Advertisement

ಖಾಸಗಿ ಹೆಗಲಿಗೆ ಎಲ್‌ಇಡಿ ದೀಪದ ಹೊಣೆ

12:51 PM Jun 12, 2017 | |

ಬೆಂಗಳೂರು: ರಾಜಧಾನಿ ಬೆಂಗಳೂರಿನ ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಿ ನಿರ್ವಹಣೆ ಹೊಣೆಗಾರಿಕೆ ಖಾಸಗಿಯವರಿಗೆ ವಹಿಸಲು ಬಿಬಿಎಂಪಿ ಮುಂದಾಗಿದೆ. ಬೀದಿ ದೀಪಗಳ ವಿದ್ಯುತ್‌ ಬಿಲ್‌ ಮಾಸಿಕ 12 ಕೋಟಿ ರೂ. ಪಾವತಿಸಿ, ನಿರ್ವಹಣೆಗಾಗಿ ವಾರ್ಷಿಕ 50 ಕೋಟಿ ರೂ. ವೆಚ್ಚ ಮಾಡುತ್ತಿದ್ದರೂ ಸಾರ್ವಜನಿಕರಿಂದ ಬೀದಿ ದೀಪಗಳ ಸಮಸ್ಯೆ ಬಗ್ಗೆ ದೂರುಗಳು ಬರುತ್ತಲೇ ಇರುವುದರಿಂದ ಎಲ್‌ಇಡಿ ಬಲ್ಬ್ ಅಳವಡಿಸಿ ನಿರ್ವಹಣೆ ಖಾಸಗಿಯವರಿಗೆ ಒಪ್ಪಿಸಲು ತೀರ್ಮಾನಿಸಿದೆ.

Advertisement

ಎಲ್‌ಇಡಿ ಬಲ್ಬ್ ಅಳವಡಿಕೆ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ಬಹುತೇಕ ಫಿಲಿಪ್ಸ್‌ ಸಂಸ್ಥೆಗೆ ವಹಿಸುವ ಸಾಧ್ಯತೆಯಿದೆ. ಈಗಾಗಲೇ ಫಿಲಿಪ್ಸ್‌ ಸಂಸ್ಥೆಯು ಕೋಲ್ಕತ್ತಾ ನಗರದಾದ್ಯಂತ ಬೀದಿ ದೀಪಗಳ ನಿರ್ವಹಣೆ  ವಹಿಸಿಕೊಂಡು ಯಶಸ್ವಿಯಾಗಿರುವುದರಿಂದ ಅದೇ ಸಂಸ್ಥೆಗೆ ಇಲ್ಲೂ ಜವಾಬ್ದಾರಿ ಒಪ್ಪಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಎಲ್‌ಇಡಿ ಬಲ್ಬ್ಗಳ ವೆಚ್ಚವನ್ನು ಸಂಪೂರ್ಣವಾಗಿ ಪಿಲಿಪ್ಸ್‌ ಸಂಸ್ಥೆ ವಹಿಸಿಕೊಳ್ಳಲಿದ್ದು, ವಿದ್ಯುತ್‌ ಬಿಲ್‌ ಉಳಿತಾಯದ ಹಣದಲ್ಲಿ ಶೇ.50ರಷ್ಟು ಪಾಲು ಪಡೆಯಲಿದೆ.

ಪಾಲಿಕೆಯ ನಿಯಂತ್ರಣ ಕೊಠಡಿಗೆ ನಿತ್ಯ ಬರುವ ಸಾವಿರಾರು ದೂರುಗಳ ಪೈಕಿ ಬೀದಿ ದೀಪಗಳಿಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿರುತ್ತವೆ. ದೂರು ನೀಡಿ ಹಲವು ದಿನವಾದರೂ ಪಾಲಿಕೆ ಸಿಬ್ಬಂದಿ ದುರಸ್ತಿ ಕಾರ್ಯಕ್ಕೆ ಮುಂದಾಗುವುದಿಲ್ಲ ಎಂಬ ಆರೋಪ ಸಾಮಾನ್ಯ. ಹೀಗಾಗಿ, ಬೀದಿ ದೀಪಗಳ ನಿರ್ವಹಣೆ ಖಾಸಗಿ ಸಂಸ್ಥೆಗೆ ನೀಡಲು ಪಾಲಿಕೆ ನಿರ್ಧರಿಸಿದೆ.  ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು 5ರಿಂದ 6 ಲಕ್ಷ ಬೀದಿ ದೀಪಗಳಿವೆ ಎಂದು ಅಂದಾಜಿಸಲಾಗಿದ್ದು, ಪ್ರತಿ ತಿಂಗಳು 12 ಕೋಟಿ ರೂ.ಗಳಷ್ಟು ವಿದ್ಯುತ್‌ ಬಿಲ್‌ ಪಾವತಿಸಲಾಗುತ್ತಿದೆ.

ಜತೆಗೆ ವಾರ್ಷಿಕ 50 ಕೋಟಿ ರೂ. ನಿರ್ವಹಣೆಬಗಾಗಿ ವ್ಯಯಿಸಲಾಗುತ್ತಿದೆ. ಪಾಲಿಕೆಯಿಂದ ಕೋಟ್ಯಂತರ ವೆಚ್ಚ ಮಾಡಿದ ನಂತರವೂ ಸಮಸ್ಯೆ ಬಗೆಹರಿಯುತ್ತಿಲ್ಲ. ಹೀಗಾಗಿ, ಪಾಲಿಕೆಯ ವ್ಯಾಪ್ತಿಯ ಬೀದಿ ದೀಪಗಳಿಗೆ ಐದು ಲಕ್ಷ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಕೆ ಮಾಡಲು ಪಾಲಿಕೆ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  8 ಕೋಟಿ ರೂ. ಉಳಿತಾಯ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 5 ಲಕ್ಷ ಬೀದಿ ದೀಪಗಳಿಗೆ ಎಲ್‌ಇಡಿ ಬಲ್‌½ಗಳನ್ನು ಅಳವಡಿಕೆ ಮಾಡುವುದರಿಂದ ಪಾಲಿಕೆಗೆ ಪ್ರತಿ ತಿಂಗಳು 8 ಕೋಟಿ ರೂ. ಉಳಿತಾಯವಾಗಲಿದೆ.

ಖಾಸಗಿ ಸಂಸ್ಥೆಗೆ ನಿರ್ವಹಣೆ ವಹಿಸುವುದರಿಂದ ದೂರುಗಳ ಬಗ್ಗೆ ತಕ್ಷಣ ಸ್ಪಂದಿಸಿ ಸಮಸ್ಯೆ ನಿವಾರಣೆಯಾಗಲಿದೆ ಎಂಬುದು ಪಾಲಿಕೆ ಅಧಿಕಾರಿಗಳ ವಾದವಾಗಿದೆ. ಬೀದಿದೀಪ ನಿರ್ವಹಣೆಗೆ ಮುಂದಾಗುವಂತಹ ಸಂಸ್ಥೆಯು ಸಂಪೂರ್ಣ ಕೇಂದ್ರೀಕೃತ ವ್ಯವಸ್ಥೆಯನ್ನು ಹೊಂದಿರಲಿದ್ದು, ಸ್ವಯಂ ಚಾಲಿತವಾಗಿ ಬೀದಿ ದೀಪ ಸಮಸ್ಯೆ ಸಿಬ್ಬಂದಿಗೆ ತಿಳಿಯಲಿದೆ. ಅದನ್ನು ಆಧರಿಸಿ ಪಾಲಿಕೆಯ ಸಿಬ್ಬಂದಿ ಬಲ್ಬ್ಗಳ ಅಳವಡಿಕೆಗೆ ಮುಂದಾಗಲಿದ್ದಾರೆ.

Advertisement

ಇದರೊಂದಿಗೆ ಈ ಹಿಂದೆ ಪಾಲಿಕೆಗೆ ಬರುತ್ತಿದ್ದ ವಿದ್ಯುತ್‌ ಬಿಲ್‌ ಮತ್ತು ಎಲ್‌ಇಡಿ ಬಲ್ಬ್ ಅಳವಡಿಕೆಯಿಂದ ಉಳಿತಾಯವಾಗಿರುವ ಮಾಹಿತಿ ನಿರಂತರವಾಗಿ ಲಭ್ಯವಾಗಲಿದೆ. ಐದು ವರ್ಷಗಳ ಹಿಂದೆ ಬಿಬಿಎಂಪಿ ಉಪಮೇಯರ್‌ ಆಗಿದ್ದ ಎಸ್‌.ಹರೀಶ್‌ ಅವರು ಪ್ರಾಯೋಗಿಕವಾಗಿ ನಾಗಪುರ ವಾರ್ಡ್‌ನಲ್ಲಿ ಎಲ್‌ಇಡಿ ಬಲ್ಬ್ ಅಳವಡಿಕೆ ಯೋಜನೆ ಜಾರಿಗೊಳಿಸಿದ್ದರು. ಇದರಿಂದಾಗಿ ಶೇ.85ರಷ್ಟು ವಿದ್ಯುತ್‌ ಉಳಿತಾಯವಾಗುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕೆಲವೊಂದು ವಾರ್ಡ್‌ಗಳಲ್ಲಿಯೂ ಪಾಲಿಕೆ ಸದಸ್ಯರು ಎಲ್‌ಇಡಿ ಬಲ್ಬ್ ಅಳವಡಿಸಿಕೊಂಡಿದ್ದಾರೆ.

ಬಿಬಿಎಂಪಿ ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತೆ ನಗರದಲ್ಲಿ 5 ಲಕ್ಷ ಎಲ್‌ಇಡಿ ಬಲ್ಬ್ಗಳ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. ಅದರ ಹಿನ್ನೆಲೆಯಲ್ಲಿ ಕೆಲ ಖಾಸಗಿ ಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಿದ್ದು, ಯೋಜನೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. 
-ಜಿ.ಪದ್ಮಾವತಿ, ಮೇಯರ್‌

ಹಿಂದೆ ಪಾಲಿಕೆಯಲ್ಲಿ ಮೊದಲ ಬಾರಿ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಿ, ಶೇ.85ರಷ್ಟು ವಿದ್ಯುತ್‌ ಉಳಿತಾಯ ಮಾಡಿ ತೋರಿಸಲಾಗಿತ್ತು. ಇದೀಗ ನಗರದಾದ್ಯಂತ ಎಲ್‌ಇಡಿ ಅಳವಡಿಸಲು ನಿರ್ಧರಿಸಿರುವುದು ಸ್ವಾಗತಾರ್ಹ. 
-ಎಸ್‌. ಹರೀಶ್‌, ಮಾಜಿ ಉಪಮೇಯರ್‌

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next