವಂತರಾಗಿ ಹುಟ್ಟುತ್ತಾರೆ ಎಂದರು.

ದೇಶದುದ್ದಕ್ಕೂ ಪ್ರವಾಸ ಮಾಡುವ ಸಂದರ್ಭದಲ್ಲಿ ಮನುಷ್ಯ ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿ ಕಷ್ಟದ ಜೀವಿಗಳಿಗೆ ಭಾವನೆಗಳನ್ನು ತುಂಬುವ ಕಾರ್ಯಕ್ರಮವನ್ನು ಮಾಡುವ ಯೋಚನೆಯ ಫಲವಾಗಿ ಪರರ ಹಿತಕ್ಕಾಗಿ ಸ್ಪಂದಿಸುವ ಸಂಸ್ಥೆಗಳನ್ನು ಗುರುತಿಸಿ ಅದಕ್ಕೆ ಜೀವ-ಭಾವ ಎನ್ನುವ  ಕಾರ್ಯಕ್ರಮದಡಿಯಲ್ಲಿ ಪ್ರಶಸ್ತಿ ಪ್ರದಾನ ಮತ್ತು 1ಲಕ್ಷ ರೂ. ನೀಡಲಾಗುತ್ತಿದೆ ಎಂದು ತಿಳಿಸಿದರು.

ಪ್ರತೀ ವರ್ಷ ಕಾರ್ಯಕ್ರಮದ ಜೊತೆಗೆ ಸರ್ವಧರ್ಮ ಸಮ್ಮೇಳನವನ್ನೂ ಅದ್ಧೂರಿಯಾಗಿ ನಡೆಸಲಾಗುತ್ತಿತ್ತು. ಆದರೆ 2 ವರ್ಷ ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದ ಅವರು, ಹಿರಿಯರು ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ಹಾಕಿದ ಭದ್ರ ಅಡಿಪಾಯದ ನೆಲೆಯಲ್ಲಿ ಕ್ಷೇತ್ರ ವಿಸ್ತಾರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳಿದರು.

Advertisement

ಶ್ರೀಕೃಷ್ಣ ಟ್ರಸ್ಟ್‌ ಬೆಂಗಳೂರು ಆಡಳಿತ ವ್ಯವಸ್ಥಾಪಕ ಸದಾಶಿವಪ್ಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಸಂಸ್ಥೆಯಿಂದ 25 ವರ್ಷಗಳಿಂದ ವಿಕಲಚೇತನ ಶಾಲೆ ಆರಂಭಿಸಿ ಉಚಿತ ಶಿಕ್ಷಣ ವಸತಿಯನ್ನು ನೀಡುತ್ತಿದ್ದೇವೆ. ಶಾಲೆಯಲ್ಲಿ 50 ವಿಕಲಚೇತನ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ ಎಂದರು. ಮಕ್ಕಳಿಗೆ ಶಿಕ್ಷಣ ನೀಡಿ 18 ವರ್ಷ ತುಂಬಿದ ಬಳಿಕ ಪೋಷಕರ ಜೊತೆ ಕಳಿಸಲಾಗುತ್ತಿತ್ತು. ಆದರೆ, ನಮ್ಮ ಜವಾಬ್ದಾರಿ ಪೂರ್ಣಗೊಳಿಸಿಲ್ಲ ಅನ್ನುವ ನೋವು ಕಾಡುತ್ತಿತ್ತು. ಹಾಗಾಗಿ ಸಂಸ್ಥೆಯಿಂದ ಇನ್ನು ಮುಂದೆ ಮಕ್ಕಳಿಗೆ ವಿವಿಧ ಡಿಪ್ಲೊಮಾ ಕೋರ್ಸ್‌ಗಳ ತರಬೇತಿ ನೀಡಿ ನಂತರ ಸರ್ಕಾರಿ ಉದ್ಯೋಗ ಪಡೆಯುವಂತೆ ತರಬೇತಿ ನೀಡಿ ಅವರ ಜೀವನ ರೂಪಿಸುವ ಕೆಲಸ ಮಾಡಲಾಗುವುದು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಧರ್ಮಕರ್ತ ಡಾ| ಜಿ.ಬೀಮೇಶ್ವರ ಜೋಷಿಯವರ ಪಟ್ಟಾಭಿಷೇಕವಾಗಿ 31 ವರ್ಷ ತುಂಬಿದ ದಿನದ ಅಂಗವಾಗಿ ದೇವಿಗೆ ಅಭಿಷೇಕ, ಪೂಜೆ, ನವಗ್ರಹ ಹೋಮಗಳು ನಡೆದವು. ಈ ಸಂದರ್ಭದಲ್ಲಿ ಹೊರನಾಡು ದೇವಸ್ಥಾನದ ಟ್ರಸ್ಟಿಗಳಾದ ರಾಜಲಕ್ಷಿ ಜೋಷಿ, ರಾಮನಾರಾಯಣ ಜೋಷಿ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next