Advertisement

ವರ್ಷದ ಕೊನೆಯ ತಿಂಗಳ ವಿಶೇಷ

03:20 PM Nov 28, 2020 | Adarsha |

2020ರ ಕೊನೆಯ ತಿಂಗಳು ಡಿಸೆಂಬರ್‌ಗೆ ಹೆಜ್ಜೆ ಹಾಕುತ್ತಿದ್ದೇವೆ. ಡಿಸೆಂಬರ್‌ ತಿಂಗಳಲ್ಲಿ 31 ದಿನಗಳಿದ್ದು ಪ್ರತಿಯೊಂದು ದಿನವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಹೆಚ್ಚು ಮಹತ್ವವನ್ನು ಪಡೆದಿದೆ. ಯಾಕೆಂದರೆ ಈ ತಿಂಗಳಲ್ಲಿ ಹಲವಾರು ಆಚರಣೆಗಳು ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ.

Advertisement

ಡಿಸೆಂಬರ್‌ 1ರಂದು ವಿಶ್ವ ಏಡ್ಸ್‌ ದಿನವಾಗಿ ಆಚರಿಸಲಾಗುತ್ತದೆ. 1984ರ ಅನಂತರ ಎಚ್‌ಐವಿ ಏಡ್ಸ್‌ನಿಂದಾಗಿ ಹೆಚ್ಚು ಜನ ಪ್ರಾಣ ಕಳೆದುಕೊಂಡರು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ಡಿಸೆಂಬರ್‌ 2 ಗುಲಾಮಗಿರಿ ನಿರ್ಮೂಲನೆ ದಿನಾಚರಣೆ. ಬೆದರಿಕೆ, ಹಿಂಸಾಚಾರ, ದಬ್ಟಾಳಿಕೆ, ಅಧಿಕಾರ ದುರುಪಯೋಗ ತಡೆಗಟ್ಟುವ ಸಲುವಾಗಿ ಡಿ. 2ರಂದು ಗುಲಾಮಗಿರಿ ನಿರ್ಮೂಲನೆ ದಿನವನ್ನು ಆಚರಿಸಲಾಗುತ್ತದೆ. 1949ರಲ್ಲಿ ವಿಶ್ವ ಸಂಸ್ಥೆಯಲ್ಲಿ ಈ ಘೋಷಣೆ ಮಾಡಲಾಯಿತು.

ಡಿಸೆಂಬರ್‌ 3 ಅಂಗವಿಕಲರ ದಿನ. ಅಂಗವಿಕಲರ ಬಗ್ಗೆ  ಕಾಳಜಿ ಹೊಂದುವ ನಿಟ್ಟಿನಲ್ಲಿ ಹಾಗೂ ಅವರನ್ನು ಯಾರೂ ಕೀಳಾಗಿ ಕಾಣದೆ ಪ್ರೋತ್ಸಾಹಿಸುವ ಸಲುವಾಗಿ 1992ರಲ್ಲಿ  ವಿಶ್ವಸಂಸ್ಥೆ ಇದನ್ನು ಘೋಷಿಸಿತ್ತು.

ಡಿಸೆಂಬರ್‌ 5 ಅಂತಾರಾಷ್ಟ್ರೀಯ ಸ್ವಯಂ ಸೇವಕರ ಹಾಗೂ ವಿಶ್ವ ಮಣ್ಣಿನ ದಿನಾಚರಣೆ. ಡಿಸೆಂಬರ್‌ ತಿಂಗಳ ಮೊದಲ ಶನಿವಾರದಂದು ಇವನ್ನು ಆಚರಿಸಲಾಗುತ್ತದೆ.

Advertisement

ಸ್ವಯಂ ಸೇವಕರಿಗೆ ಪ್ರೋತ್ಸಾಹ ಹಾಗೂ ಗೌರವ ನೀಡುವ ಉದ್ದೇಶದಿಂದ 1985ರಲ್ಲಿ ಯುನೈಟೆಡ್‌ ನೇಷನ್‌ನಲ್ಲಿ  ಅಂತಾರಾಷ್ಟ್ರೀಯ ಸ್ವಯಂ ಸೇವಕರ ದಿನವನ್ನು ಆಚರಿಸಲು ಆರಂಭವಾಯಿತು. ಬಳಿಕ ಈಗ ಇದನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ.

ಆಹಾರ ಮತ್ತು ಕೃಷಿ ಕಾರ್ಯಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯುನೈಟೆಡ್‌ ನೇಷನ್‌ 2013ರಿಂದ ಮಣ್ಣಿನ ದಿನವನ್ನು ಆಚರಿಸಿತ್ತು. ಮಣ್ಣಿನ ರಕ್ಷಣೆಗಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವದೆಲ್ಲೆಡೆ ಈ ದಿನವನ್ನು ಆಚರಿಸಲಾಗುತ್ತದೆ.

ಡಿಸೆಂಬರ್‌ 7ರಂದು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನಾಚರಣೆಯನ್ನು ಮಾಡಲಾಗುತ್ತದೆ. 1994ರಲ್ಲಿ ಐಸಿಎಒ (International Civil Aviation)ದ 50ನೇ ಸಂಭ್ರಮಾಚರಣೆಯ ಸಲುವಾಗಿ ಇದನ್ನು ಆಚರಿಸಲಾಗುತ್ತದೆ. ಇದು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಕುರಿತು ಜಾಗೃತಿ ಮೂಡಿಸುವ ದಿನವಾಗಿದೆ.

ಡಿಸೆಂಬರ್‌ 9 ಅಂತಾರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ದಿನಾಚರಣೆ. ಆರೋಗ್ಯ, ಶಿಕ್ಷಣ, ನ್ಯಾಯ, ಪ್ರಜಾಪ್ರಭುತ್ವದಲ್ಲಿ  ದೇಶದ ಅಭಿವೃದ್ಧಿಗೆ ತೊಡಕಾಗಿರುವ ಭ್ರಷ್ಟಾಚಾರ ನಿರ್ಮೂಲನೆಯೇ ಈ ದಿನದ ಉದ್ದೇಶ. ಜಗತ್ತಿನಾದ್ಯಂತ ಇಂದು ಭ್ರಷ್ಟಾಚಾರ ವ್ಯಾಪಿಸಿದ್ದು, ಇದಕ್ಕಾಗಿ ಸಮಾಜವನ್ನು ಜಾಗೃತಗೊಳಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಡಿಸೆಂಬರ್‌ 10 ಮಾನವ ಹಕ್ಕುಗಳ ದಿನಾಚರಣೆ. ಮೂಲಭೂತ ಮಾನವ ಹಕ್ಕುಗಳನ್ನು ಗೌರವಿಸುವುದರ ಜತೆಗೆ ಪ್ರತಿಯೊಬ್ಬರಿಗೂ ಸ್ವತಂತ್ರವಾಗಿ ಜೀವಿಸಲು ಅಧಿಕಾರ ನೀಡುವ ಉದ್ದೇಶದಿಂದ ಯುಎನ್‌ ಅಸೆಂಬ್ಲಿಯಲ್ಲಿ 1948ರಲ್ಲಿ ಈ ದಿನದ ಮಹತ್ವದ ಬಗ್ಗೆ ತಿಳಿಸಲಾಯಿತು. ಜತೆಗೆ ಜಾಗತಿಕವಾಗಿ ಈ ದಿನ ಆಚರಣೆಗೆ ಘೋಷಣೆ ಮಾಡಲಾಯಿತು.

ಡಿಸೆಂಬರ್‌ 11 ಅಂತಾರಾಷ್ಟ್ರೀಯ ಪರ್ವತ ದಿನ. ಪರ್ವತಗಳ ಮಹತ್ವ, ಸ್ವತ್ಛ ನೀರು, ಪರಿಸರ, ಆಹಾರ ಪೂರೈಕೆಯಲ್ಲಿ ಅವುಗಳ ಪಾತ್ರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಅವುಗಳ ಮಹತ್ವವನ್ನು ತಿಳಿಸುವ ಸಲುವಾಗಿ ಪ್ರತಿ ವರ್ಷ ಡಿ. 11ನ್ನು ಅಂತಾರಾಷ್ಟ್ರೀಯ ಪರ್ವತಗಳ ದಿನವಾಗಿ ಆಚರಿಸಲಾಗುತ್ತದೆ.

ಡಿಸೆಂಬರ್‌ 15 ಅಂತಾರಾಷ್ಟ್ರೀಯ ಚಹಾ ದಿನಾಚರಣೆ. ಚಹಾ ಎಲ್ಲರಿಗೂ ಪ್ರಿಯವಾದದ್ದು. ಸಣ್ಣ ಚಹಾ ಬೆಳೆಗಾರರನ್ನು ಹಾಗೂ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ  2005ರಿಂದ ಈ ದಿನವನ್ನು ಆಚರಿಸಲಾಗುತ್ತದೆ.

ಡಿಸೆಂಬರ್‌ 18 ಅಂತಾರಾಷ್ಟ್ರೀಯ ವಲಸಿಗರ ದಿನ. ವಲಸಿಗರು ಮತ್ತು ನಿರಾಶ್ರಿತರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ವಲಸಿಗರ ದಿನವನ್ನು ಆಚರಿಸಲಾಗುತ್ತದೆ.

ಡಿಸೆಂಬರ್‌ 19 ಗೋವಾ ಸ್ವತಂತ್ರ್ಯ ದಿನ. ಪೋರ್ಚುಗೀಸ್‌ ಗವರ್ನರ್‌ ಜನರಲ್‌ ವಾಸಲೋ ಡಾ ಸಿಲ್ವಾನ ವಶದಲ್ಲಿದ್ದ ಗೋವಾವನ್ನು ಭಾರತದ ಸೈನ್ಯ 1961 ಡಿ. 19ರಂದು  ವಶಪಡಿಸಿಕೊಂಡಿತ್ತು. ಇದರ ಸ್ಮರಣಾರ್ಥ ಗೋವಾ ಸ್ವತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಗೋವಾ ಇಂದು ಜಗತøಸಿದ್ಧ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ.

ಡಿಸೆಂಬರ್‌ 20 ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟು ದಿನ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಲು, ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ತಮ್ಮ ಬದ್ಧತೆ, ಗೌರವವನ್ನು ನೆನಪಿಸಲು, ಬಡತನ ನಿರ್ಮೂಲನೆಗೆ ಹೊಸ ಕ್ರಮಗಳನ್ನು ಉತ್ತೇಜಿಸಲು ಸುಸ್ಥಿರ ಅಭಿವೃದ್ಧಿಗೆ ಒಗ್ಗಟ್ಟನ್ನು ಉತ್ತೇಜಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಡಿಸೆಂಬರ್‌ 25 ಕ್ರಿಸಮಸ್‌ ಆಚರಣೆ. ಜಗತ್ತಿನಾದ್ಯಂತ ಡಿ. 25ರಂದು ಜೀಸಸ್‌ ಕ್ರಿಸ್ತನ ಜನ್ಮ ದಿನವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.

ಡಿಸೆಂಬರ್‌ 31 ಹೊಸ ವರ್ಷ ಸಂಭ್ರಮಾಚರಣೆ. ವರ್ಷದ ಕೊನೆಯ ದಿನವನ್ನು ವಿಶ್ವದೆಲ್ಲೆಡೆ ಸಂಭ್ರಮದಿಂದ ಆಚರಿಸಿ ಹೊಸ ವರ್ಷಕ್ಕೆ ಸ್ವಾಗತಕೋರಲಾಗುತ್ತದೆ. ವಿಶ್ವದೆಲ್ಲೆಡೆ ನೃತ್ಯ, ಸಂಗೀತ, ಸುಡುಮದ್ದು ಪ್ರದರ್ಶನ ನಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next