Advertisement

ಅವಳು ಕಲಿಸಿದ ಜೀವನಪಾಠ

10:10 AM Dec 12, 2019 | mahesh |

ನಮ್ಮ ಅತ್ತೆಮ್ಮಾನೂ ನಂಜೊತೆಗೇ ಬಂದವ್ಳೆ. ಅವಳೋ ಬೆಳಗ್ಗೆಯಿಂದಾ ಏನೂ ತಿಂದಿಲ್ಲಾ ಪಕ್ಕದ ರೋಡ್ನಾಗೆ ಅವಳೂ ಮರ ಸಾರ್ಸೊಕ್ಕೆ ಹೋಗವ್ಳೆ. ಪಾಪ ಅವಳೋ ಅಸ್ಕಂಡವ್ಳೆ. ನನ್ನ ಗಂಡ ನನ್ನನ್ನ ಬಿಟ್ಟು ಹೋದಾಗ್ನಿಂದ ನಮ್ಮತ್ತೇನ ನಾನೇ ನೋಡ್ಕಂತಾಯಿರೋದು.ಮಗ ಕೈಬಿಟ್ಟಾಂತ ನಾನೂ ಕೈ ಬಿಡಕಾಯ್ತದಾ…ಪಾಪ…

Advertisement

“ಅಮ್ಮಾ.. ಮರ (ಮೊರ) ಇದ್ರೆ ಕೊಡಿ.. ಸಾರಿಸ್ಕೊಡ್ತೀನಿ. ಇಪ್ಪತ್ತು ರೂಪಾಯಿ ಒಂದೊಂದಕ್ಕೆ’ ಎಂದು ಕೂಗುತ್ತಾ ಬಂದಳು, ಸಣ್ಣ ವಯಸ್ಸಿನ, ಕೃಶ ದೇಹದ ಹೆಣ್ಣು ಮಗಳೊಬ್ಬಳು.

ಸಾರಿಸಲು ಕೊಡಲು ಮೊರ ಎಲ್ಲಿದೆ? ನಾನು ಬಳಸುವುದು ಪ್ಲಾಸ್ಟಿಕ್‌ ಮೊರವನ್ನು!

ಯಾಕೋ ಸುಸ್ತಾದಂತಿದ್ದಳು. ಪಾಪ ಎನಿಸಿತು. “ಇರು, ಬಂದೆ’ ಎಂದು ಒಳ ಹೋಗಿ, ಸಜ್ಜದ ಮೇಲೆಲ್ಲಾ ಹುಡುಕಾಡಿ, ಹಳೆಯ ಮೊರವೊಂದನ್ನು ಹುಡುಕಿ ತಂದು ಅವಳ ಕೈಗಿತ್ತೆ. ಖುಷಿಯಾಗಿರಬೇಕು ಆಕೆಗೆ. ಮೇಲುಸಿರು ಬಿಡುತ್ತಾ ಚೆಂದವಾಗಿ ರುಬ್ಬಿದ್ದ (ಮೆಂತ್ಯೆ,ಪೇಪರ್‌, ಅರಿಶಿಣ… ಇನ್ನೂ ಏನೇನು ಹಾಕಿದ್ದಳ್ಳೋ ತಿಳಿಯದು) ಪೇಸ್ಟ್‌ ಅನ್ನು ಸವರಿ ಸವರಿ ಆ ಹಳೆಯ ಮೊರಕ್ಕೆ ಒಂದು ಅಂದದ ರೂಪ ಕೊಡುತ್ತಿದ್ದಳು.

ನನಗೇಕೊ ಅವಳಿಗೆ ತುಂಬಾ ಹಸಿವಾಗಿದೆ ಅನ್ನಿಸಿತು. ಒಳಗೆ ಹೋಗಿ, ಮಗನಿಗಾಗಿ ಮಾಡಿಟ್ಟಿದ್ದ ಚಪಾತಿಗಳಲ್ಲಿ ಎರಡು ತೆಗೆದು ಚಟ್ನಿ, ಆಲೂ ಪಲ್ಯವನ್ನು ಒಂದು ಪೇಪರ್‌ ಪ್ಲೇಟ್‌ನಲ್ಲಿ ಹಾಕಿಕೊಂಡು, ನೀರಿನೊಂದಿಗೆ ಹೊರಬರುವಷ್ಟರಲ್ಲಿ ಮೊರವನ್ನು ಚೆನ್ನಾಗಿಯೇ ಸಾರಿಸಿ ಮುಗಿಸಿದ್ದಳು. ಕೈ ತೊಳೆಯಲು ನೀರು ಹಾಕಿ, ಅವಳ ಕೈಗೆ ಚಪಾತಿಯಿದ್ದ ಪ್ಲೇಟನ್ನು ಕೊಟ್ಟು, ತಿನ್ನುವಂತೆ ಹೇಳಿದೆ.

Advertisement

ಅವಳಿಗೆ ಏನನ್ನಿಸಿತೋ ಏನೋ…ನಾ ಕೊಟ್ಟ ತಿಂಡಿಯನ್ನು ತಿನ್ನದೆ, ಹಾಗೇ ಕೈಯಲ್ಲಿ ಹಿಡಿದೇ ಇದ್ದಳು. ತಿಂಡಿ ಕೊಟ್ಟು, ಕಾಸು ಕೊಡುವುದಿಲ್ಲವೇನೋ ಎಂದು ಅವಳು ಸಂಶಯಿಸುತ್ತಿರಬಹುದೆನಿಸಿತು. ತಕ್ಷಣವೇ, “ತಗೋ, ನೀನು ಹೇಳಿದಷ್ಟೇ ಕೊಡ್ತಾಯಿದ್ದೀನಿ’ ಎಂದು ಪರ್ಸ್‌ನಿಂದ ಒಂದು ಹೊಸ ಇಪ್ಪತ್ತು ರೂಪಾಯಿಯ ಹಸಿರು ನೋಟನ್ನು ತೆಗೆದು ಅವಳ ಮುಂದೆ ಹಿಡಿದೆ. ಅವಳು ಸಂಕೋಚದಿಂದ, “ಇಲ್ಲಾ ಅಮ್ಮಾವ್ರೇ…ಇಲ್ಲೇ ತಿನ್ನಕ್ಕಾಗಲ್ಲ. ನಮ್ಮ ಅತ್ತೆಮ್ಮಾನೂ ನಂಜೊತೆಗೇ ಬಂದವ್ಳೆ. ಅವಳೋ ಬೆಳಗ್ಗೆಯಿಂದಾ ಏನೂ ತಿಂದಿಲ್ಲಾ ಪಕ್ಕದ ರೋಡ್ನಾಗೆ ಅವಳೂ ಮರ ಸಾರ್ಸೊಕ್ಕೆ ಹೋಗವ್ಳೆ. ಪಾಪ ಅವಳೋಅಸ್ಕಂಡವ್ಳೆ. ನನ್ನ ಗಂಡ ನನ್ನನ್ನ ಬಿಟ್ಟು ಹೋದಾಗ್ನಿಂದ ನಮ್ಮತ್ತೇನ ನಾನೇ ನೋಡ್ಕಂತಾಯಿರೋದು. ಮಗ ಕೈಬಿಟ್ಟಾಂತ ನಾನೂ ಕೈ ಬಿಡಕಾಯ್ತದಾ…ಪಾಪ… ಇನ್ನಾ ಆಯಮ್ನತ್ರ ಯಾರಾನಾ ಮರಗಳ್ನ ಸಾರ್ಸಿದ್ರೋ ಇಲ್ವೋ.. ಈಗೆಲ್ಲ ಪ್ಲಾಸ್ಟಿಕ್‌ ಮರಗಳನ್ನ ಇಟ್ಕೊಂಡವ್ರೇ. ಇಂಥಾ ಮರಗಳನ್ನ ಯಾರೂ ಉಪಯೋಗಿಸ್ತಾಯಿಲ್ಲ. ಹಂಗಾಗಿ ನಮ್ಗೆ ಬಿಸ್ನೆಸ್ಸೇ ಇಲ್ಲಾ..ನೀವು ಕೊಟ್ರೀಂತ ಆಯಮ್ಮನ್ನ ಬಿಟ್ಟು ನಾನೊಬ್ಳೆ ಹೆಂಗ್ತಿನ್ನಾದೂ..ತಗೊಂಡ್ಹೊಯ್ತಿನಿ, ಅಲ್ಲೇ ಎಲ್ಲಾದ್ರೂ ಕುಂತು ಇಬ್ರೂ ಹಂಚ್ಕೊಂಡ್ ತಿಂತೀವಿ, ಪಾಪ ವಯಸ್ಸಾಗೈತೆ…’ ಎಂದು ಹೇಳುತ್ತಾ ನಾನು ಕೊಟ್ಟಿದ್ದ ತಿಂಡಿಯನ್ನು ತನ್ನ ಸೆರಗಿನಲ್ಲಿ ಭದ್ರವಾಗಿ ಇಟ್ಟುಕೊಂಡು, ಬೀಳದಂತೆ ಸೊಂಟಕ್ಕೆ ಸಿಕ್ಕಿಸಿಕೊಂಡವಳೇ ತನ್ನ ಎರಡು ಕೈಗಳಿಂದ ಪೇಸ್ಟ್ ತುಂಬಿದ್ದ ಅಲ್ಯೂಮಿನಿಯಮ್‌ ಡಬರಿಯನ್ನು ಎತ್ತಿ ತನ್ನ ತಲೆಯ ಮೇಲೆ ಇಟ್ಟು ಕೊಂಡು ಹೊರಡಲು ಅನುವಾದಳು.

ಎಂಥಾ ನೀತಿ! ನಿಯತ್ತು !! ಪ್ರೀತಿ! ಈ ಓದು ಬರಹವಿಲ್ಲದ ಬಡ ಹೆಣ್ಣಿನಲ್ಲಿ ಅದೆಂಥಾ ಮಾನವೀಯತೆ.

ನಾಗರೀಕರೆನಿಸಿಕೊಂಡ ನಾವು…..?
ಆಶ್ರಯ, ವೃದ್ಧಾಶ್ರಮ,ಅನಾಥಾಶ್ರಮ… ಹೀಗೇ ಏನೇನೋ ತಲೆಯೊಳಗೆ ನರ್ತಿಸತೊಡಗಿದವು. ನಾವೇಕೆ ಅವರಂತಿಲ್ಲ?
ನನ್ನ ಕಣ್ಣಿಂದ ಆಗಲೇ ಉದುರಲು ಸಿದ್ಧವಾಗಿದ್ದ ಕಣ್ಣೀರು ಅವಳಿಗೆ ಕಾಣಬಾರದೆಂದು, ಠಕ್ಕನೆ ಪಕ್ಕಕ್ಕೆ ತಿರುಗಿ, “ತಾಳು ಬಂದೇ’ ಎಂದು ಮತ್ತೆ ಒಳಕ್ಕೆ ಹೋಗಿ ಮಗನಿಗಾಗಿ ಮಿಗಿಸಿದ್ದ ಚಪಾತಿ ಪಲ್ಯಗಳನ್ನೆಲ್ಲಾ ಒಂದು ಕವರಿಗೆ ಹಾಕಿ, ಬಾಟಲೊಂದರಲ್ಲಿ ನೀರನ್ನು ತುಂಬಿಸಿ ತಂದು ಅವಳ ಕೈಯಲ್ಲಿತ್ತೆ. ಏನೂ ಮಾತನಾಡದೆ ತೆಗೆದುಕೊಂಡರೂ,
ಆಗ ಅವಳ ಕಂಡಲ್ಲಿ ಕಂಡ ಕೃತಜ್ಞತೆಯ ಭಾವವನ್ನು ನೋಡಿ ಕೃತಾರ್ಥಳಾದೆ!

- ವೆಂ. ಲಕ್ಷ್ಮೀ ಶ್ರೀನಿವಾಸ ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next