Advertisement

ತಂಡಕ್ಕೆ ವಿಶ್ವಾಸ ತುಂಬುವವನೇ ನಾಯಕ; ರೂಪ್‌ ಕುಮಾರ್‌ ಸಾಹ

12:19 AM Nov 26, 2022 | Team Udayavani |

ಮಣಿಪಾಲ: ಯಶಸ್ವಿ ನಾಯಕರಾಗುವವರು ತಂಡದ ಸದಸ್ಯರಲ್ಲಿ ಆತ್ಮವಿಶ್ವಾಸವನ್ನು ತುಂಬಿಸುತ್ತಿರಬೇಕೆಂದು ಪಂಜಾಬ್‌ ಮತ್ತು ಸಿಂಧ್‌ ಬ್ಯಾಂಕ್‌ ಎಂಡಿ ಮತ್ತು ಸಿಇಒ ಸ್ವರೂಪ್‌ಕುಮಾರ್‌ ಸಾಹ ಹೇಳಿದರು.

Advertisement

ಮಣಿಪಾಲದ ಟಿ.ಎ.ಪೈ ಮ್ಯಾನೇಜ್ಮೆಂಟ್ ಇನ್‌ಸ್ಟಿಟ್ಯೂಟ್‌ (ಟ್ಯಾಪ್ಮಿ) ಶುಕ್ರವಾರ ಹೊಟೇಲ್‌ ವ್ಯಾಲಿವ್ಯೂ ಸಭಾಂಗಣದಲ್ಲಿ ಆಯೋಜಿಸಿದ ಟಿ.ಎ.ಪೈ ನಾಯಕತ್ವ ಉಪನ್ಯಾಸವನ್ನು (ವಿಷಯ: ಲೀಡರ್‌ಶಿಪ್‌ ಪ್ರ್ಯಾಕ್ಟಿಸಸ್‌ ಆ್ಯಂಡ್‌ ಲೆಸನ್ಸ್‌ ಫ್ರಮ್ ಲೈಫ್’) ನೀಡಿದರು.

ಕಾರ್ಯತಂಡದಲ್ಲಿ ಆತ್ಮವಿಶ್ವಾಸವನ್ನು ತುಂಬಿಸುವುದರ ಜತೆ ಅಧೀನ ವ್ಯಕ್ತಿಗಳಿಗೆ ಸಾಧನೆ ಮಾಡಲು ಅವಕಾಶಗಳನ್ನು ಕೊಡಬೇಕು. ಯಾವುದೇ ವೈಫ‌ಲ್ಯವಾದಾಗ ಅದರ ಹೊಣೆಗಾರಿಕೆಯನ್ನು ತಾನು ವಹಿಸಿಕೊಂಡು ಸಾಫ‌ಲ್ಯ ಕಂಡಾಗ ಅದರ ಕೀರ್ತಿಯನ್ನು ತಂಡಕ್ಕೆ ನೀಡುವಂತಿರಬೇಕು ಎಂದು ಸ್ವರೂಪ್‌ಕುಮಾರ್‌ ತಿಳಿಸಿದರು. ಇಸ್ರೋ ಮುಖ್ಯಸ್ಥರಾಗಿದ್ದ ಧವನ್‌ ಅವರು ಉಪಗ್ರಹ ವೈಫ‌ಲ್ಯಕ್ಕೆ ತಾನು ಜವಾಬ್ದಾರಿ ಎಂದು ಒಪ್ಪಿಕೊಂಡು, ಸಫ‌ಲವಾದಾಗ ತಂಡಕ್ಕೆ ಅದರ ಕೀರ್ತಿಯನ್ನು ನೀಡಿದರು ಎಂದು ಡಾ|ಅಬ್ದುಲ್‌ ಕಲಾಂ ಅವರ ಮಾತನ್ನು ಸ್ವರೂಪ್‌ಕುಮಾರ್‌ ಬೆಟ್ಟು ಮಾಡಿದರು.

ಟ್ಯಾಪ್ಮಿ ಸ್ಥಾಪಕ ಟಿ.ಎ.ಪೈಯವರು ಕೇಂದ್ರ ಸಚಿವರಾಗಿ, ಬ್ಯಾಂಕಿಂಗ್‌ ತಜ್ಞರಾಗಿ, ಸಹಕಾರಿ ಸಂಸ್ಥೆಗಳ ಸ್ಥಾಪಕರಾಗಿ, ನಿರ್ವಹಣ ಸಂಸ್ಥೆಗಳ ಸ್ಥಾಪಕರಾಗಿ ಅಮೂಲ್ಯ ಕೊಡುಗೆಗಳನ್ನು ನೀಡಿದವರು ಎಂದು ಸ್ವರೂಪ್‌ಕುಮಾರ್‌ ಬಣ್ಣಿಸಿದರು.

ಟ್ಯಾಪ್ಮಿ ನಿರ್ದೇಶಕ ಪ್ರೊ| ಮಧು ವೀರರಾಘವನ್‌ ಸ್ವಾಗತಿಸಿದರು. ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್‌ ಯು. ಪೈ ಉಪಸ್ಥಿತರಿದ್ದರು. ಸಿಂಡಿಕೇಟ್‌ ಬ್ಯಾಂಕ್‌ ಹಿಂದಿನ ಆಡಳಿತ ನಿರ್ದೇಶಕ, ಟ್ಯಾಪ್ಮಿ ಗೌರವ ಪ್ರಾಧ್ಯಾಪಕ ಮೃತ್ಯುಂಜಯ ಮಹಾಪಾತ್ರ ಪರಿಚಯಿಸಿದರು. ವಿತ್ತ ವಿಭಾಗದ ಪ್ರಾಧ್ಯಾಪಕ ಪ್ರೊ| ರಾಜೀವ್‌ ಶಾ ಕಾರ್ಯಕ್ರಮ ನಿರ್ವಹಿಸಿ ಡಾ| ಮೀರಾ ಅರಾನ್ಹ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next