Advertisement

ಸಾಕ್ಷ್ಯಚಿತ್ರದಲ್ಲಿ ಜಾನಪದರ ಬದುಕು

12:11 PM Aug 12, 2018 | Team Udayavani |

ಬೆಂಗಳೂರು: ಜಾನಪದ ಕ್ಷೇತ್ರಕ್ಕೆ ನಾಡಿನ ದಲಿತ ಕಲಾವಿದರ ಕೊಡುಗೆಯನ್ನು ದಾಖಲಿಸಲು ಕರ್ನಾಟಕ ಜಾನಪದ ಅಕಾಡೆಮಿ ಮುಂದಾಗಿದ್ದು, ಆಯ್ದ 61 ಜಾನಪದ ಕಲಾವಿದರ ಕುರಿತ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಇದೇ ಮೊದಲ ಬಾರಿಗೆ ಇಂತಹ ವಿನೂತನ ಪ್ರಯತ್ನಕ್ಕೆ ಅಕಾಡೆಮಿ ಕೈ ಹಾಕಿದ್ದು, ಕಲಾವಿದರ ಬದುಕು, ಬರಹ, ಜಾನಪದ ಪರಂಪರೆಯನ್ನು ಸಾಕ್ಷ್ಯಚಿತ್ರದ ರೂಪದಲ್ಲಿ ಸಾಕ್ಷೀಕರಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

Advertisement

ರಾಜ್ಯದ ಹಲವು ಭಾಗಗಳಲ್ಲಿ ಜಾನಪದ ಕಲೆಯನ್ನೇ ಉಸಿರಾಗಿಸಿಕೊಂಡವರು ಸದ್ದಿಲ್ಲದೇ ಅದರ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲೂ ಕಲಾಪ್ರತಿಭೆ ಮೆರೆದಿದ್ದಾರೆ. ಇಂತಹ ಸಾಧಕರ ಜೀವನ ಚರಿತ್ರೆಯನ್ನು ಸಾಕ್ಷ್ಯಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನ ಇದಾಗಿದೆ. ಕಲಾವಿದರ ಜೀವನ ಮತ್ತು ಸಾಧನೆ ಮುಂದಿನ ಪೀಳಿಗೆಗೆ ಪ್ರೇರಣೆ ಆಗಲಿ ಎಂಬುದು ಅಕಾಡೆಮಿಯ ಉದ್ದೇಶ.

ಈ ಯೋಜನೆ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್‌ ಅವರ ಕನಸಿನ ಕೂಸು. ಈ ಹಿಂದೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿದ್ದ ವೇಳೆ ಅವರು ದಲಿತ ಜಾನಪದ ಕಲಾವಿದರ ಸಾಕ್ಷ್ಯಚಿತ್ರ ನಿರ್ಮಿಸುವ ಚಿಂತಿಸಿದ್ದರು. ಅದರಂತೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ತಜ್ಞರ ಸಮಿತಿ ನೇಮಿಸಿ ಯೋಜನೆಯ ರೂಪುರೇಷೆ ಸಿದ್ಧಪಡಿಸುವ ಪ್ರಯತ್ನವೂ ನಡೆದಿತ್ತು. ಬಳಿಕ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು.

ಇದೀಗ ಅಕಾಡೆಮಿ ಅಧ್ಯಕ್ಷ ಟಾಕಪ್ಪ ಕಣ್ಣೂರು ಅವರು ಅಕಾಡೆಮಿಯ ಹಳೆಯ ಚಿಂತನೆಗೆ ನೀರೆರೆಯಲು ಹೊರಟಿದ್ದಾರೆ. ಆರ್ಥಿಕ ನೆರವು ಮತ್ತು ಪೋಷಣೆ ಇಲ್ಲದೆ ಸಾಕಷ್ಟು ಜಾನಪದ ಕಲೆಗಳು ಅಳಿವಿನಂಚಿನಲ್ಲಿವೆ. ಜತೆಗೆ ಬಹಳಷ್ಟು ಕಲಾವಿದರು ಇಳಿ ವಯಸ್ಸಿನರಾಗಿದ್ದು, ಅವರ ಕೊಡುಗೆಯನ್ನು ದಾಖಲಿಸುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ಎಂದು ಅಧ್ಯಕ್ಷರು ಹೇಳುತ್ತಾರೆ.  

1.2 ಕೋಟಿ ರೂ. ಮೊತ್ತದ ಯೋಜನೆ: ಕಲಾವಿದರ ಸಾಕ್ಷ್ಯಚಿತ್ರಗಳ ನಿರ್ಮಾಣಕ್ಕೆ ಸುಮಾರು 2 ಕೋಟಿ ರೂ. ತಗುಲಲಿದೆ ಎಂದು ಅಂದಾಜಿಸಲಾಗಿದೆ. ಒಬ್ಬ ಕಲಾವಿದರ‌ ಸಾಧನೆಯನ್ನು ಚಿತ್ರ ರೂಪದಲ್ಲಿ ಹಿಡಿದಿಡಲು ಸುಮಾರು 3 ಲಕ್ಷ  ರೂ. ಖರ್ಚಾಗಲಿದೆ. ಹೀಗಾಗಿ ಅಕಾಡೆಮಿಯಲ್ಲಿನ ಎಸ್‌ಸಿಪಿ- ಟಿಎಸ್‌ಪಿ ಅನುದಾನವನ್ನು ಬಳಸಿಕೊಳ್ಳಲು ಚಿಂತಿಸಿದೆ. ಈ ಪ್ರಸ್ತಾವದ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಅಧಿಕಾರಿಗಳು, ಸಚಿವರ ಗಮನಕ್ಕೆ ತಂದಿದೆ.

Advertisement

ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡ್ಬೇಕು: ಯೋಜನೆ ಸಂಬಂಧ ನೀಲಿನಕ್ಷೆ ಸಿದ್ಧಪಡಿಸಿರುವ ಅಕಾಡೆಮಿಯು ಸರ್ಕಾರದ ಅನುಮತಿ ಪಡೆಯುವ ನಿರೀಕ್ಷೆಯಲ್ಲಿದೆ. ಸಾಕ್ಷ್ಯಚಿತ್ರ ನಿರ್ಮಾಣ ಕಾರ್ಯವನ್ನು ಟೆಂಡರ್‌ ಮೂಲಕ ಒಬ್ಬ ವ್ಯಕ್ತಿಗೆ ನೀಡಬೇಕೋ ಅಥವಾ ಸಾಕ್ಷ್ಯಚಿತ್ರ ನಿರ್ಮಾಣ ಸಂಸ್ಥೆಗೆ ನೀಡಬೇಕೋ ಎಂಬುದನ್ನು ಸರ್ಕಾರ ನಿರ್ಧರಿಸಬೇಕಿದೆ. ಹೀಗಾಗಿ, ಸರ್ಕಾರದ ಸೂಚನೆ ಬಳಿಕ ಸಾಕ್ಷ್ಯಚಿತ್ರ ನಿರ್ಮಾಣ ಕಾರ್ಯ ಶುರುವಾಗಲಿದೆ  ಎಂದು  ಅಕಾಡೆಮಿ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ವೆಬ್‌ಸೈಟ್‌ನಲ್ಲಿ ಸಾಕ್ಷ್ಯಚಿತ್ರ: ಸುಮಾರು 15 ತಾಸುಗಳ ಡಿಜಿಟಲ್‌ ಆತ್ಮಕಥನ ಇದಾಗಿರಲಿದೆ. ಈ ಎಲ್ಲಾ ಸಾಕ್ಷ್ಯಚಿತ್ರಗಳನ್ನು ಜಾನಪದ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗುತ್ತದೆ. ಅಲ್ಲದೆ, 15 ಗಂಟೆಗಳ ಕಥನವನ್ನು ಒಂದು ಗಂಟೆಗೆ ಸಂಕ್ಷಿಪ್ತಗೊಳಿಸಿ ಜಾನಪದ ಅಕಾಡೆಮಿಯ ವೆಬ್‌ಸೆಟ್‌ನಲ್ಲಿ ಪ್ರಕಟಿಸಲು ಚಿಂತಿಸಿದೆ.

ನಾಡಿನ ಜಾನಪದ ಕಲೆ ಅಭಿವೃದ್ಧಿಗಾಗಿ ಅಕಾಡೆಮಿ ಹಲವು ಯೋಜನೆಗಳನ್ನು ರೂಪಿಸಿದೆ. ಇದರಲ್ಲಿ ಕಲಾವಿದರ ಸಾಕ್ಷ್ಯಚಿತ್ರ ನಿರ್ಮಾಣ ಮಾಡುವುದು ಸೇರಿದೆ. ಇತ್ತೀಚಿನ ದಿನಗಳಲ್ಲಿ ಜಾನಪದ ಕಲೆಗಳು ನಶಿಸುತ್ತಿದು,ª ಅವುಗಳನ್ನು ಮುಂದಿನ ತಲೆಮಾರಿಗೆ ಹಿಡಿದಿಟ್ಟುಕೊಳ್ಳುವ ಕೆಲಸ ಇದಾಗಿದೆ.
-ಟಾಕಪ್ಪ ಕಣ್ಣೂರು, ಜಾನಪದ ಅಕಾಡೆಮಿ ಅಧ್ಯಕ್ಷ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next